Advertisement

ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮೋದಿ: ಕಾಗೇರಿ

01:00 AM Mar 21, 2019 | Team Udayavani |

ಕುಂದಾಪುರ: ದೇಶದ ಏಕತೆ, ಸಮಗ್ರತೆ, ಅಖಂಡತೆ, ರಕ್ಷಣೆಗಾಗಿ ನರೇಂದ್ರ ಮೋದಿ ಅವರು ಮತ್ತೂಮ್ಮೆ ಪ್ರಧಾನಿಯಾಗಬೇಕು. ಇದೆಲ್ಲದರ ಜತೆಗೆ ಪ್ರಾಮಾಣಿಕ, ಭ್ರಷ್ಟಾಚಾರ ರಹಿತ ಆಡಳಿತ, ಜಾಗತಿಕ ಮಟ್ಟದಲ್ಲಿ ಭಾರತ ಸದಾ ಗೌರವದ ಸ್ಥಾನ ಪಡೆದಿರಲು ಮೋದಿ ಪ್ರಧಾನಿಯಾಗಲೇಬೇಕು ಎಂದು ಶಿರಸಿ ಶಾಸಕ ಕಾಗೇರಿ ವಿಶ್ವೇಶ್ವರ ಹೆಗಡೆ ಹೇಳಿದರು.

Advertisement

ಇಲ್ಲಿನ ಪಾರಿಜಾತ ಸಭಾಂಗಣದಲ್ಲಿ ಮೋದಿ ಸರಕಾರದ 5 ವರ್ಷಗಳ ಸಾಧನೆಯ ಒಳನೋಟ-ಪ್ರಬುದ್ಧರ ಗೋಷ್ಠಿಯಲ್ಲಿ ಮಾತನಾಡಿದರು.

ಮೋದಿ ಇನ್ನೊಮ್ಮೆ ಗೆದ್ದೇ ಗೆಲ್ಲುತ್ತಾರೆ. ಆದರೆ ಅಂತಹ ಅತಿಯಾದ ಆತ್ಮವಿಶ್ವಾಸ ಕಾರ್ಯಕರ್ತರಲ್ಲಿ ಇರಬಾರದು. ಹಾಗಾದಲ್ಲಿ ವಾಜಪೇಯಿ ಅವರ ಸರಕಾರಕ್ಕೆ ಒದಗಿದ ಸ್ಥಿತಿ ಬರಬಹುದು. ಆದ್ದರಿಂದ ನಿಮ್ಮ ವರ್ತುಲದಲ್ಲಿ ಇರುವ ಮತಗಳೂ ಬಿಜೆಪಿಗೆ ಬೀಳುವಂತೆ ಮಾಡಬೇಕು. ದೇಶಕ್ಕಾಗಿ ನಮ್ಮನ್ನು ನಾವು ಸಮರ್ಪಣಾ ಭಾವದಲ್ಲಿ ತೊಡಗಿಸಿಕೊಳ್ಳಬೇಕೆಂಬ ಭಾವ ಬಂದದ್ದು ಮೋದಿ ಸರಕಾರದಿಂದ ಎಂದರು.

ವಿದೇಶಗಳನ್ನು ತಿರುಗಿ ಭಾರತದ ಮೇಲೆ ದಾಳಿ ಮಾಡಿದ ಪಾಕಿಸ್ಥಾನಕ್ಕೆ ಉತ್ತರ ಕೊಟ್ಟ ಭಾರತದ ಧೈರ್ಯಕ್ಕೆ ಜಗತ್ತಿನ ಎಲ್ಲ ರಾಷ್ಟ್ರಗಳೂ ಬೆಂಬಲ ಕೊಡುವಂತೆ ಮಾಡಿದ್ದು ಮೋದಿ. ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ ಅಮೆರಿಕಾ ವೀಸಾ ನಿರಾಕರಿಸಿದರೂ ಈಗ ಕೆಂಪುಹಾಸಿನ ಸ್ವಾಗತ ನೀಡುತ್ತಿದೆ ಎಂದರೆ ಮೋದಿ ದೇಶದಲ್ಲಿ ಮಾಡಿದ ಆಡಳಿತಾತ್ಮಕ ಬದಲಾವಣೆ ಗಮನಿಸಬೇಕು. ರಿಮೋಟ್‌ ಕಂಟ್ರೋಲ್‌ ಆಗಿದ್ದ ಯುಪಿಎ ಪ್ರಧಾನಿ ವಿದೇಶಗಳಿಗೆ ಹೋದಾಗ ನಮ್ಮ ದೇಶದ ಕುರಿತು ಸದಭಿಪ್ರಾಯ ಮೂಡಿಸಲು ಸಾಧ್ಯವಾಗಲಿಲ್ಲ. ಸಾಲಗಾರ ದೇಶ, ಬಡವರ ದೇಶ, ಆರ್ಥಿಕ ಶಿಸ್ತಿಲ್ಲದ ದೇಶ ಎಂಬ ಹಣೆಪಟ್ಟಿಗಳಿದ್ದವು. ಆದರೆ ಸಾಧನೆಯನ್ನು ಮಾಡಿ ತೋರಿಸುವ ಮೂಲಕ ದೇಶದ ಹೆಸರನ್ನು ಎತ್ತರಕ್ಕೆ ಏರಿಸಿದ್ದು ಮೋದಿ ಎಂದರು.

ಬುದ್ಧಿವಂತರಾದವರು ವಿದೇಶಕ್ಕೆ ದುಡಿಯಲು ಹೋಗಬೇಕೆಂಬ ಪರಿಸ್ಥಿತಿ ತಂದಿಟ್ಟಿತ್ತು ಕಾಂಗ್ರೆಸ್‌. ತನ್ನ ಗಾಂಧಿ ವಂಶದವರ ಅಭಿವೃದ್ಧಿಗಷ್ಟೇ ಗಮನ ಕೊಟ್ಟಿತ್ತು. ಎಲ್ಲ ಯೋಜನೆಗಳಿಗೂ ಗಾಂಧಿ ಕುಟುಂಬದ ಹೆಸರೇ ಇಟ್ಟಿತ್ತು. ಸರಕಾರದ ಯೋಜನೆಗಳು ಮಂತ್ರಿಗಳ ಖಜಾನೆ ತುಂಬುತ್ತಿದ್ದವು ವಿನಾ ಬಡವರ ಮನೆ ತಲುಪುತ್ತಿರಲಿಲ್ಲ. ಇಂತಹ ಎಲ್ಲ ಅಪಸವ್ಯಗಳಿಗೆ ಮೋದಿ ಪೂರ್ಣವಿರಾಮ ಹಾಕಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಸ್ವಾರ್ಥ ಸಾಧನೆಯ ಒಡೆದು ಆಳುವ ನೀತಿಯ ಕಾಂಗ್ರೆಸ್‌ಗೆ ಈ ದೇಶ ಆಳುವ ಯೋಗ್ಯತೆ ಇಲ್ಲ ಎಂದರು.  
ಪುರಸಭೆ ಸದಸ್ಯ ಮೋಹನದಾಸ ಶೆಣೈ ವೇದಿಕೆಯಲ್ಲಿದ್ದರು. 

Advertisement

ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಂಕರ ಅಂಕದಕಟ್ಟೆ ಸ್ವಾಗತಿಸಿ, ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next