Advertisement

Narendra Modi:ಪ್ರಾಜೆಕ್ಟ್ ಟೈಗರ್‌ಗೆ ಐವತ್ತು ವರ್ಷ ಪೂರ್ಣ-ಇಂದು ಮೈಸೂರಿಗೆ ಪ್ರಧಾನಿ ಮೋದಿ

10:56 PM Apr 07, 2023 | Team Udayavani |

ಮೈಸೂರು: ದೇಶದಲ್ಲಿ ಹುಲಿ ಸಂರಕ್ಷಣೆಗಾಗಿ ಆರಂಭಿಸಲಾಗಿದ್ದ ಪ್ರಾಜೆಕ್ಟ್ ಟೈಗರ್‌ ಮತ್ತು ಬಂಡೀಪುರದ ಹುಲಿ ರಕ್ಷಿತಾರಣ್ಯಕ್ಕೆ 50 ವರ್ಷ ಪೂರೈಸಿದ್ದು, ಇದಕ್ಕಾಗಿ ಮೂರು ದಿನಗಳ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈಸೂರಿನಲ್ಲಿ ರವಿವಾರ ನಡೆಯಲಿರುವ ಪ್ರಮುಖ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗಿಯಾಗಲಿದ್ದು, ಹುಲಿ ಗಣತಿ ವರದಿ ಬಿಡುಗಡೆ, ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಸಫಾರಿ ನಡೆಸಲಿದ್ದಾರೆ.

Advertisement

ಶನಿವಾರ ರಾತ್ರಿ 8.40ಕ್ಕೆ ಮೋದಿ ಮೈಸೂರಿಗೆ ಆಗಮಿಸಲಿದ್ದಾರೆ. ರವಿವಾರ ಬೆಳಗ್ಗೆ 6.25ಕ್ಕೆ ಮೈಸೂರು ಹೆಲಿಪ್ಯಾಡ್‌ನಿಂದ ವಿಶೇಷ ಹೆಲಿಕಾಪ್ಟರ್‌ ಮೂಲಕ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಹೆಲಿಪ್ಯಾಡ್‌ಗೆ ತೆರಳಲಿದ್ದಾರೆ. ಬಳಿಕ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯ ಪ್ರದೇಶಕ್ಕೆ ರಸ್ತೆ ಮೂಲಕ ತೆರಳಿ, ಕಾಡಿನಲ್ಲಿ ಸಫಾರಿ ನಡೆಸಲಿದ್ದಾರೆ. ಅನಂತರ ಅರಣ್ಯ ಸಿಬಂದಿಯೊಂದಿಗೆ ಸಂವಾದ ನಡೆಸಲಿದ್ದಾರೆ.

ಬಳಿಕ ತೆಪ್ಪಕಾಡು, ಮಧುಮಲೈಗೆ ತೆರಳಿ ಆಸ್ಕರ್‌ ಪ್ರಶಸ್ತಿ ಮೂಲಕ ವಿಶ್ವದ ಗಮನ ಸೆಳೆದ ಎಲಿಫ್ಯಾಂಟ್‌ ವಿಸ್ಪರರ್ಸ್‌ ತಂಡವನ್ನು ಭೇಟಿ ಮಾಡಲಿದ್ಧಾರೆ. ಅನಂತರ ಹೆಲಿಕಾಪ್ಟರ್‌ ಮೂಲಕ 10.20ಕ್ಕೆ ಮತ್ತೆ ಮೈಸೂರಿಗೆ ಆಗಮಿಸಲಿ¨ªಾರೆ.

ಹುಲಿ ಗಣತಿ, ನಾಣ್ಯ ಬಿಡುಗಡೆ

ಬೆಳಗ್ಗೆ 10.30ಕ್ಕೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹುಲಿ ವರದಿ ಬಿಡುಗಡೆ ಮಾಡಲಿದ್ಧಾರೆ. ಇದೇ ಕಾರ್ಯಕ್ರಮದಲ್ಲಿ 50 ರೂ. ಮೌಲ್ಯದ ವಿಶೇಷ ನಾಣ್ಯವನ್ನೂ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 12.40ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ದಿಲ್ಲಿಗೆ ತೆರಳಲಿದ್ಧಾರೆ.

Advertisement

ಮೈಸೂರೇ ಆಯ್ಕೆ ಯಾಕೆ?

1973ರ ಎ. 1ರಂದು ದೇಶಾದ್ಯಂತ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪ್ರಾಜೆಕ್ಟ್ ಟೈಗರ್‌ ಅನ್ನು ಘೋಷಿಸಿದ್ದರು. ಅದೇ ವರ್ಷದ ನ. 17ರಂದು ಆಗಿನ ಸಿಎಂ ದೇವರಾಜ ಅರಸು ಅವರು ಬಂಡೀಪುರ ರಕ್ಷಿತಾರಣ್ಯ ಘೋಷಣೆ ಮಾಡಿದರು. ರಾಜ್ಯದ ಮೊದಲ ಹುಲಿ ರಕ್ಷಿತಾರಣ್ಯ ಎನ್ನುವ ಖ್ಯಾತಿಯೂ ಇದಕ್ಕೇ ಸಿಕ್ಕಿತು. ಆಗ ಇಲ್ಲಿ ಕೇವಲ 13 ಹುಲಿಗಳಿದ್ದು, ಈಗ ಅವುಗಳ ಸಂಖ್ಯೆ 175ಕ್ಕೆ ಏರಿಕೆಯಾಗಿದೆ. ಹೀಗಾಗಿ 50 ವರ್ಷದ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ಮೈಸೂರನ್ನೇ ಆಯ್ಕೆ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.

Advertisement

Udayavani is now on Telegram. Click here to join our channel and stay updated with the latest news.

Next