Advertisement
ಬುಧವಾರ ನರೇಂದ್ರ ಮೋದಿ ಅವರ ದಿಲ್ಲಿಯ ನಿವಾಸದಲ್ಲಿ ಎನ್‌ಡಿಎ ನಾಯಕ ಸಭೆ ನಡೆಯಿತು. ದೇಶದ ಒಳತಿಗಾಗಿ ಕೆಲಸ ಮಾಡುವ ಕುರಿತು ನಿರ್ಣಯವನ್ನು ಈ ವೇಳೆ ಅಂಗೀಕರಿಸಲಾಯಿತು. ಅಲ್ಲದೇ, ಸರ್ಕಾರ ರಚನೆ ಕುರಿತು 12 ಸ್ಥಾನ ಗೆದ್ದಿರುವ ಜೆಡಿಯು ಮತ್ತು 16 ಸ್ಥಾನ ಗೆದ್ದಿರುವ ಟಿಡಿಪಿ ನಾಯಕರು ತಮ್ಮ “ಬೆಂಬಲ ಪತ್ರ’ಗಳನ್ನು ನೀಡಿದ್ದಾರೆಂದು ತಿಳಿದು ಬಂದಿದೆ.
ಮಂಗಳವಾರ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ 234 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವು ಸರ್ಕಾರ ರಚಿಸುವ ದಾವೆ ಮಾಡಿತ್ತು. ಹಾಗಾಗಿ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿತ್ತು. ಆದರೆ, ಬುಧವಾರ ಎಲ್ಲ ಗೊಂದಲ ದೂರಾಗಿದ್ದು, ಎನ್‌ಡಿಎ 3ನೇ ಅವಧಿಗೆ ಸರ್ಕಾರ ರಚಿಸುವುದು ನಿಕ್ಕಿಯಾಗಿದೆ.
Related Articles
ಮೋದಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಎನ್‌ಡಿಎ ನಾಯಕರು ಬಡವರು, ಮಹಿಳೆಯರು, ಯುವಕರು, ರೈತರು ಮತ್ತು ಸಮಾಜದಲ್ಲಿ ಹಿಂದುಳಿದವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ನಿರ್ಣಯವನ್ನು ಕೈಗೊಂಡರು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕ್ವತದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ 2024ರ ಲೋಕಸಭೆ ಚುನಾವಣೆಯಲ್ಲಿ ಹೋರಾಡಿ, ಗೆದ್ದಿದ್ದೇವೆ. ಇದಕ್ಕಾಗಿ ಹೆಮ್ಮೆ ಪಡುತ್ತೇವೆ. ನಾವು ಎನ್‌ಡಿಎ ನಾಯಕರು ಎಲ್ಲರೂ ನರೇಂದ್ರ ಮೋದಿ ಅವರನ್ನು ಅವಿರೋಧವಾಗಿ ನಾಯಕನನ್ನಾಗಿ ಆಯ್ಕೆ ಮಾಡುತ್ತಿದ್ದೇವೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
Advertisement
ಎನ್‌ಡಿಎ ಯಾರ್ಯಾರು ಭಾಗಿಯಾಗಿದ್ದರು?ಟಿಡಿಪಿ ನಾಯಕ ನಾಯಕ ಚಂದ್ರಬಾಬು ನಾಯ್ಡು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮಾಜಿ ಸಿಎಂ ಕುಮಾರಸ್ವಾಮಿ, ಎಲ್‌ಜೆಪಿ(ಆರ್) ನಾಯಕ ಚಿರಾಗ್ ಪಾಸ್ವಾನ್, ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ 21 ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಇವರ ಜತೆಗೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್ ಭಾಗವಹಿಸಿದ್ದರು.