ಮೈಸೂರು: ರಾಜ್ಯದೆಲ್ಲೆಡೆ ಬಿಜೆಪಿಗೆ ಪೂರಕವಾದ ವಾತಾವರಣವಿದ್ದು, ಹೀಗಾಗಿ ಕರ್ನಾಟಕದಲ್ಲೂ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಣ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪರಿವರ್ತನಾ ಯಾತ್ರೆ ನಡೆದ ಸಂದರ್ಭದಲ್ಲಿ ಪ್ರವಾಸ ನಡೆಸಿದ ವೇಳೆ ಅನೇಕ ವಿಚಾರಗಳು ಗಮನಕ್ಕೆ ಬಂದಿದೆ. ಪಕ್ಷದ ನಾಯಕತ್ವ, ಸಿದ್ಧಾಂತದ ಜತೆಗೆ ಪಕ್ಷ ಉತ್ತಮ ಕಾರ್ಯಕರ್ತರನ್ನು ಒಳಗೊಂಡಿದೆ ಎಂಬ ನಾಲ್ಕು ಕಾರಣಕ್ಕೆ ರಾಜ್ಯದ ಜನರು ಬಿಜೆಪಿಯನ್ನು ಒಪ್ಪಿದ್ದಾರೆ.
ಜತೆಗೆ ಈ ಬಾರಿಯ ಚುನಾವಣಾ ಪ್ರಚಾರ ಕೈಗೊಂಡ ಕಡೆಗಳಲ್ಲಿ ಬಿಜೆಪಿಗೆ ಪೂರಕ ವಾತಾವರಣ ಇರುವುದು ಕಂಡು ಬಂದಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಬೇಕೆಂದು ಜನರು ನಿಶ್ಚಯಿಸಿದ್ದಾರೆ. ಶಕ್ತಿಶಾಲಿ ಮತ್ತು ಸಮೃದ್ಧ ಭಾರತ ನಿರ್ಮಾಣ ಪ್ರಧಾನಿ ನರೇಂದ್ರಮೋದಿ ಕನಸಾಗಿದ್ದು, ಎಲ್ಲಾ ವರ್ಗದ ಜನರಿಗಾಗಿ ಸಾಕಷ್ಟು ಯೋಜನೆ ಜಾರಿಗೊಳಿಸಿದ್ದಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಜಾತಿ ಜಾತಿಯನ್ನು ಎತ್ತಿಕಟ್ಟುವ, ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದು, ಈಗಾಗಲೇ ಲಿಂಗಾಯತ, ವೀರಶೈವ ಧರ್ಮದಲ್ಲಿ ಬಿರುಕು ಮೂಡಿಸಿದ್ದಾರೆ. ಜತೆಗೆ ಎಸ್‌ಡಿಪಿಐನಂತಹ ಆಂತಕವಾದಿ ಸಂಘಟನೆಗೆ ಮನ್ನಣೆ ನೀಡಲಾಗುತ್ತಿದೆ. ಆದರೆ ಬಿಜೆಪಿಯ ಉದ್ದೇಶ ಕೇವಲ ಅಭಿವೃದ್ಧಿ ಎಂಬುದಾಗಿದೆ.
ಕರ್ನಾಟಕದ ಈ ಬಾರಿಯ ಚುನಾವಣೆ ಫಲಿತಾಂಶ ಮಧ್ಯಪ್ರದೇಶದ ಮೇಲೆ ಪರಿಣಾಮ ಬೀರುವುದಿಲ್ಲ, ಇಲ್ಲಿನ ಫಲಿತಾಂಶ ರಾಜ್ಯಕ್ಕೆ ಮಾತ್ರ ಸಮೀತವಾಗಿದೆ. ದೇಶದಲ್ಲಿ ಕರ್ನಾಟಕ, ಪಂಜಾಬ್ ಮತ್ತು ಪುದುಚೇರಿಯಲ್ಲಿ ಮಾತ್ರ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿದ್ದು, ಈ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲಿದೆ ಎಂದು ಹೇಳಿದರು.
ಅಪ್ರಬುದ್ಧದ ಹೇಳಿಕೆ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನೇ ಪ್ರಧಾನಿ ಆಗುತ್ತೇನೆ ಎಂಬ ರಾಹುಲ್ ಗಾಂಧಿ ಹೇಳಿಕೆ ಅಪ್ರಬುದ್ಧವಾದ ಹೇಳಿಕೆಯಾಗಿದೆ. ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಯಾವುದೇ ಬೆಂಬಲವಿಲ್ಲದಿದ್ದರೂ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಬಂದರೆ ನಾನೇ ಪ್ರಧಾನಿ ಆಗುತ್ತೇನೆ ಎಂದು ಹೇಳುತ್ತಿದ್ದಾರೆ.
ಇದು ಅಪ್ರಬುದ್ಧ ಹೇಳಿಕೆಯಾಗಿದ್ದು, ಅವರು ಮಾಡುತ್ತಿರುವ ವೋಟ್ ಬ್ಯಾಂಕ್ ರಾಜಕೀಯವನ್ನು ನಂಬಿದಂತೆ ಇದೆ ಎಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ ಸಿಂಹ, ನಗರ ಬಿಜೆಪಿ ಅಧ್ಯಕ್ಷ ಡಾ.ಬಿ.ಎಚ್.ಮಂಜುನಾಥ್, ಮುಖಂಡರಾದ ಮೈ.ವಿ.ರವಿಶಂಕರ್, ಮಹೇಶ್ ಹಾಜರಿದ್ದರು.