Advertisement
ಸಮಾವೇಶಕ್ಕೆ ಈಗಾಗಲೇ 30 ಅಡಿ ಎತ್ತರ ಹಾಗೂ 60 ಅಡಿ ಅಗಲದ ಪ್ರಧಾನ ವೇದಿಕೆ ನಿರ್ಮಿಸಲಾಗಿದೆ. ಈ ವೇದಿಕೆ ಪಕ್ಕದಲ್ಲಿ ಪ್ರಧಾನ ಮಂತ್ರಿಯವರ ತಾತ್ಕಾಲಿಕ ಕಚೇರಿಯನ್ನು ವ್ಯವಸ್ಥೆಗೊಳಿಸಲಾಗಿದೆ. ವೇದಿಕೆಯ ಕೆಳಗೆ ಬಲ ಭಾಗದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಇನ್ನೊಂದು ವೇದಿಕೆ ನಿರ್ಮಿಸಲಾಗಿದ್ದು, ಅಲ್ಲಿ ಸಂಜೆ 4 ಗಂಟೆಯಿಂದ ಸುಮಾರು ಒಂದು ತಾಸು ದೇಶಭಕ್ತಿ ಗಾಯನ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಗಮನಕ್ಕೂ ಮೊದಲು ಪಕ್ಷದ ಪ್ರಮುಖರು ಸಭೆಯನ್ನುದ್ದೇಶಿಸಿ ಮಾತನಾಡುವರು.
ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಜನರು ಭಾಗವಹಿಸುವ ನಿರೀಕ್ಷೆಯನ್ನು ಬಿಜೆಪಿ ಹೊಂದಿದೆ. ಸುಮಾರು 50,000ಕ್ಕೂ ಅಧಿಕ ಕುರ್ಚಿಗಳನ್ನು ಹಾಕಲಾಗಿದೆ. ಫುಟ್ಬಾಲ್ ಮೈದಾನದಿಂದ ಆರಂಭವಾಗಿ ಎ.ಬಿ. ಶೆಟ್ಟಿ ವೃತ್ತದ ಬಳಿಯಿರುವ ಕೇಂದ್ರ ಮೈದಾನದ ಪ್ರಧಾನ ಪ್ರವೇಶ ದ್ವಾರದವರೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಿಭಾಗಗಳನ್ನು ನಿರ್ಮಿಸಲಾಗಿದೆ. ಅತೀ ಗಣ್ಯರು, ಗಣ್ಯರು, ಮಹಿಳೆಯರಿಗೆ ಪ್ರತ್ಯೇಕ ಆಸನಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಕಾರ್ಯಕರ್ತರು ಸಂಜೆ 4.30ರೊಳಗೆ ಮೈದಾನದೊಳಗೆ ಬಂದು ಆಸೀನರಾಗಬೇಕು. ಬಾಯಾರಿಕೆ ತಣಿಸಲು 50,000ಕ್ಕೂ ಅಧಿಕ ಮಜ್ಜಿಗೆ ಹಾಗೂ 50,000ಕ್ಕೂ ಅಧಿಕ ನೀರಿನ ಪ್ಯಾಕೆಟ್ ಗಳನ್ನು ವ್ಯವಸ್ಥೆಗೊಳಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
Related Articles
ಮೋದಿಯವರ ಭಾಷಣ ಆಲಿಸಲು ಮೈದಾನದ ಆರು ಕಡೆ ಎಲ್.ಸಿ.ಡಿ. ಪರದೆಗಳನ್ನು ಅಳವಡಿಸಲಾಗಿದೆ. ಸಂಜೆಯ ವೇಳೆಗೆ ಕಾರ್ಯಕ್ರಮ ನಡೆಯುವ ಹಿನ್ನಲೆಯಲ್ಲಿ ಮೈದಾನದಲ್ಲಿ ಎಲ್‌ಇಡಿ ದೀಪಗಳನ್ನು ಅಲ್ಲಲ್ಲಿ ಅಳವಡಿಸಲಾಗಿದೆ. ಮೈದಾನಿನ ಪಕ್ಕದಲ್ಲಿರುವ ಮರಗಳನ್ನು ಕೂಡ ವಿದ್ಯು ದ್ದೀಪಗಳಿಂದ ಅಲಂಕರಿಸಲಾಗಿದೆ.
Advertisement
ವಾಹನ ನಿಲುಗಡೆಗೆ ವ್ಯವಸ್ಥೆಸಭೆಯಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಿಂದ ಆಗಮಿಸುವ ಕಾರ್ಯಕರ್ತರ ವಾಹನಗಳ ನಿಲುಗಡೆಗೆ ಈಗಾಗಲೇ ತಾಣಗಳನ್ನು ಗುರುತಿಸಲಾಗಿದೆ. ಮಧ್ಯಾಹ್ನ 3 ಗಂಟೆಯ ಬಳಿಕ ನಗರದೊಳಗೆ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಮೋದಿಯವರು ಮೈದಾನದಿಂದ ನಿರ್ಗಮಿಸುವವರೆಗೂ ಇದು ಜಾರಿಯಲ್ಲಿರುತ್ತದೆ. ಮೈದಾನ ಸುತ್ತ ಬಿಗಿ ಭದ್ರತೆ
ಕೇಂದ್ರ ಮೈದಾನ ಸುತ್ತ ಶುಕ್ರವಾರ ಸಂಜೆಯಿಂದಲೇ ಪೊಲೀಸ್ ಕಾವಲು ಹಾಕಲಾಗಿದ್ದು, ಮೈದಾನದೊಳಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರಧಾನಿಯವರ ವಿಶೇಷ ಭದ್ರತಾ ಪಡೆಯವರು ಮೈದಾನದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದಾರೆ. ಮೈದಾನದ ಪಕ್ಕದಲ್ಲಿರುವ ಪುರಭವನದೊಳಗೆ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರಿಗೆ ತಂಗಲು ವ್ಯವಸ್ಥೆಗೊಳಿಸಲಾಗಿದೆ. ವಿಮಾನ ನಿಲ್ದಾಣದಿಂದ ಕೇಂದ್ರ ಮೈದಾನದವರೆಗೆ ಭದ್ರತೆಗೆ ನಿಯೋಜನೆಗೊಂಡಿರುವ ಪೊಲೀಸರ ರೋಲ್ ಕಾಲ್ ನಡೆಸಿ ಸೂಕ್ತ ನಿರ್ದೇಶಗಳನ್ನು ನೀಡಲಾಗಿದೆ. ಪ್ರಮುಖರಿಂದ ಪರಿಶೀಲನೆ
ಬಿಜೆಪಿ ಕೇಂದ್ರ ಸಮಿತಿಯಿಂದ ಮಂಗಳೂರಿಗೆ ಚುನಾವಣ ಪ್ರಚಾರ ಉಸ್ತುವಾರಿ ನಿಯೋಜನೆಗೊಂಡಿರುವ ಉತ್ತರ ಪ್ರದೇಶದ ಸಚಿವ ಮಹೇಂದ್ರ ಸಿಂಗ್, ಸಂಸದ ನಳಿನ್ ಕುಮಾರ್ ಕಟೀಲು ಸಹಿತ ಪಕ್ಷದ ಪ್ರಮುಖರು ಕೇಂದ್ರ ಮೈದಾನದಲ್ಲಿ ಸಭಾ ವ್ಯವಸ್ಥೆಗಳ ಪೂರ್ವ ತಯಾರಿಗಳನ್ನು ವೀಕ್ಷಿಸಿದರು. 7.45ಕ್ಕೆ ವಾಪಸ್: ಮೋದಿ ಅವರು ಸಂಜೆ ಪ್ರಚಾರ ಕಾರ್ಯಕ್ರಮ ಮುಗಿಸಿ ರಾತ್ರಿ 7.45ಕ್ಕೆ ವಾಪಸಾಗಲಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣದಿಂದ ನೆಹರೂ ಮೈದಾನಕ್ಕೆ ಬರುವ ಮತ್ತು ವಾಪಸಾಗುವ ಸಂದರ್ಭದಲ್ಲಿ (ವಿಮಾನ ನಿಲ್ದಾಣ ರಸ್ತೆ- ಕೆಪಿಟಿ- ಬಿಜೈ ಬಟ್ಟಗುಡ್ಡ- ಕದ್ರಿ ಕಂಬಳ ರಸ್ತೆ- ಬಂಟ್ಸ್ ಹಾಸ್ಟೆಲ್ ಜಂಕ್ಷನ್- ಜ್ಯೋತಿ ಜಂಕ್ಷನ್- ಹಂಪನ ಕಟ್ಟೆ ರಸ್ತೆ) ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಈ ರಸ್ತೆಯ ಎರಡೂ ಬದಿ ಬೆಳಗ್ಗೆ 8ರಿಂದ ರಾತ್ರಿ 9 ಗಂಟೆವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ರಿಹರ್ಸಲ್: ಈ ಸಂಬಂಧ ಮಂಗಳೂರು ವಿಮಾನ ನಿಲ್ದಾಣದಿಂದ ಕೆಪಿಟಿವರೆಗಿನ ಏರ್‌ಪೋರ್ಟ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಪೊಲೀಸರು ರಿಹರ್ಸಲ್ ನಡೆಸಿದರು. 25ಕ್ಕೂ ಅಧಿಕ ಪೊಲೀಸ್ ವಾಹನಗಳು ಮತ್ತು ಆ್ಯಂಬುಲೆನ್ಸ್ ಇದರಲ್ಲಿ ಭಾಗವಹಿಸಿದ್ದವು. ಎಸ್‌ಪಿಜಿ ತಂಡ ಮತ್ತು ಇತರ ಭದ್ರತಾ ಪೊಲೀಸರು ಶುಕ್ರವಾರವೇ ಆಗಮಿಸಿದ್ದು. ವ್ಯಾಪಕ ಭದ್ರತೆ ಮತ್ತು ಕಣ್ಗಾವಲು ವ್ಯವಸ್ಥೆ ಕೈಗೊಂಡಿದ್ದಾರೆ. ವಿಮಾನ ನಿಲ್ದಾಣ ಆವರಣದ ಪಾರ್ಕಿಂಗ್‌ನಲ್ಲಿದ್ದ ಅನಧಿಕೃತ ವಾಹನಗಳನ್ನು ತೆರವುಗೊಳಿಸಲಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್
ಪ್ರಧಾನಿ ನರೇಂದ್ರ ಮೋದಿ ಶನಿವಾರ ಮಂಗಳೂರಿಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನ ಪೊಲೀಸರು, ಚುನಾವಣ ಕರ್ತವ್ಯಕ್ಕಾಗಿ ನಿಯೋಜನೆಗೊಂಡಿರುವ ಹೆಚ್ಚುವರಿ ಪೊಲೀಸರು ಮತ್ತು ಅರೆ ಸೈನಿಕ ಪಡೆಯ ಹೊರತಾಗಿ 250ರಷ್ಟು ಹೆಚ್ಚುವರಿ ಪೊಲೀಸರನ್ನು ಹೊರ ಜಿಲ್ಲೆಗಳಿಂದ ಕರೆಸಲಾಗಿದೆ. ಅಲ್ಲದೆ ವಿವಿಐಪಿ ಭದ್ರತೆಗಾಗಿ ಎಸ್.ಪಿ.ಜಿ. ತಂಡ ಆಗಮಿಸಿದೆ. ವಿಶೇಷವಾಗಿ ಪಕ್ಕದ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಿಂದ ಸುಮಾರು 250 ಮಂದಿ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.