ವಿಶೇಷ ವರದಿ
ನರೇಗಲ್ಲ: ಗ್ರಾಪಂಗಳ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದ ಮೇಲೆ ಇನ್ನಷ್ಟು ನಿಗಾವಹಿಸಲು ರಾಜ್ಯ ಸರ್ಕಾರ ಕಳೆದ ಜೂ. 11 ರಂದು ಎಲ್ಲ ಗ್ರಾಪಂಗಳಲ್ಲಿ ಮಹತ್ವದ ಹೆಜ್ಜೆ ಇರಿಸಿತ್ತು. ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲು ಗ್ರಾಪಂ ಮಟ್ಟದಲ್ಲಿ ಸಮಿತಿ (ಕೆಡಿಪಿ) ರಚಿಸುವ ಹೊಸ ಪದ್ಧತಿ ಜಾರಿಗೊಳಿಸಿತ್ತು.
ಆದರೆ, ತಾಲೂಕಿನ ಗ್ರಾಪಂಗಳಲ್ಲಿ ನಡೆಯಬೇಕಾದ ಕೆಡಿಪಿ ಸಭೆ ಆದೇಶಕ್ಕೆ ಈಗ ಉಲ್ಲಂಘನೆಯಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಗ್ರಾಪಂ ಮಟ್ಟದ ಅ ಧಿಕಾರಿಗಳು ಪ್ರತಿಯೊಂದು ವಿಷಯವನ್ನು ವಿವರವಾಗಿ ಓದಿ ಹೇಳಬೇಕಿದೆ. ಆದರೆ ಅವರು ತಾಂತ್ರಿಕ ತೊಂದರೆ ಹೇಳುತ್ತ ಕಾಲಹರಣ ಮಾಡುತ್ತಿರುವವರಿಗೆ ಇದರಿಂದ ತೊಂದರೆಯಾಗಬಹದು ಎಂದು ನಿರಾಶಕ್ತಿಯ ಜತೆಗೆ ನಿಷ್ಕಾಳಜಿ ತೋರುತ್ತಿರುವುದರಿಂದ ಗ್ರಾಪಂ ಮಟ್ಟದ ಕೆಡಿಪಿ ಸಭೆಗಳು ನಡೆಯುವುದು ವಿರಳವಾಗಿದೆ ಎನ್ನುವುದು ಸಾರ್ವಜನಿಕರ ಮಾತು.
ತಾಲೂಕು ಮಟ್ಟದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಅಸ್ತಿತ್ವದಲ್ಲಿರುವ ಕೆಡಿಪಿ ಸಮಿತಿ ರೀತಿಯಲ್ಲೇ ಗ್ರಾಮ ಮಟ್ಟದಲ್ಲಿಯೂ ಗ್ರಾ.ಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಗ್ರಾಮ ಮಟ್ಟದ ಕೆಡಿಪಿ ಸಮಿತಿ ರಚನೆಗೆ ಸೂಚಿಸಲಾಗಿತ್ತು. ಇದರ ಉದ್ದೇಶ ಕೇಂದ್ರ-ರಾಜ್ಯ ಸರ್ಕಾರದಿಂದ ಅಭಿವೃದ್ಧಿ ಕಾರ್ಯಕ್ಕೆ ಮಂಜೂರಾಗುವ ಅನುದಾನ ಸದ್ಬಳಕೆ ಚರ್ಚೆ, ತೀರ್ಮಾನ ಕೈಗೊಳ್ಳುವ ಮಹತ್ವದ ಅಧಿ ಕಾರ, ಈ ಸಭೆಗೆ ಗ್ರಾಪಂ ಮಟ್ಟದ ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಇಲಾಖೆವಾರು ಪ್ರಗತಿ ಕಾರ್ಯಕ್ರಮದ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕೆನ್ನುವುದು ಇದರ ಮೂಲ ಉದ್ದೇಶ ಇಟ್ಟುಕೊಂಡು ಸರ್ಕಾರದ ಪದ ನಿಮಿತ್ತ ಜಂಟಿ ಕಾರ್ಯದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ನಿದೇರ್ಶಕರು 2019 ಜೂ.11ರಂದು ಆದೇಶ ಹೊರಡಿಸಿದೆ.
ಕಾಟಾಚಾರಕ್ಕಾಗಿ ಸಭೆ: ಇದರಲ್ಲಿ 26 ಇಲಾಖೆಗಳು ಸಮಿತಿ ವ್ಯಾಪ್ತಿಗೆ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆ 20 ಅಂಶಗಳ ಕಾರ್ಯಕ್ರಮ ಸಂಬಂಧ ಸರ್ಕಾರ ರೂಪಿಸಿರುವ ನಿಯಮಾವಳಿಗಳ ಅನ್ವಯ ಗ್ರಾಪಂ ಕೆಡಿಪಿ ಸಭೆಯು ಅನಿಷ್ಠಾನಗೊಳ್ಳಬೇಕಾಗಿದೆ. ಈ ಸಭೆಗೆ ಹೋಬಳಿ, ಗ್ರಾಮ ಮಟ್ಟದ ಅಧಿ ಕಾರಿಗಳು, ಸಿಬ್ಬಂದಿ, ಕೆಡಿಪಿ ಸಭೆಗೆ ಹಾಜರಾಗಬೇಕಾಗಿರುವುದು ಕಡ್ಡಾಯ. ಸಭೆಯು ವರ್ಷದ ಏಪ್ರಿಲ್, ಜುಲೈ, ಅಕ್ಟೋಬರ್, ಡಿಸೆಂಬರ್ ಮೊದಲ ವಾರದಲ್ಲಿ ಕಡ್ಡಾಯವಾಗಿ ನಡೆಯಬೇಕೆನ್ನುವ ಆದೇಶವಿದ್ದರೂ ತಾಲೂಕಿನ ಕೆಲವೇ ಬೆರಳೆಣಿಕೆಯ ಗ್ರಾಪಂಗಳು ಕಾಟಾಚಾರಕ್ಕೆ ಎನ್ನುವಂತೆ ಕೆಡಿಪಿ ಸಭೆ ಮಾಡಿ ಮುಗಿಸಿದ್ದಾರೆ ಎನ್ನುವುದು ಕೆಲವು ಗ್ರಾಪಂ ಸದಸ್ಯರ ಆರೋಪ.
ಆದೇಶಕ್ಕೆ ಕ್ಯಾರೆ ಇಲ್ಲ: ರೋಣ ತಾಲೂಕಿನಲ್ಲಿ ಒಟ್ಟು 35 ಗ್ರಾಪಂಗಳಿವೆ. ಜಿಲ್ಲೆಯಲ್ಲಿಯೇ ಹೆಚ್ಚು ಗ್ರಾಪಂ ಹೊಂದಿದೆಯಾದರೂ, ತಾಪಂ ಅಧಿಕಾರಿಗಳು ಅಕ್ಟೋಬರ್ ಮೊದಲ ವಾರದಲ್ಲಿ ಕೆಡಿಪಿ ಸಭೆ ನಡೆಸಲು ಆದೇಶ ನೀಡಿದ್ದರೂ ಕೇವಲ 7 ಗ್ರಾಪಂಗಳು ಮಾತ್ರ ಸಭೆ ನಡೆಸಿವೆ. ಇನ್ನುಳಿದ 28 ಗ್ರಾಪಂಗಳು ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದಿರುವುದು ದುರಂತ.