ನರೇಗಲ್ಲ: ಪಟ್ಟಣದಲ್ಲಿ ದಶಕಗಳ ಹಿಂದೆ ನಿರ್ಮಿಸಿರುವ ಎಪಿಎಂಸಿಯ ಅಭಿವೃದ್ಧಿ ಹಾಗೂ ಇಲ್ಲಿನ ವಹಿವಾಟಿನ ಕುರಿತು ಸ್ಥಳೀಯ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದು ಈ ಭಾಗದ ರೈತರಿಗೆ ನೋವಿನ ಸಂಗತಿಯಾಗಿದೆ. ನರೇಗಲ್ಲ ಹೋಬಳಿ ವ್ಯಾಪ್ತಿಯ ಹಳ್ಳಿಗಳು ಹಾಗೂ ಗದಗ, ಯಲಬುರ್ಗಾ ತಾಲೂಕಿನ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟಕ್ಕಾಗಿ ಸದ್ಯ ಗದಗ, ಕೊಪ್ಪಳ ಕೃಷಿ ಉತ್ಪನ ಮಾರುಕಟ್ಟೆ ಸೇರಿದಂತೆ ಹತ್ತು ಹಲವಾರು ನಗರಗಳಿಗೆ ತೆರಳುತ್ತಿದ್ದಾರೆ. ಪಟ್ಟಣದಲ್ಲಿ ಎಪಿಎಂಸಿ ನಿರ್ಮಾಣಗೊಂಡು ದಶಕಗಳು ಕಳೆದರೂ ಎಲ್ಲಿ ಒಂದು ನಯಾಪೈಸೆ ವ್ಯಾಪಾರ, ವಹಿವಾಟು ನಡೆದಿಲ್ಲ. ಇದಕ್ಕೆ ಎಪಿಎಂಸಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ರಣವಾಗಿದೆ.
ಇವರ ಅಸಡ್ಡೆ ಭಾವನೆಯಿಂದ ಇಲ್ಲಿ ಮಳಿಗೆಗಳನ್ನು ನಿರ್ಮಾಣ
ಮಾಡಲು ಸಾಧ್ಯವಾಗುತ್ತಿಲ್ಲ. ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡುವುದಕ್ಕಾಗಿ ಎಲ್ಲೆಂದರಲ್ಲಿ ತಿರುಗಾಡುವ ಬದಲಿಗೆ ನರೇಗಲ್ಲನ ಉಪ ಕೃಷಿ ಉತ್ಪನ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಖರೀದಿ ಮಾಡಲು ಪ್ರಾರಂಭಿಸಿದರೆ ರೈತರು ಅಲೆದಾಟ ತಪ್ಪಿಸಬಹುದು. ರೈತರು ಸಿಕ್ಕಸಿಕ್ಕ ದಲ್ಲಾಳಿಗಳಿಗೆ ಕಡಿಮೆ ಬೆಲೆಗಳಲ್ಲಿ ಬೆಳೆಗಳನ್ನು ಮಾರಾಟ ಮಾಡುತ್ತಿದ್ದಾರೆ.
ನರೇಗಲ್ಲ ಪಟ್ಟಣದ ಜಕ್ಕಲಿ ರಸ್ತೆಯಲ್ಲಿರುವ ಎಪಿಎಂಸಿ ಉಪ ಕೃಷಿ ಉತ್ಪನ ಮಾರುಕಟ್ಟೆಯಲ್ಲಿ ಸದ್ಯ ಯಾವುದೇ ಮೂಲ ಸೌಲಭ್ಯಗಳು ಹಾಗೂ ಭದ್ರತೆ ಇಲ್ಲದಿರುವುದರಿಂದ ಕಟ್ಟಡಗಳನ್ನು ನಿರ್ಮಿಸಿಕೊಂಡು ವ್ಯಾಪಾರ ಅಥವಾ ವಹಿವಾಟು ನಡೆಸುವುದಕ್ಕೆ ಸಾಧ್ಯವಿಲ್ಲ. ಇದಕ್ಕೆ ಪರ್ಯಾಯವಾಗಿ ರೈತರಿಗೆ ಯಾವುದೇ ತೊಂದರೆಯಾಗದಂತೆ ನಾವು ಹಳೆಯ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಅಲ್ಲದೇ ಎಪಿಎಂಸಿಗೆ ಪ್ರತಿ ವರ್ಷ ನೀಡಬೇಕಾದ ಹಣವನ್ನು ಕಟ್ಟುತ್ತಿದೇವೆ. ನಾವುಗಳು ಕೃಷಿ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ಸ್ಥಾಪಿಸಬೇಕಾದರೆ ಎಪಿಎಂಸಿ ಇಲಾಖೆ ವತಿಯಿಂದ ಮೊದಲು ಗೋದಾಮುಗಳನ್ನು ನಿರ್ಮಿಸಿ ಕಾಳುಕಡಿಗಳನ್ನು ಸಂಗ್ರಹ ಮಾಡುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎನ್ನುತ್ತಾರೆ ಜಾಗ ಖರೀದಿಸಿದ ವ್ಯಾಪಾರಸ್ಥರು.
ನರೇಗಲ್ಲ ಪಟ್ಟಣದಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಿಸಿದರೆ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಕೂಡಲೇ ಜನಪ್ರತಿನಿಧಿಗಳು, ಎಪಿಎಂಸಿ ಜನಪ್ರತಿನಿಧಿಗಳು ಹಾಗೂ ಎಪಿಎಂಸಿ ಅಧಿಕಾರಿಗಳು ಇಲ್ಲಿನ ಉಪ ಕೃಷಿ ಉತ್ಪನ ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಅಂಗಡಿಗಳನ್ನು ನಿರ್ಮಿಸಿದರೆ ದೊಡ್ಡ ಪ್ರಮಾಣದ ಉಳಿತಾಯವಾಗುತ್ತದೆ.
ಪ್ರದೀಪ ಸಂಗನಾಳಮಠ,
ರೈತ
ಕಳೆದ ಮೂರು ವರ್ಷಗಳಿಂದ ಎಪಿಎಂಸಿಯಲ್ಲಿ ಈಗಾಗಲೇ ಒಂದು ಕೋಟಿ ಹತ್ತು ಲಕ್ಷ ರೂ. ಗಳನ್ನು ಎಪಿಎಂಸಿ ನಿಗಮ ಹಾಗೂ ಕೇಂದ್ರ ಸರ್ಕಾರದ ಅನುದಾನವನ್ನು ಬಳಕೆ ಮಾಡಿಕೊಂಡು ತಡೆಗೋಡೆ ಹಾಗೂ ಸಿಸಿ ರಸ್ತೆ, ಮುಚ್ಚು ಹರಾಜು ಮಾರುಕಟ್ಟೆ ಅಲ್ಲದೇ ಕಚೇರಿಗೆ ವಿದ್ಯುತ್ ಸರಬರಾಜು ಮತ್ತು ಸದ್ಯ ಗೈಟ್ ಮಾಡಲಾಗಿದೆ. ಅಲ್ಲದೇ ವ್ಯಾಪಾರಸ್ಥರನ್ನು ಕರೆದು ಸಭೆಯನ್ನು ಮಾಡಿ ವ್ಯಾಪಾರ ಮಳಿಗೆಯನ್ನು ನಿರ್ಮಿಸಿಕೊಂಡು ತಾವು ವಹಿವಾಟು ಮಾಡಬೇಕು. ತಮ್ಮಗೆ ಹೆಚ್ಚಿನ ಅನುಕೂಲ ಮಾಡಲು ನಾವು ಸಿದ್ಧರಾಗಿದ್ದೇವೆ.
ನಿಂಗನಗೌಡ ಲಕ್ಕನಗೌಡ್ರ
ಎಪಿಎಂಸಿ ಉಪಾಧ್ಯಕ್ಷ
ನರೇಗಲ್ಲ ಪಟ್ಟಣದಲ್ಲಿರವ ಎಪಿಎಂಸಿಯಲ್ಲಿ ನಿವೇಶನಗಳನ್ನು ಖರೀದಿ ಮಾಡಿಕೊಂಡ ವ್ಯಾಪಾರಸ್ಥರು ಕೂಡಲೇ ಅಂಗಡಿಗಳನ್ನು ನಿರ್ಮಿಸಿ ರೈತರಿಗೆ ಅನುಕೂಲ ಮಾಡಬೇಕು. ಅಲ್ಲದೇ ಎಪಿಎಂಸಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಒದಗಿಸಲು ಎಪಿಎಂಸಿ ಇಲಾಖೆ ಯೋಜನೆ ರೂಪಿಸಿದೆ.
ಶ್ರೀಧರ ಮಣ್ಣೊರ,
ಹೊಳೆಆಲೂರ ಎಪಿಎಂಸಿ
ಕಾರ್ಯದರ್ಶಿ
ಸಿಕಂದರ ಎಂ. ಆರಿ