ಹಾವೇರಿ: ಲಾಕ್‌ಡೌನ್ ಆರಂಭದ ದಿನಗಳಲ್ಲಿ ಸೋಂಕಿನ ಭಯದಿಂದ, ಅರಿವಿನ ಕೊರತೆಯಿಂದ ಕಾರ್ಮಿಕರ ಕೊರತೆ ಎದುರಿಸುತ್ತಿದ್ದ ಉದ್ಯೋಗ ಖಾತ್ರಿ ಯೋಜನೆ ಕೆಲಸಕ್ಕೆ ಈಗೀಗ ಕಾರ್ಮಿಕರು ಬರುತ್ತಿದ್ದು ಕಾಮಗಾರಿಗಳು ಚುರುಕುಗೊಂಡಿವೆ. ಯೋಜನೆ ಕಾರ್ಮಿಕರಿಗೂ ವರದಾನವಾಗಿ ಮಾರ್ಪಟ್ಟಿದೆ.
ಸದಾ ದುಡಿಮೆಯಲ್ಲಿಯೇ ಕಾಲ ಕಳೆಯುವ ಶ್ರಮಿಕ ವರ್ಗಕ್ಕೆ ಲಾಕ್‌ಡೌನ್ ನಿಂದ ಮನೆಯಲ್ಲಿಯೇ ಖಾಲಿ ಇರುವುದು ಕಷ್ಟ ಎಂಬ ಭಾವನೆ ಮೂಡಿದೆ. ಇನ್ನು ಕೆಲಸಕ್ಕಾಗಿ ಊರು ಬಿಟ್ಟು ಹೋದವರೆಲ್ಲ ಮನೆಗೆ ಬಂದಿದ್ದು ಕುಟುಂಬ ನಿರ್ವಹಣೆಗೆ ದುಡಿಮೆ ಅನಿವಾರ್ಯವೂ ಆಗಿದೆ. ಹೀಗಾಗಿ ಈಗ ಗ್ರಾಮೀಣ ಜನರು ಉದ್ಯೋಗ ಖಾತ್ರಿ ಯೋಜನೆ ಕೆಲಸದತ್ತ ಮುಖ ಮಾಡಿದ್ದಾರೆ.
ನಿತ್ಯ ಸಾವಿರಾರು ಕಾರ್ಮಿಕರು:ಐದು ಜನರ ಗುಂಪು ಮಾಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಕೊಡಲಾಗುತ್ತಿದ್ದು, ಜಿಪಂ 2660 ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಿಕೊಂಡಿದೆ. ಇದರಲ್ಲಿ 849 ಕಾಮಗಾರಿಗಳು ಚಾಲ್ತಿಯಲ್ಲಿದ್ದು ನಿತ್ಯ 6303 ಕೂಲಿ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರ ಈ ವರ್ಷದಿಂದ 249 ರೂ. ಇದ್ದ ಕೂಲಿ ದರವನ್ನು 275 ರೂ.ಗೆ ಹೆಚ್ಚಿಸಿದ್ದು ವಾರದೊಳಗೆ ಕಾರ್ಮಿಕರ ಖಾತೆಗೆ ಹಣ ಜಮಾ ಮಾಡಲು ತೀರ್ಮಾನಿಸಿದೆ. ಹಿರೇಕೆರೂರು, ಬ್ಯಾಡಗಿ, ಹಾವೇರಿ ಹಾಗೂ ಹಾನಗಲ್ಲ ತಾಲೂಕುಗಳಲ್ಲಿ ಕೂಲಿ ಕಾರ್ಮಿಕರ ಸಂಘಟನೆಗಳಿದ್ದು ಈ ಭಾಗದಲ್ಲಿ ಉದ್ಯೋಗಖಾತ್ರಿ ಯೋಜನೆ ಕಾಮಗಾರಿಗಳು ಹೆಚ್ಚಿನ ಪ್ರಗತಿಯಲ್ಲಿವೆ.
ಉಳಿದ ತಾಲೂಕುಗಳಲ್ಲಿ ನಿಧಾನವಾಗಿ ಕಾಮಗಾರಿ ತೀವ್ರತೆ ಪಡೆದುಕೊಳ್ಳುತ್ತಿವೆ. ಈ ಯೋಜನೆಯ ಗುರಿ ಸಾಧನೆಯಲ್ಲಿ ಮಾರ್ಚ್ ತಿಂಗಳಲ್ಲಿ ಒಂದು ಲಕ್ಷದಷ್ಟು ಮಾನವ ದಿನಗಳ ಕೊರತೆ ಎದುರಿಸಲಾಗಿತ್ತು. ಈಗ ಚೇತರಿಕೆ ಕಂಡಿದ್ದು ಈವರೆಗೆ 7,324 ಕುಟುಂಬಗಳಿಂದ 27,721 ಮಾನವ ದಿನಗಳು ಸೃಜನೆಯಾಗಿವೆ.
ಸುರಕ್ಷಾ ಕ್ರಮ: ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಕಾರ್ಮಿಕರಿಗೆ ಮಾಸ್ಕ್, ಸ್ಯಾನಿಟೈಸರ್, ಕೈ ತೊಳೆಯಲು ಸಾಬೂನು ವ್ಯವಸ್ಥೆ ಸಹ ಜಿಪಂ ಮಾಡುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ಆದ್ಯತೆ ನೀಡಲಾಗುತ್ತಿದೆ. ಅದಕ್ಕೆ ಪೂರಕವಾಗಿ ಗಿಡ ನೆಡುವುದು, ಜಲಮೂಲಗಳ ರಕ್ಷಣೆ, ಅಭಿವೃದ್ಧಿ, ನದಿಗಳಿಂದಾಗುವ ಮಣ್ಣು ಕೊರೆತ ತಡೆಗೆ ಪ್ಲಾಂಟೇಶನ್ ಮಾಡುವ ಕಾಮಗಾರಿಗಳಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ.
ಶೀಘ್ರ ಉದ್ಯೋಗ ಚೀಟಿ : ಜಿಲ್ಲೆಯಲ್ಲಿ 2.12ಲಕ್ಷ ಉದ್ಯೋಗ ಚೀಟಿ ಹೊಂದಿರುವ ಕಾರ್ಮಿಕರಿದ್ದು ಈಗಷ್ಟೇ ಕಾರ್ಮಿಕರು ಕೂಲಿ ಕೆಲಸಕ್ಕೆ ಇಳಿಯುತ್ತಿದ್ದಾರೆ. ಇನ್ನು ರೇಷನ್ ಕಾರ್ಡ್‌ನಲ್ಲಿ ಹೆಸರಿದ್ದು ಇಷ್ಟು ದಿನ ಬೇರೆ ಕಡೆ ಕೆಲಸಕ್ಕೆ ಹೋಗಿ ಈಗ ಊರಲ್ಲಿದ್ದವರಿಗೂ ಒಂದೇ ದಿನದಲ್ಲಿ ಉದ್ಯೋಗ ಚೀಟಿ ನೀಡಿ ಕೂಲಿ ನೀಡಲು ಸಹ ಜಿಪಂ ತೀರ್ಮಾನಿಸಿದೆ.
ಲಾಕ್‌ಡೌನ್ ಆರಂಭದ ದಿನಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಕಾರ್ಮಿಕರ ಕೊರತೆ ಎದುರಾಗಿತ್ತು. ಈಗೀಗ ಕೆಲಸಕ್ಕೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಕಾಮಗಾರಿಗಳು ಭರದಿಂದ ಸಾಗಿವೆ. ಸಾಮಾಜಿಕ ಅಂತರ ಹಾಗೂ ಕೋವಿಡ್ 19 ರಕ್ಷಣಗೆ ಬೇಕಾದ ಅಗತ್ಯ ರಕ್ಷಣಾ ಕ್ರಮ ಕೈಗೊಳ್ಳಲಾಗಿದೆ.
-ರಮೇಶ ದೇಸಾಯಿ, ಸಿಇಓ, ಜಿಪಂ
–ಎಚ್.ಕೆ. ನಟರಾಜ