ಸಿದ್ದಾಪುರ: ಆಹಾರ ಭದ್ರತೆ ಮತ್ತು ಸಾಮಾಜಿಕ ಭದ್ರತೆ ಉದ್ದೇಶವಿಟ್ಟುಕೊಂಡು 2005ರಲ್ಲಿ ಅಂಗೀಕೃತವಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ತಾಲೂಕಿನಲ್ಲಿ ಅತ್ಯಂತ ಕನಿಷ್ಠ ಮಟ್ಟದಲ್ಲಿ ಕಾರ್ಯಗತಗೊಂಡಿರುವುದು ಬುಧವಾರ ಒಂಬುÕಡ್ಸಮನ್ ತಾಲೂಕಿಗೆ ಭೇಟಿನೀಡಿದಾಗ ಬೆಳಕಿಗೆ ಬಂದಿದೆ. ಇಷ್ಟು ದಿನಗಳ ಕಾಲ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ಹೊಗಳಿಕೊಳ್ಳುತ್ತಿದ್ದ ಜನಪ್ರತಿನಿಧಿಗಳ ಕಾರ್ಯವಿಧಾನಕ್ಕೆ ಕನ್ನಡಿ ಹಿಡಿದಂತಾಗಿದೆ.
ಗ್ರಾಮೀಣ ಭಾಗದ ಜನತೆ ಹಸಿವಿನಿಂದ ಬಳಲಬಾರದು, ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಬರಬಾರದು ಎನ್ನುವ ಉದ್ದೇಶದಿಂದ ಅಕುಶಲ ಕಾರ್ಮಿಕರಿಗೆ ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ 100 ದಿನಗಳ ಉದ್ಯೋಗ ಖಾತ್ರಿ ಒದಗಿಸಲಾಗಿದೆ. ಜೊತೆಗೆ ಪ್ರತಿದಿನ 8 ತಾಸಿನ ಕೆಲಸಕ್ಕೆ ಕನಿಷ್ಠ 285 ರೂ. ವೇತನ ನೀಡುವ ಅವಕಾಶ ಈ ಯೋಜನೆಯಲ್ಲಿದೆ. ಸಮುದಾಯದ ರಸ್ತೆ, ಚರಂಡಿ, ಅಂಗನವಾಡಿ, ಶಾಲೆ ಕಟ್ಟಡ, ಶೌಚಾಲಯ ಮುಂತಾಗಿ, ವೈಯುಕ್ತಿಕ ಸೌಲಭ್ಯಗಳಾದ ಬೆಳೆಗಳ, ತೋಟಗಳನ್ನು ರೂಪಿತಗೊಳಿಸುವುದು, ಬಾವಿ, ಕೆರೆ, ಕೃಷಿಹೊಂಡ ಮುಂತಾದ ನೀರಾವರಿ ಸೌಲಭ್ಯಗಳನ್ನು ಜನತೆಗೆ ಒದಗಿಸಿಕೊಡುವ ಕೇವಲ ಯೋಜನೆ ಮಾತ್ರವಾಗಿರದೇ ಕಾಯ್ದೆಯಾಗಿರುವದನ್ನು ವಾರ್ಷಿಕವಾಗಿ ಅಂದಾಜು ಗುರಿ ಇಟ್ಟುಕೊಂಡ ಶೇ.100ರಲ್ಲಿ ಕೇವಲ ಶೇ.3.50 ಅನುಷ್ಠಾನಗೊಂಡಿದ್ದು ದುರದೃಷ್ಟಕರ ಎನ್ನುವುದು ಈಗ ಕಂಡುಬರುತ್ತಿದೆ.
ಈ ಯೋಜನೆಯ ಬಗ್ಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಜಿಲ್ಲಾ ಒಂಬುಡ್ಸಮನ್(ಏಕ ಸದಸ್ಯ ಆಯೋಗ)ದ ಮುಖ್ಯಸ್ಥ ಆರ್.ಜಿ. ನಾಯಕ ವಿವರ ನೀಡದಿದ್ದರೆ ಸಾರ್ವಜನಿಕರಿಗೆ ಈ ಯೋಜನೆ ಮಾಹಿತಿಯೇ ಲಭ್ಯವಾಗುತ್ತಿರಲಿಲ್ಲ. ಲಾಭವಿಲ್ಲದ ಈ ಯೋಜನೆ ಬಗ್ಗೆ ಸಂಪೂರ್ಣವಾಗಿ ಸಾರ್ವಜನಿಕ ವಲಯದಿಂದ ಮರೆಮಾಚಿದ ಅಧಿಕಾರಿಗಳು, ಅಭಿವೃದ್ಧಿ ಮಂತ್ರ ಜಪಿಸುವ ಎಲ್ಲ ಜನಪ್ರತಿನಿಧಿಗಳು ಈ ಬಗ್ಗೆ ಸಾರ್ವಜನಿಕರಿಗೆ ಉತ್ತರ ನೀಡಲೇ ಬೇಕಿದೆ. ವ್ಯಕ್ತಿಯೊಬ್ಬ ಈ ಯೋಜನೆಯ ಕೆಲಸವೊಂದಕ್ಕೆ ಸ್ವಯಂಪ್ರೇರಿತವಾಗಿ ಅರ್ಜಿ ಸಲ್ಲಿಸಿದಾಗ್ಯೂ ಸತಾಯಿಸುವ ಅಧಿಕಾರಿಗಳು, ಅನುಷ್ಠಾನಾಧಿಕಾರಿಗಳು ಮುಂದಿನ ದಿನಗಳಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಅಭಿವೃದ್ಧಿ ಮಂತ್ರ ಜಪಿಸುತ್ತ, ತಾಲೂಕಿನ ಅಧಿಕಾರಿಗಳ ಪರ ವಕಾಲತ್ತು ವಹಿಸುವ ಕ್ಷೇತ್ರದ ಶಾಸಕರು, ಮಾತೆತ್ತಿದರೆ ನಾನು ವಿಧಾನ ಸಭಾಧ್ಯಕ್ಷ ಎನ್ನುವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕ್ಷೇತ್ರ ಜಿಲ್ಲೆಯಲ್ಲೇ ಈ ಯೋಜನೆಯಲ್ಲಿ ಕೊನೆಯ ಸ್ಥಾನದಲ್ಲಿದೆ ಎಂದರೆ ಚಿಂತನೆ ಮಾಡಬೇಕಾದ ಸಂಗತಿ. ಅರ್ಹ ಕುಟುಂಬಗಳಿಗೆ ಈ ಯೋಜನೆಯ ಕುರಿತು ಸಮರ್ಪಕ ಮಾಹಿತಿ ನೀಡುವುದು ಅಗತ್ಯವಾಗಿದೆ.
-ಗಂಗಾಧರ ಕೊಳಗಿ