Advertisement
ಕೋವಿಡ್ 19 ಕಾರಣದಿಂದ ಉದ್ಯೋಗ ಹರಸಿ ವಿವಿಧ ಮಹಾನಗರಗಳಿಗೆ ವಲಸೆ ಹೋಗಿದ್ದ ಅನೇಕ ಜನ ತಮ್ಮ ಸ್ವ ಗ್ರಾಮಗಳಿಗೆ ಮರಳಿದ್ದು, ಉದ್ಯೋಗ ಇಲ್ಲದೆ ಕುಳಿತಿದ್ದಾರೆ. ಇನ್ನೊಂದು ಕಡೆ ಇದು ಮುಂಗಾರು ಹಂಗಾಮಿಗೆ ತಯಾರಿ ಸಮಯ ಇದಾಗಿದ್ದು, ನರೇಗಾದಡಿ ಕೃಷಿ ಪೂರಕ ಕೆಲಸಗಳನ್ನು ಕೈಗೊಳ್ಳಬಹುದಾಗಿದೆ. ರಾಜ್ಯ ಸರ್ಕಾರ ನರೇಗಾ ಕಾಮಗಾರಿ ಆರಂಭಿಸುವಂತೆಯೂ ಸೂಚಿಸಿದೆ. ಈಗಾಗಲೇ ಬಹುತೇಕ ಜಿಲ್ಲೆಗಳಲ್ಲಿ ನರೇಗಾ ಕಾಮಗಾರಿ ಆರಂಭವಾಗಿದ್ದು, ಹಾವೇರಿ ಜಿಲ್ಲೆ ಸೇರಿದಂತೆ ಕೆಲವೊಂದು ಕಡೆ ಎನ್‌ಜಿಒಗಳು ನರೇಗಾ ಕಾಮಗಾರಿಯಲ್ಲಿ ಸಾಮಾಜಿಕ ಸೇವಾ ಪಾಲುದಾರಿಕೆ ಪಡೆದುಕೊಂಡಿವೆ.
Related Articles
Advertisement
ಕೋವಿಡ್ 19 ಹಿನ್ನೆಲೆಯಲ್ಲಿ ಸರ್ಕಾರ ಉಚಿತ ಪಡಿತರವೆಂದು ಅಕ್ಕಿ, ಗೋಧಿ, ಬೇಳೆ ನೀಡುತ್ತಿದೆ. ಉಳಿದ ಪದಾರ್ಥಗಳು ಹಾಗೂ ಕುಟುಂಬ ನಿರ್ವಹಣೆಗೆ ಕೃಷಿ ಕೂಲಿಕಾರರು, ಬಡವರಿಗೆ ಹಣ ಎಲ್ಲಿಂದ ಬರುತ್ತದೆ. ನರೇಗಾದಡಿ ಉದ್ಯೋಗ ನೀಡಿದರೆ, ಹಣ ದೊರೆತಂತಾಗಲಿದೆ. ಪ್ರಸ್ತುತ ನರೇಗಾ ಅಡಿಯಲ್ಲಿ ಒಂದು ದಿನಕ್ಕೆ 275 ರೂ. ಹಣ ನೀಡಲಾಗುತ್ತಿದ್ದು, ಕೆಲಸಕ್ಕೆ ಬರುವವರು ತಮ್ಮದೇ ಗುದ್ದಲಿ, ಸಲಿಕೆ ತಂದರೆ 10 ರೂ. ಸೇರಿ ಒಟ್ಟು 285 ರೂ. ಸಿಗುತ್ತದೆ. ಉದ್ಯೋಗವಿಲ್ಲವೆಂದು ಪರಿತಪಿಸುವವರಿಗೆ ಇದೊಂದು ಮಹತ್ವದ ವರದಾನವಾಗಲಿದೆ.
ನರೇಗಾ ಉದ್ಯೋಗಕ್ಕೆ ಆಗಮಿಸುವವರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳುವಿಕೆ ಜಾಗೃತಿ ಮೂಡಿಸಬೇಕು. ಗ್ರಾಮ ಪಂಚಾಯತ್ ನಿಂದಲೇ ಕೆಲಸದ ಸ್ಥಳದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಇನ್ನೂ ಉತ್ತಮ. ಬೆಳಗ್ಗೆ 5ರಿಂದ 10-11 ಗಂಟೆವರೆಗೆ ಕೆಲಸ ಮಾಡಿದರೆ ಉದ್ಯೋಗಿಗಳಿಗೆ ಬಿಸಿನ ತಾಪವೂ ಇರದು. ಸಮರ್ಪಕ ಹಾಗೂ ಗುಣಮಟ್ಟದ ಕೆಲಸದ ಮೇಲುಸ್ತುವಾರಿ ಇರಬೇಕು. ಯಾರ ಹೊಲದಲ್ಲಿ ಕೆಲಸ ನಡೆಯುತ್ತದೆಯೋ ಆ ಹೊಲದ ರೈತ ಪಾಲುದಾರನನ್ನಾಗಿಸುವುದರಿಂದ ಕೆಲಸದ ನಿರ್ವಹಣೆಯನ್ನು ಆತನು ಗಮನಿಸುತ್ತಿರುತ್ತಾನೆ. ಕೋವಿಡ್ 19 ಹಿನ್ನೆಲೆಯಲ್ಲಿ ನರೇಗಾ ಅಡಿಯಲ್ಲಿ 100 ರೂ. ಕೆಲಸದಲ್ಲಿ ಉದ್ಯೋಗಿ 70 ರೂ.ನಷ್ಟು ಕೆಲಸ ಮಾಡಿದರೂ, ಅದನ್ನು ಪೂರ್ಣವೆಂದು ಪರಿಗಣಿಸಿ 100 ರೂ.ನಷ್ಟು ಕೂಲಿ ನೀಡಬೇಕೆಂದು ರಾಜ್ಯ ಸರ್ಕಾರ ಸೂಚಿಸಿದೆ.
ಎನ್‌ಜಿಒಗಳು ಪಾಲುದಾರಿಕೆ ಪಡೆಯಲಿ: ಸಾಮಾಜಿಕ ಸೇವೆಯಲ್ಲಿ ತೊಡಗಿದ, ಕೋವಿಡ್ 19 ಇನ್ನಿತರ ವಿಕೋಪ ಸ್ಥಿತಿಯಲ್ಲಿ ಸಂತ್ರಸ್ತರಿಗೆ ಪರಿಹಾರ ಸಾಮಾಗ್ರಿ ಹಂಚಿಕೆ, ಸಂಗ್ರಹ ಕಾರ್ಯದಲ್ಲಿ ತೊಡುವ ಸ್ವಯಂ ಸೇವಾ ಸಂಸ್ಥೆಗಳು(ಎನ್‌ಜಿಒ) ಸಾಕಷ್ಟು ಇವೆ. ಸಾಮಾಜಿಕ ಸೇವೆಯ ಭಾಗವಾಗಿ ಎನ್ ಜಿಒಗಳು ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನ ನಿಟ್ಟಿನಲ್ಲಿ ಜನರಿಗೆ ಜಾಗೃತಿ-ಪ್ರೇರಣೆ ನೀಡುವ ಕಾರ್ಯಕ್ಕೆ ಮುಂದಾಗಬೇಕಾಗಿದೆ.
ಹಾವೇರಿ ಜಿಲ್ಲೆಯಲ್ಲಿ ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಈಗಾಗಲೇ ರಾಣೆಬೆನ್ನೂರು, ಹಿರೇಕೆರೂರು ತಾಲೂಕುಗಳ ನಾಲ್ಕೈದು ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ಕೆಲಸಕ್ಕೆ ಜನರನ್ನು ಪ್ರೇರೆಪಿಸುವ ಮೂಲಕ ಕೆಲಸಕ್ಕಚ್ಚಿದೆ. ವನಸಿರಿ ಸಂಸ್ಥೆ ಎರಡು ತಾಲೂಕುಗಳ ನಾಲ್ಕೈದು ಗ್ರಾಪಂ ವ್ಯಾಪ್ತಿಯಲ್ಲಿ ಬದು ಹಾಕುವುದು, ಕೆರೆ ಹೂಳೆತ್ತುವುದು, ಜಂಗಲ್ ಕಟಾವ್ ಕಾರ್ಯದಲ್ಲಿ ಸುಮಾರು 180-200 ಜನರನ್ನು ಉದ್ಯೋಗಕ್ಕಿಳಿಸುವ ಕಾರ್ಯ ಮಾಡಿದೆ. ಇದೇ ಮಾದರಿಯಲ್ಲಿ ಇನ್ನಷ್ಟು ಎನ್‌ಜಿಒಗಳು ಆಯಾ ಜಿಲ್ಲೆಗಳಲ್ಲಿ ತಮ್ಮ ಸಾಮಾಜಿಕ ಬದ್ಧತೆ ಪ್ರದರ್ಶನಕ್ಕಿಳಿಯಬೇಕಾಗಿದೆ, ಗ್ರಾಮೀಣ ಜನರನ್ನು ನರೇಗಾ ಕಾಮಗಾರಿಗೆ ಪ್ರೇರೇಪಿಸಬೇಕಾಗಿದೆ.
ಜಿಪಂ ಹಾಗೂ ಕೃಷಿ ಇಲಾಖೆ ಸಹಕಾರದೊಂದಿಗೆ ನಮ್ಮ ಸಂಸ್ಥೆ ಕಳೆದ ಎರಡು ವಾರಗಳಿಂದ ನಾಲ್ಕೈದು ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗೆ ಜನರನ್ನು ತೊಡಗಿಸುವ ಕೆಲಸ ಮಾಡಿದೆ. ಇಂದಿನ ಸಂಕಷ್ಟ ಸ್ಥಿತಿಯಲ್ಲಿ ಉದ್ಯೋಗ ಸೃಷ್ಟಿ ದೊಡ್ಡ ಸವಾಲು ಆಗಿದ್ದು, ನರೇಗಾ ಯೋಜನೆ ಇದಕ್ಕೆ ಮಹತ್ವದ ಪರಿಹಾರ ಆಗಿದೆ ಎಂಬುದನ್ನು ಗ್ರಾಮೀಣ ಜನತೆ ಅರಿಯಬೇಕಾಗಿದೆ. –ಎಸ್.ಡಿ.ಬಳಿಗಾರ, ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ
–ಅಮರೇಗೌಡ ಗೋನವಾರ