Advertisement

ನರೇಗಾ ಕೆಲಸದ ಪ್ರಮಾಣ ಕಡಿತ

07:53 PM Apr 04, 2021 | Team Udayavani |

ದತ್ತು ಕಮ್ಮಾರ

Advertisement

ಕೊಪ್ಪಳ: ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ನರೇಗಾ ಕೂಲಿಕಾರರ ಆರೋಗ್ಯದ ಹಿತದೃಷ್ಟಿಯಿಂದ ಕೆಲಸದ ಪ್ರಮಾಣದಲ್ಲಿ ಶೇ. 30ರಷ್ಟು ಕಡಿತಗೊಳಿಸಿ ಆದೇಶ ಮಾಡಿದೆ.

ಗ್ರಾಮೀಣ ಪ್ರದೇಶದ ಜನರು ಗುಳೆ ಹೋಗುವುದನ್ನು ತಪ್ಪಿಸಲು ಸರ್ಕಾರವು ನರೇಗಾದಡಿ ಜನರಿಗೆ ನೂರು ದಿನಗಳ ಕೆಲಸ ಕೊಡುವ ಯೋಜನೆ ಆರಂಭಿಸಿದೆ. ಈಗಾಗಲೇ ಉಕ ಸೇರಿ ಹಲವು ಜಿಲ್ಲೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಗೆ ಕೆಲಸ ಕೊಡುವ ಕಾರ್ಯ ಆರಂಭವಾಗಿದೆ. ಆಯಾ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೆರೆಗಳ ಹೂಳೆತ್ತುವುದು, ಬಂಡ್‌ ನಿರ್ಮಾಣ ಮಾಡುವುದು, ಸಸಿ ನೆಡುವುದು ಅಲ್ಲದೇ ರೈತರ ಹೊಲದಲ್ಲಿಯೇ ಬದು ನಿರ್ಮಾಣದಂತಹ ಹಲವು ಕಾಮಗಾರಿ ಆರಂಭಿಸಿದೆ.

ಬೇಸಿಗೆ ಆರಂಭವಾಗುತ್ತಿದ್ದಂತೆ ಜನರಿಗೆ ದುಡಿಮೆ ಇರುವುದಿಲ್ಲ. ನಿತ್ಯದ ಜೀವನ ನಡೆಸುವುದು ಕಷ್ಟವಾಗುತ್ತದೆ. ಇದನ್ನು ಮನಗೊಂಡು ನರೇಗಾ ಕೆಲಸ ಆರಂಭಿಸಲಾಗುತ್ತಿದೆ. ಈಗಾಗಲೇ ಉತ್ತರ ಕರ್ನಾಟಕ ಭಾಗದಲ್ಲಿನ ಹಲವು ಜಿಲ್ಲೆಗಳಲ್ಲಿ ಕೆಲಸ ಭರದಿಂದ ಸಾಗಿವೆ. ಆದರೆ ಬೇಸಿಗೆಯಲ್ಲಿ ಬಿಸಿಲು ಹೆಚ್ಚಿರುವುದರಿಂದ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಕೆರೆ ಹೂಳೆತ್ತುವುದು, ಕಟ್ಟೆ ಕಡೆಯುವುದು, ಬಂಡ್‌ ನಿರ್ಮಾಣದಂಹ ಕೆಲಸ ಮಾಡುವುದು ಕಷ್ಟರವಾಗಲಿದೆ.

ಕೆಲಸಕ್ಕೆ ಮಹಿಳೆಯರು ತೊಡಗುತ್ತಿರುವುದರಿಂದ ಅವರ ಆರೋಗ್ಯದ ದೃಷ್ಟಿಯಿಂದ ಕೆಲಸದ ಅವ ಧಿಯಲ್ಲಿ ಕಡಿತ ಮಾಡಲಾಗುತ್ತಿದೆ. ಅದರಂತೆ, ಈ ವರ್ಷವೂ ಆರ್‌ ಡಿಪಿಆರ್‌ ಇಲಾಖೆಯು ಬೇಸಿಗೆಯ ಏಪ್ರಿಲ್‌ ಹಾಗೂ ಮೇ ತಿಂಗಳು ಶೇ. 30 ಹಾಗೂ ಜೂನ್‌ ತಿಂಗಳಲ್ಲಿ ಶೇ. 20ರಷ್ಟು ಕೆಲಸದ ಪ್ರಮಾಣ ಕಡಿತ ಮಾಡಿ ಈಗಾಗಲೇ ಉಕ ಭಾಗದ ಎಲ್ಲ ಜಿಲ್ಲೆಗಳಿಗೂ ಆದೇಶ ಮಾಡಿದೆ.

Advertisement

ಕಲಬುರಗಿ ಹಾಗೂ ಬೆಳಗಾವಿ ವಿಭಾಗದ 14 ಜಿಲ್ಲೆಗಳಿಗೆ ಈ ಆದೇಶ ಅನ್ವಯವಾಗಲಿದೆ. ನೀರು, ನೆರಳು: ಉಕ ಭಾಗದ ಕೊಪ್ಪಳ, ಬಳ್ಳಾರಿ, ರಾಯಚೂರು ಸೇರಿ ಇತರೆ ಜಿಲ್ಲೆಗಳಲ್ಲಿ ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ದಾಖಲಾಗುತ್ತದೆ. ಇದರಿಂದ ಅವರಿಗೆ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಕೆಲಸ ಮಾಡುವ ಸ್ಥಳದಲ್ಲಿ ನೆರಳಿನ ವ್ಯವಸ್ಥೆಯೂ ಮಾಡಲಾಗುತ್ತಿದೆ.

ಜನರು ಬಿಸಿಲಿನ ತಾಪಕ್ಕೆ ತಲೆ ಸುತ್ತು ಬಂದು ಬೀಳದಿರಲಿ ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಕೆಲವು ಸ್ಥಳದಲ್ಲಿ ಮಹಿಳೆಯರು ಮಕ್ಕಳೊಂದಿಗೆ ಕೆಲಸಕ್ಕೆ ಆಗಮಿಸುತ್ತಿದ್ದು, ಅಂತಹ ಸ್ಥಳದಲ್ಲಿ ಒಬ್ಬ ಹಿರಿಯರನ್ನು ಮಕ್ಕಳು ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ.

ಎರಡನೇ ಅಲೆ ಮಧ್ಯೆಯೂ ನರೇಗಾ: ಇನ್ನೂ ಎಲ್ಲೆಡೆಯೂ ಕೋವಿಡ್‌-19 ಸೋಂಕು ಆರ್ಭಟಿಸುತ್ತಿದೆ. ಆದರೆ ಜನರಿಗೆ ದುಡಿಮೆ ಇಲ್ಲದಂತೆ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದಲೇ ಕೆರೆ, ಕಟ್ಟೆ, ಹಳ್ಳ ಕೊಳ್ಳದ ಸ್ಥಳದಲ್ಲಿ ಕೂಲಿ ಕೆಲಸ ನೀಡಲಾಗುತ್ತಿದೆ. ಒಂದೆಡೆ ಕೂಲಿ ಕೆಲಸಕ್ಕೆ ಬರುವ ಜನರು ಗುಂಪು ಗುಂಪಾಗಿ ಕೆಲಸ ಮಾಡುತ್ತಿದ್ದರೆ, ಇನ್ನೊಂದೆಡೆ ಸಾಮಾಜಿಕ ಅಂತರದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ನರೇಗಾ ಕೆಲಸವೂ ಗ್ರಾಮೀಣ ಪ್ರದೇಶದ ಜನರಿಗೆ ಅನಿವಾರ್ಯತೆಯೂ ಆಗಿದೆ. ಬೇರೆಡೆ ಹೋದರೆ ಕೆಲಸವಿಲ್ಲ. ನರೇಗಾ ಕೆಲಸಕ್ಕಾದರೂ ತೆರಳಿದರೆ ಜೀವನೋಪಾಯಕ್ಕೆ ಸ್ವಲ್ಪ ನೆರವಾಗಲಿದೆ ಎನ್ನುವುದು ಕಾರ್ಮಿಕರ ಉದ್ದೇಶವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next