Advertisement

ನೊಂದವರ ಬದುಕಿಗೆ ನರೇಗಾ ಆಸರೆ

03:56 PM Oct 13, 2022 | Team Udayavani |

ರಟ್ಟೀಹಳ್ಳಿ: 15 ವರ್ಷಗಳ ಹಿಂದೆ ನರೇಗಾ ಯೋಜನೆ ಪ್ರಾರಂಭಗೊಂಡಾಗ ಕೆಲಸಕ್ಕೆ ಬರುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದ ಗ್ರಾಮೀಣ ಭಾಗದ ಜನರು, ಇಂದು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಯೋಜನೆ ಹಲವಾರು ಜನರ ಬಾಳಿಗೆ ಬೆಳಕಾಗಿ ಪರಿಣಮಿಸಿದೆ.

Advertisement

ತಾಲೂಕಿನ ಹಳ್ಳೂರು ಗ್ರಾಪಂ ವ್ಯಾಪ್ತಿಯ ಕಮಲಾಪುರ ಗ್ರಾಮದಲ್ಲಿ ಶಿವಪ್ಪ ಕುರಿಯವರ ಕಾಯಕಕ್ಕೆ ಮನರೇಗಾ ಯೋಜನೆ ಬಲ ತುಂಬಿದೆ. ಶಿವಪ್ಪ ಕುರಿಯವರ ಅವರು ಮೊದಲು ತಮ್ಮ ಗ್ರಾಮದಲ್ಲಿ ಪತ್ನಿಯೊಂದಿಗೆ ತಿಯೊಂದಿಗೆ ಕೂಲಿ ಕೆಲಸ ಮಾಡಿಕೊಂಡು, ಎರಡು ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದರು. ವಿಧಿಯಾಟ ಬಲ್ಲವರು ಯಾರು? ಶಿವಪ್ಪನ ಬಾಳಿನಲ್ಲಿ ಒಂದು ಘಟನೆ ನಡೆಯಿತು. ಆ ಘಟನೆಯಿಂದ ಶಿವಪ್ಪನ ಬದುಕು ಕತ್ತಲಾಯಿತು.

ಆ ಘಟನೆ ಏನೆಂದರೆ, 5 ವರ್ಷದ ಹಿಂದೆ ರಾತ್ರಿ ವೇಳೆ ಊಟ ಮಾಡಿ ಮಲಗಿದ ಸಂದರ್ಭದಲ್ಲಿ ಶಿವಪ್ಪನ ಮನೆಗೆ ಬೆಂಕಿ ಬಿದ್ದಿತ್ತು. ಮನೆಯಲ್ಲಿನ ದೀಪದಿಂದ(ಚುಮಣಿಯಿಂದ) ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮನೆ ದಗದಗ ಉರಿಯತೋಗಿತು. ಈ ಸಂದರ್ಭದಲ್ಲಿ ಮನೆಯಲ್ಲಿ ಮಲಗಿದ್ದ ಹೆಂಡತಿ, ಮಕ್ಕಳನ್ನು ರಕ್ಷಿಸಿ ಬಳಿಕ ಮನೆಯಲ್ಲಿದ್ದ ಕೆಲವೊಂದು ಪ್ರಮುಖ ವಸ್ತುಗಳನ್ನು ಹೊರ ತರುತ್ತಿರುವ ಸಂದರ್ಭದಲ್ಲಿ ಶಿವಪ್ಪನಿಗೆ ಬೆಂಕಿ ಹೊತ್ತಿಕೊಂಡು ತೀವ್ರಗಾಯಗೊಂಡಿದ್ದರು. ಪರಿಣಾಮ ಮುಖ, ಎದೆ, ಕೈ ಸೇರಿದಂತೆ ಕೆಲ ಭಾಗಗಳು ಸುಟ್ಟು ಜೀವನ್ಮರಣದ ಮಧ್ಯೆ ಹೋರಾಟ ಮಾಡುವಂತಾಗಿ ಆಸ್ಪತ್ರೆ ಸೇರಿದ್ದರು. ಹೆಂಡತಿ ಸಾಲ ಸೂಲ ಮಾಡಿ ಗಂಡನಿಗೆ ಚಿಕಿತ್ಸೆ ಕೊಡಿಸಿ ಬದುಕಿಸಿಕೊಂಡು ಬಂದಿದ್ದರು.

ಆದರೆ, ಬಳಿಕ ಜೀವನ ನಡೆಸುವುದು ಬಹಳಷ್ಟು ಕಷ್ಟವಾಯಿತು. ಹೆಂಡತಿಯೊಬ್ಬಳೇ ದುಡಿದು ಮನೆ ನಡೆಸುವುದರ ಜೊತೆಗೆ ಗಂಡನನ್ನು ಸಾಕಬೇಕಾಯಿತು. ಇತ್ತ 1-2 ವರ್ಷಗಳ ಬಳಿಕ ಗುಣಮುಖರಾಗಿದ್ದ ಶಿವಪ್ಪನಿಗೆ ಗ್ರಾಮದಲ್ಲಿ ಕೆಲಸವೇ ಸಿಗುತ್ತಿರಲಿಲ್ಲ. ಕಾರಣ ಆತನಿಗೆ ಕೆಲಸ ಮಾಡುವುದಕ್ಕೆ ಆಗುವುದಿಲ್ಲ ಎಂದು ಯಾರೊಬ್ಬರೂ ಕೆಲಸ ನೀಡುತ್ತಿರಲಿಲ್ಲ. ಹೀಗಾಗಿ, ಇವರಿಗೆ ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿ ಇದರಿಂದ ಶಿವಪ್ಪ ಚಿಂತೆಗೊಳಗಾದರು.

ನೊಂದ ಜೀವಕ್ಕೆ ನರೇಗಾ ನೆರವು: ಉದ್ಯೋಗ ಖಾತ್ರಿಯಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಶಿವಪ್ಪನ ಪತ್ನಿ ಗಂಡನಿಗೆ ಧೈರ್ಯ ತುಂಬಿ ನಿನ್ನಲ್ಲಿ ದುಡಿಯುವ ಶಕ್ತಿ ಇದೆ. ನಾವು ನರೇಗಾ ಯೋಜನೆಯಲ್ಲಿ ಕೆಲಸಕ್ಕೆ ಹೋಗೋಣ ಎಂದು ಗ್ರಾಪಂ ಅಧಿ ಕಾರಿಗಳ ಸಹಕಾರದಿಂದ ಈ ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಕೆಲಸ ಆರಂಭಸಿದರು. ಇದರಿಂದ ಜೀವನ ಮತ್ತೆ ಮೊದಲಿನಂತೆ ಸಾಗುತ್ತಿದೆ.

Advertisement

ವಿಶೇಷಚೇತನರಾಗಿರುವ ಶಿವಪ್ಪನಿಗೆ ಕೆಲಸದಲ್ಲಿ ವಿನಾಯಿತಿ ಇದ್ದು, ಶೇ.50 ರಷ್ಟು ಮಾತ್ರ ಕೆಲಸ ನೀಡಿ, ಪೂರ್ಣ ಪ್ರಮಾಣದ ಕೂಲಿ ನೀಡಲಾಗುತ್ತಿದೆ.

2021-22 ರಲ್ಲಿ 115 ದಿನಗಳ ಕೂಲಿ ಕೆಲಸ ನಿರ್ವಹಿಸಿ 33.877 ರೂ. ಪಡೆದಿದ್ದಾರೆ. ಈ ಆರ್ಥಿಕ ವರ್ಷದಲ್ಲಿ 2022-23 ನೇ ಸಾಲಿನಲ್ಲಿ ಸದ್ಯ 18 ದಿನ ಕೆಲಸ ನಿರ್ವಹಿಸಿ 5.567 ರೂ. ಪಡೆದಿದ್ದಾರೆ. ಈ ಕೆಲಸದಲ್ಲಿ ಬರುತ್ತಿರುವ ಹಣದಿಂದ ಮಕ್ಕಳ ಓದಿಗೆ ಮತ್ತು ಆಸ್ಪತ್ರೆ ಖರ್ಚು, ಮನೆ ನಡೆಸುವುದಕ್ಕೆ ಬಳಸಿಕೊಂಡು ಸುಖ ಜೀವನ ನಡೆಸುತ್ತಿದ್ದಾರೆ.

ನರೇಗಾ ಯೋಜನೆಯ ಕೆಲಸದಿಂದ ಸಾಲದಿಂದ ಮುಕ್ತರಾಗಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಂತಹ ಅನೇಕ ಉದಾರಣೆಗಳು ಇಲ್ಲಿ ಕಂಡು ಬರುತ್ತವೆ.

ಇದೇ ಗ್ರಾಮದಲ್ಲಿ ಬೀರಪ್ಪ ಪೂಜಾರ ಎಂಬ ವ್ಯಕ್ತಿ ವಿಶೇಷ ಚೇತನರಾಗಿದ್ದು, ಅವರು ಕೆಲಸ ಮಾಡುವ ಜನರಿಗೆ ಕುಡಿಯಲು ನೀರು ಪೂರೈಕೆ ಮಾಡುವ ಮೂಲಕ ಈ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೊಬ್ಬ ವ್ಯಕ್ತಿ ನಾಗೇಂದ್ರಪ್ಪ ನಾಗೇನಹಳ್ಳಿ ದುಡಿಯಲೆಂದು ಪಟ್ಟಣಕ್ಕೆ ಹೋದಾಗ ಮನೆ ನಿರ್ಮಾಣ ಕೆಲಸದಲ್ಲಿ ತೊಡಗಿದ್ದಾಗ(ಸೆಂಟ್ರಿಂಗ್‌ ಕುಸಿದು) ಮನೆ ಕುಸಿದು ಗಾಯಗೊಂಡು ಮರಳಿ ಗ್ರಾಮಕ್ಕೆ ಬಂದು ಕೆಲಸವಿಲ್ಲದೇ ಇದ್ದಾಗ, ಅವರಿಗೂ ಈ ಯೋಜನೆ ಆಶ್ರಯವಾಗಿದೆ.

ಅಲ್ಲದೇ, ಈ ಗ್ರಾಮದಲ್ಲಿ 5-10 ಜನರು 60 ವರ್ಷದ ದಾಟಿದ ವ್ಯಕ್ತಿಗಳು ಈ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಎಲ್ಲರಿಗೂ ಕೂಲಿ ಹಣ ಸರಿಸಮಾನವಾಗಿ 309 ರೂ. ಸಿಗುತ್ತಿದೆ. ಎಲ್ಲರ ಜೀವನಕ್ಕೆ ಈ ಯೋಜನೆ ಆಧಾರವಾಗಿದೆ.

5-6 ವರ್ಷಗಳ ಹಿಂದೆ ನಮ್ಮ ಮನೆಗೆ ಬೆಂಕಿ ಹೊತ್ತಿಕೊಂಡು ನಾನು ಗಾಯಗೊಂಡಿದ್ದೆ. ನನ್ನ ಹೆಂಡತಿ ಸಾಲ ಸೂಲ ಮಾಡಿ ನನ್ನನ್ನು ಬದುಕಿಸಿಕೊಂಡರು. ನಾನು ಆರಾಮವಾದ ಬಳಿಕ ಕೆಲಸಕ್ಕೆ ಹೋಗಬೇಕಂದ್ರೆ, ಅವನಿಗೆ ಕೆಲಸ ಮಾಡುವುದಕ್ಕೆ ಆಗಲ್ಲ ಎಂದು ಯಾರೂ ನನ್ನನ್ನು ಕರೆದುಕೊಳ್ಳುತ್ತಿರಲಿಲ್ಲ. ಇದರಿಂದ ನಮಗೆ ಜೀವನ ನಡೆಸುವುದು ಬಹಳ ಕಷ್ಟವಾಗಿತ್ತು. ಗಂಡ-ಹೆಂಡತಿ ಇಬ್ಬರಿಗೂ ಈ ಉದ್ಯೋಗ ಖಾತ್ರಿಯಲ್ಲಿ ಕೆಲಸ ಕೊಟ್ಟಿದ್ದರಿಂದ ನಮಗೆ ಬಹಳ ಅನುಕೂಲವಾಗಿದೆ. ಈಗ ಮೊದಲಿನಿಂತೆ ಜೀವನ ನಡೆಯುತ್ತಿದೆ. ಶಿವಪ್ಪ ಕುರಿಯವರ, ಕಮಲಾಪುರ

ನರೇಗಾ ಯೋಜನೆ ಬಡಜನರಿಗೆ ಆರ್ಥಿಕ ಶಕ್ತಿ ನೀಡಿದೆ. ತಾಲೂಕಿನ ಹಳ್ಳೂರು, ಶಿರಗಂಬಿ, ಮಾಸೂರು ಸೇರಿದಂತೆ ಕೆಲವೊಂದು ಗ್ರಾಮಗಳಲ್ಲಿ ವಿಶೇಷಚೇತನರು, ವೃದ್ಧರು, ಪದವೀಧರ ಯುವಕರು ಕೆಲಸದಲ್ಲಿ ತೊಡಗಿ ಬದುಕು ಕಟ್ಟಿಕೊಂಡಿದ್ದಾರೆ. ಈ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೂ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶವಿದೆ.  –ಎನ್‌.ರವಿ, ತಾಪಂ ಇಒ, ರಟ್ಟೀಹಳ್ಳಿ

-ಸಂತೋಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next