ವಿಜಯಪುರ: ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಅಕುಶಲ ಮತ್ತು ಅರೆಕುಶಲ ಕೂಲಿಕಾರರಿಗೆ ವರದಾನವಾಗಿದೆ. ಈ ಹಿಂದೆ ಬಡ ಜನತೆ ಬೇರೆ ಬೇರೆ ರಾಜ್ಯಗಳಿಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದ ವ್ಯವಸ್ಥೆಗೆ ಮನರೇಗಾ ಕಡಿವಾಣ ಹಾಕಿದೆ ಎಂದು ಬಬಲೇಶ್ವರ ತಾಪಂ ಇಒ ಜುಬೇರ್ ಅಹ್ಮದ್ ಪಠಾಣ ಹೇಳಿದರು.
ಬಬಲೇಶ್ವರ ತಾಪಂ, ನಿಡೋಣಿ ಗ್ರಾಪಂ ಸಹಯೋಗದಲ್ಲಿ ನರೇಗಾ ದಿನಾಚರಣೆ ಅಂಗವಾಗಿ ನಿಡೋಣಿ ಸರ್ಕಾರಿ ಉರ್ದು ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮನರೇಗಾ ಯೋಜನೆಯಿಂದ ಗ್ರಾಮೀಣ ಜನರು ಸ್ಥಳಿಯವಾಗಿ 100 ದಿನಗಳಕಾಲ ಪ್ರತಿ ಕುಟುಂಬಕ್ಕೆ ಉದ್ಯೋಗ ಭದ್ರತೆ ಒದಗಿಸುವ ಕಾರ್ಯ ನಡೆಯುತ್ತಿದೆ. ಇದರಿಂದ ಉದ್ಯೋಗ ಅರಸಿ ಹಳ್ಳಿಯ ಜನರು ದೂರದ ಊರುಗಳಿಗೆ ಗುಳೆ ಹೋಗುವ ಅಗತ್ಯವಿಲ್ಲ ಎಂದರು.
ಸದರಿ ಯೋಜನೆ ಅಡಿಯಲ್ಲಿ ಶಾಲಾ ಅಭಿವೃದ್ದಿಗೆ ಅಪರಿಮಿತ ಅನುದಾನವಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ, ಆಟದ ಮೈದಾನ ಅಭಿವೃದ್ಧಿ, ಶೌಚಾಲಯ ನಿರ್ಮಾಣ, ಸಸಿ ನೆಡುವುದು, ಅಡುಗೆ ಕೋಣೆ, ಮಳೆ ನೀರಿನ ಕೊಯ್ಲು ಮಾಡುವ ಮೂಲಕ ಸರ್ವಾಂಗೀಣ ಅಭಿವೃದ್ದಿಗೆ ನರೇಗಾ ಸಹಕಾರಿಯಾಗಿದೆ ಎಂದರು.
ಗ್ರಾಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಶಹಾಪುರ ಮಾತನಾಡಿ, ಮನರೇಗಾ ಯೋಜನೆಯಿಂದ ನಮ್ಮ ಗ್ರಾಮ ಪಂಚಾಯತ್ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. ನಮ್ಮ ಗ್ರಾಮದಲ್ಲಿ ಸರ್ಕಾರಿ ಶಾಲೆಗಳ ಕಾಂಪೌಂಡ್ ನಿರ್ಮಾಣ, ಕಲ್ಯಾಣಿ ಕಾಮಗಾರಿ, ತೆರೆದ ಬಾವಿ, ಸ್ಮಶಾನ ಅಭಿವೃದ್ಧಿ ಕಾಮಗಾರಿಗಳು, ಚೆಕ್ ಡ್ಯಾಂ ಅರಣ್ಯೀಕರಣ ತೊಟದ ರಸ್ತೆ ನಿರ್ಮಾಣ ಕಾಮಗಾರಿ ನರೇಗಾ ಯೋಜನೆಯಿಂದ ಅಭಿವೃದ್ದಿ ಮಾಡಿದ್ದು ಗ್ರಾಮದ ಸರ್ವಾಂಗಿಣ ಅವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.
ಪಿಡಿಒ ಬಿ.ಎಚ್. ಮುಜಾವರ ಮಾತನಾಡಿದರು. ರವಿ ಮಾಸರೆಡ್ಡಿ, ಭಾರತಿ ಹೀರೆಮಠ, ಮದರಸಾಬ್ ಇನಾಮದಾರ, ರೇಣುಕಾ ರಸಾಳಕರ, ಸವಿತಾ ತಳವಾರ, ಮಹೇಶ ಕಗ್ಗೋಡದವರ, ಅಶೋಕ ಕೋಟ್ಯಾಳ, ರೇಖಾ ಪಾಟೀಲ, ಗೀತಾ, ರೂಪಾ ಇದ್ದರು.