Advertisement

1.40 ಲಕ್ಷ  ಜನರ ಕೈ ಹಿಡಿದ ನರೇಗಾ

12:41 AM Jun 04, 2021 | Team Udayavani |

ಬೆಂಗಳೂರು: ಕೋವಿಡ್  ಸಂಕಷ್ಟ ಲಕ್ಷಾಂತರ ನಗರವಾಸಿಗಳನ್ನು ಸಂಕಷ್ಟಕ್ಕೆ ತಳ್ಳಿದ್ದು, ಬಹಳಷ್ಟು ಮಂದಿ ನೆಲೆ ಕಂಡುಕೊಳ್ಳಲು ಹಳ್ಳಿ ಸೇರಿದ್ದಾರೆ. ವಿಶೇಷವೆಂದರೆ ಕಷ್ಟಕಾಲದಲ್ಲಿ ಅವರ ಕೈಹಿಡಿದಿರುವುದು ನರೇಗಾ.

Advertisement

ಮೊದಲ ಮತ್ತು ಎರಡನೇ ಅಲೆ ಸೇರಿ ಒಟ್ಟು 4.10 ಲಕ್ಷ ಮಂದಿ ಹಳ್ಳಿಗಳಿಗೆ ವಾಪಸಾಗಿದ್ದು ಅವರಲ್ಲಿ 1.40 ಲಕ್ಷ ಜನರಿಗೆ ನರೇಗಾ ಉದ್ಯೋಗ “ಖಾತರಿ’ ನೀಡಿದೆ.

ಕಳೆದ ವರ್ಷ ಕೊರೊನಾದಿಂದಾಗಿ ಊರಿಗೆ ಹೋಗಿದ್ದರೂ ಮರಳಿ ನಗರಕ್ಕೆ ಬಂದು ಎರಡನೇ ಅಲೆಯ ಆತಂಕದಿಂದಾಗಿ ಮತ್ತೆ ಹಳ್ಳಿ ಸೇರಿದ 1.15 ಲಕ್ಷ ಜನರು ಗ್ರಾಮಕ್ಕೆ ಹೋದ ದಿನವೇ ಉದ್ಯೋಗ “ಖಾತರಿ’ಪಡಿಸಿಕೊಂಡಿದ್ದಾರೆ. ಅವರೆಲ್ಲ ಕಳೆದ ವರ್ಷವೇ ಜಾಬ್‌ ಕಾರ್ಡ್‌ ಪಡೆದಿದ್ದರಿಂದ ಕೆಲಸ ಸುಲಭವಾಗಿ ಸಿಕ್ಕಿದೆ. ಈ ವರ್ಷ ಮತ್ತೆ 25 ಸಾವಿರ ಮಂದಿ ಜಾಬ್‌ ಕಾರ್ಡ್‌ ಪಡೆದಿದ್ದು, ಒಟ್ಟು 1.40 ಲಕ್ಷ ಮಂದಿ ನರೇಗಾದಿಂದ ಕೆಲಸ ಪಡೆದಂತಾಗಿದೆ.

2 ಲಕ್ಷ ಮಂದಿ ಕೃಷಿ ಚಟುವಟಿಕೆ :

ಹಳ್ಳಿಗಳಿಗೆ ಹೋಗಿ ಪಂಚಾಯತ್‌ನಲ್ಲಿ ಹೆಸರು ನೋಂದಾಯಿಸಿದ 4.10 ಲಕ್ಷ ಜನರ ಪೈಕಿ 2 ಲಕ್ಷ ಮಂದಿ ಸ್ವಂತ ಜಮೀನು ಅಥವಾ ಜಮೀನು ಗುತ್ತಿಗೆಗೆ ಪಡೆದು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮೂಲಗಳು ತಿಳಿಸಿವೆ.

Advertisement

ನಗರ ತೊರೆದವರೆಷ್ಟು? :

ರಾಜ್ಯದ 6 ಸಾವಿರ ಪಂಚಾಯತ್‌ಗಳ ವ್ಯಾಪ್ತಿಯ ಗ್ರಾಮಗಳಿಗೆ ಕಳೆದ ವರ್ಷ 3,27,736 ಜನರು ನಗರಗಳಿಂದ ಮರಳಿದ್ದರು. ಈ ವರ್ಷ, ಕಳೆದ ವರ್ಷ ಹೋದವರು ಸೇರಿ ಹೊಸದಾಗಿ 81,669 ಮಂದಿ ಹಳ್ಳಿಗಳಿಗೆ ಮರಳಿದ್ದಾರೆ. ಪಂಚಾಯತ್‌ಗಳಿಂದ ನೆರವು ಬಯಸಿ 2,13,312 ಮಂದಿ ಬೇಡಿಕೆ ಸಲ್ಲಿಸಿ 1,30,900 ಮಂದಿ ನರೇಗಾ ಜಾಬ್‌ ಕಾರ್ಡ್‌ ಪಡೆದಿದ್ದಾರೆ. ಉಳಿದವರು ಕೃಷಿ ಹಾಗೂ ಪಶು ಸಂಗೋಪನೆ ಘಟಕ ನಿರ್ಮಾಣಕ್ಕೆ ನೆರವು ಪಡೆದುಕೊಂಡಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೆಚ್ಚಿನ ಮಾನವ ದಿನ ಸೃಜನೆ ಮಾಡಲಾಗಿದ್ದು, ಯಾರೇ ಕೇಳಿದರೂ ತತ್‌ಕ್ಷಣ ಕೆಲಸ ಕೊಟ್ಟು ಅನಂತರ ಉಳಿದ ಪ್ರಕ್ರಿಯೆ ಮಾಡಬೇಕು ಎಂಬ ಸೂಚನೆ ಸಹ ನೀಡಲಾಗಿದೆ.

ಕಳೆದ ವರ್ಷ 1,15,300 ಮತ್ತು ಈ ವರ್ಷ 25,287 ಮಂದಿ ಹೊಸದಾಗಿ ಜಾಬ್‌ ಕಾರ್ಡ್‌ ಪಡೆದಿದ್ದಾರೆ. ಒಮ್ಮೆ ಕಾರ್ಡ್‌ ಪಡೆದರೆ ಬಯಸಿದಾಗ ಉದ್ಯೋಗ ಪಡೆಯಬಹುದು. ಪ್ರತಿಯೊಬ್ಬರಿಗೂ 100 ದಿನ ಕೆಲಸ ನೀಡಲಾಗುತ್ತಿದೆ.ಅನಿರುದ್ಧ್  ಶ್ರವಣ್‌, ಗ್ರಾಮೀಣಾಭಿವೃದ್ಧಿ ಆಯುಕ್ತರು (ನರೇಗಾ)

 

ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next