ರಾಮನಗರ: ನರೇಗಾ ಯೋಜನೆಯಲ್ಲಿ ಒಗ್ಗೂಡಿಕೆಯಿಂದ ಕೆಲಸ ಮಾಡಿದರೇ ಮಾತ್ರ ಜನರಿಗೆ ನೂರಕ್ಕೆ ನೂರರಷ್ಟು ಫಲ ಸಿಗುತ್ತದೆ ಎಂದು ಜಿಪಂ ಸಿಇಒ ದಿಗ್ವಿಜಯ್ ಬೋಡ್ಕೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ 2022- 23ನೇ ಸಾಲಿನಲ್ಲಿ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನದ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತ ನಾಡಿದ ಅವರು, ಮಾನವ ದಿನಗಳ ಸೃಜನೆ, 2022-23ನೇ ಸಾಲಿನಲ್ಲಿ ವೈಯಕ್ತಿಕ ಕಾಮಗಾರಿಗಳ ಪ್ರಗತಿ ವಿವರ, ಸಾಮಾಜಿಕ ಲೆಕ್ಕ ಪರಿಶೋಧನೆ, ಸ್ವಸಹಾಯ ಸಂಘದ ಮಹಿಳೆಯರಿಂದ ನರ್ಸರಿ ಅಭಿವೃದ್ಧಿ, ಜಾಬ್ ಕಾರ್ಡ್ ಪರಿಷ್ಕರಣೆ, ಆರ್ಥಿಕ ಪ್ರಗತಿ, ಜಿಯೋಟ್ಯಾಗ್ ಸಂಬಂಧ ಹಲವು ವಿಚಾರದ ಬಗ್ಗೆ ಸಮಾಲೋಚಿಸಿದರು.
ಈಗಾಗಲೇ ಸಾಕಷ್ಟು ನೀರಾವರಿ ಕಾಮಗಾರಿಗಳು ಅಭಿವೃದ್ಧಿಯಾಗಿದೆ. ಜಲಶಕ್ತಿ ಅಭಿಯಾನದಡಿಯಲ್ಲಿ ಚೆಕ್ ಡ್ಯಾಂ, ನಾಲಾ, ಗೊಕಟ್ಟೆ, ಕೆರೆ ಅಭಿವೃದ್ಧಿ ಸೇರಿ ಹಲವು ಕಾಮಗಾರಿಗಳು ರೈತರಿಗೆ ಸಹಕಾರಿ ಯಾಗಿದೆ. ಮುಂದೆಯೂ ಕೂಡ ಇದೇ ರೀತಿ ಒಗ್ಗೂಡಿ ಕೆಲಸ ನಿರ್ವಹಿಸಿ ಎಂದು ಸೂಚನೆ ನೀಡಿದರು.
101 ಪೌಷ್ಟಿಕ ಕೈತೋಟ ನಿರ್ಮಾಣ ಮಾಡಿ: ವೈಯಕ್ತಿಕ ಶೌಚಾಲಯ ಪ್ರಗತಿ, ಘನತ್ಯಾಜ್ಯ, ದ್ರವತ್ಯಾಜ್ಯ, ಒಣತ್ಯಾಜ್ಯ ಕಾಮಗಾರಿಗಳ ಪ್ರಗತಿ ತಾಲೂಕುಗಳಲ್ಲಿ ಗರಿಗೆದರಿವೆ. ಪ್ರತಿ ದಿನ ಆಟೋ ಮೂಲಕ ಕಸ ಸಂಗ್ರಹಿಸಿ, ಸ್ವತ್ಛತೆಯನ್ನು ಕಾಪಾಡಿ ಎಂದು ನಿರ್ದೇಶನ ನೀಡಿದರು. 126 ಗ್ರಾಮ ಪಂಚಾಯಿತಿಯಲ್ಲಿ ಸಂಜೀವಿನಿ ಶೆಡ್ ನಿರ್ಮಾಣದ ಮಾಹಿತಿ ಪಡೆದ ಅವರು, ಪ್ರತೀ ಗ್ರಾಪಂಗಳಿಗೆ 101 ಪೌಷ್ಟಿಕ ಕೈತೋಟ ನಿರ್ಮಾಣದ ಬಗ್ಗೆ ಗಮನ ಕೊಡಿ ಎಂದು ಪಿಡಿಒಗೆ ನಿರ್ದೇಶನ ನೀಡಿದರು.
ಮಳೆ ನೀರು ಕೊಯ್ಲು ಅನುಷ್ಠಾನಗೊಳಿಸಿ: ಜಿಪಂ ಉಪಕಾರ್ಯದರ್ಶಿ ರಮೇಶ್ ಟಿ.ಕೆ ಮಾತನಾಡಿ, ಮಳೆ ನೀರು ಕೊಯ್ಲು ಅನ್ನು ಗ್ರಾಪಂ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ನಮ್ಮ ಹೊಲ ನಮ್ಮ ದಾರಿ, ಜಾಬ್ ಪರಿಷ್ಕರಣೆ, ಹಾಗೂ ಗುರಿ ನೀಡಿರುವ ಪೌಷ್ಟಿಕ ಕೈತೋಟದ ನಿರ್ಮಾಣದ ಬಗ್ಗೆ ಕ್ರಮ ವಹಿಸಿ ಎಂದರು.
ಜಿಲ್ಲಾ ಮುಖ್ಯ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರು, ರೇಷ್ಮೆ ಇಲಾಖೆಯ ಉಪ ನಿರ್ದೇಶಕರು, ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿಗಳು, ಎಲ್ಲಾ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕರು, ಅನುಷ್ಠಾನ ಇಲಾಖೆಯ ಅಧಿಕಾರಿಗಳು, ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ಎಂಐಎಸ್ ಸಂಯೋಜಕರು, ಐಇಸಿ ಸಂಯೋಜಕರು, ಸಹಾಯಕ ತಾಂತ್ರಿಕ ಅಭಿಯಂತರರು, ನರೇಗಾ ಅನುಷ್ಠಾನ ಇಲಾಖೆಯ ತಾಂತ್ರಿಕ ಸಹಾಯಕರು, ಜಿಲ್ಲಾ ನರೇಗಾ ಶಾಖೆ ಸಿಬ್ಬಂದಿ ಇದ್ದರು.