Advertisement
ಲಾಕ್‌ಡೌನ್ ಇದ್ದಾಗ್ಯೂ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ನಡೆಸಲು ಸರಕಾರ ಅನುವು ಮಾಡಿಕೊಟ್ಟಿದೆ. ದ.ಕ. ಜಿಲ್ಲೆಯಲ್ಲಿ 2,471 ಮಂದಿ ಪ್ರಸ್ತುತ ನರೇಗಾದಡಿ ಕೂಲಿ ಮಾಡುತ್ತಿದ್ದಾರೆ. ಎ. 1ರಿಂದ ರೂ. 249ರಿಂದ 275ಕ್ಕೆ ಏರಿಕೆ ಮಾಡಲಾಗಿದೆ. ಒಂದೆಡೆ ಲಾಕ್‌ಡೌನ್‌ನಿಂದಾಗಿ ಇತರ ಕೆಲಸಗಳು ನಡೆಯುತ್ತಿಲ್ಲವಾದ್ದರಿಂದ ಗ್ರಾಮೀಣ ಭಾಗಗಳ ಕಾರ್ಮಿಕರಿಗೆ ನರೇಗಾ ಕೆಲಸ ನೀಡುತ್ತಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವುದಕ್ಕೆ ಸುಲಭವಾಗುವಂತೆ ಆರಂಭದಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ನಡೆಸುವಂತೆ ಸರಕಾರ ಆದೇಶ ನೀಡಿತ್ತು. ಇದೀಗ ಸಾಮುದಾಯಿಕ ಕೆಲಸಗಳಿಗೂ ಅವಕಾಶ ಮಾಡಿಕೊಟ್ಟಿದೆ. ಆದರೆ ಕೆಲಸದ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಪ್ರಸ್ತುತ ಜಿಲ್ಲೆಯ ಯಾವ ಗ್ರಾ.ಪಂ.ಗಳಲ್ಲಿ ವೈಯಕ್ತಿಕ ಕೆಲಸಗಳಿವೆಯೋ ಅಂತಹ ಗ್ರಾ.ಪಂ.ಗಳಿಗೆ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಕ್ರಿಯಾಯೋಜನೆ ಆಗಿರುವ ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ಕೆಲಸ ನಡೆಯುತ್ತಿದೆ. ಕೃಷಿ ಹೊಂಡ ನಿರ್ಮಾಣ, ಇಂಗುಗುಂಡಿಗಳ ನಿರ್ಮಾಣ, ಕೊಟ್ಟಿಗೆ ನಿರ್ಮಾಣ, ಕೆರೆಗಳ ಹೂಳೆತ್ತುವುದು, ಮಳೆ ನೀರು ಕೊಯ್ಲು ಕಾಮಗಾರಿ, ಕೆಲವೊಂದು ತೋಟದ ಕೆಲಸಗಳು ಮೊದಲಾದ ಕೆಲಸಗಳಿಗೆ ಅವಕಾಶ ನೀಡಲಾಗುತ್ತಿದೆ. ಸ್ಥಳೀಯ ಗ್ರಾ.ಪಂ.ಗಳು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಸೂಚಿಸಲಾಗಿದೆ. ಆಸಕ್ತರು ಹೆಚ್ಚಾಗಿದ್ದಾರೆ; ಅವಕಾಶ ಸದ್ಬಳಕೆಯಾಗಲಿ
ಜಿಲ್ಲೆಯಲ್ಲಿ ಆರಂಭದ ದಿನಗಳಲ್ಲಿ ನರೇಗಾ ಯೋಜನೆಯಡಿ ಕಾರ್ಮಿಕರು ಆಸಕ್ತಿ ತೋರಿಸುತ್ತಿರಲಿಲ್ಲ. ಪ್ರಸ್ತುತ ಆಸಕ್ತರ ಸಂಖ್ಯೆ ಹೆಚ್ಚುತ್ತಿದೆ. ಎಪ್ರಿಲ್‌ನಿಂದ ದಿನಗೂಲಿ ಹೆಚ್ಚಾಗಿರುವುದರಿಂದ ನರೇಗಾದಡಿ ಕೂಲಿ ಮಾಡುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಲಾಕ್‌ಡೌನ್ ವೇಳೆಯಲ್ಲಿಯೂ ನರೇಗಾದಡಿ ಕೆಲಸ ಮಾಡಲು ನೀಡಿರುವ ಅವಕಾಶ ಹೆಚ್ಚು ಹೆಚ್ಚು ಬಳಕೆಯಾಗಲಿ.
- ಡಾ | ಸೆಲ್ವಮಣಿ ಆರ್.
ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದ.ಕ. ಜಿ.ಪಂ.