Advertisement

Kaikamba: ನರೇಗಾ ಸಾಧನೆ: ಆಗಸ್ಟ್‌ನಲ್ಲಿ ಮೂಡುಬಿದಿರೆ ನಂ.1

02:44 PM Sep 04, 2024 | Team Udayavani |

ಕೈಕಂಬ:  ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಗುರಿ ಸಾಧನೆಯಲ್ಲಿ ಆಗಸ್ಟ್‌ ತಿಂಗಳಲ್ಲಿ ಮೂಡುಬಿದಿರೆ ತಾಲೂಕು ಮೊದಲ ಸ್ಥಾನದಲ್ಲಿದೆ. ಈ ವರ್ಷ ನರೇಗಾ ಸಾಧನೆಯಲ್ಲಿ ದ.ಕ. ಜಿಲ್ಲೆ ಹಿಂದೆ ಬಿದ್ದಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಮಂಗಳೂರು, ಮೂಡುಬಿದಿರೆ ಹಾಗೂ ಮೂಲ್ಕಿ ತಾಲೂಕುಗಳಲ್ಲಿ ಆಗಸ್ಟ್‌ ತಿಂಗಳಲ್ಲಿ ಆಗಿರುವ ಪ್ರಗತಿಯನ್ನು ಗಮನಿಸಿದರೆ ಇವು ಗುರಿ ತಲುಪುವುದು ಬಹುತೇಕ ಖಚಿತ ಅನಿಸುತ್ತದೆ.

Advertisement

ಮೊದಲ ಸ್ಥಾನಕ್ಕೆ ಜಿಗಿದ ಮೂಡುಬಿದಿರೆ
ಜುಲಾಯಿ ತಿಂಗಳಲ್ಲಿ ನರೇಗಾ ಯೋಜನೆಯ ಗುರಿ ತಲುಪುವಲ್ಲಿ ಮಂಗಳೂರು ತಾಲೂಕು ಇತರ ತಾಲೂಕುಗಳಿಗಿಂತ ಮುಂದಿತ್ತು. ಅದರೆ, ಆಗಸ್ಟ್‌ ತಿಂಗಳಲ್ಲಿ ಮೂಡುಬಿದಿರೆ ಅತ್ಯುತ್ತಮ ಪ್ರದರ್ಶನ ನೀಡಿ ಮಂಗಳೂರನ್ನು ಹಿಂದಿಕ್ಕಿದೆ. ಅದರಲ್ಲೂ ಐದು ಪಂಚಾಯತ್‌ಗಳು ಶೇ. 100 ಸಾಧನೆ ಮಾಡಿವೆ. ಹೀಗಾಗಿ ಮೂಡುಬಿದಿರೆ ಜಿಲ್ಲೆಯಲ್ಲೇ ನಂಬರ್‌ ವನ್‌ ಸ್ಥಾನ ಪಡೆಯಲು ಸಾಧ್ಯವಾಗಿದೆ. ಮೂಡುಬಿದಿರೆ ತಾಲೂಕು ಆಗಸ್ಟ್‌ 13ರಿಂದ ವೇಗವನ್ನು ಪಡೆದುಕೊಂಡಿರುವುದು ಕಂಡುಬರುತ್ತದೆ. ಈ ಭಾಗದಲ್ಲಿ ನಡೆದಿರುವ ಕೃಷಿ ಚಟುವಟಿಕೆಗಳೇ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಹುರುಪಿಗೆ ಕಾರಣಗಳೇನು?
ನರೇಗಾ ಕಾಮಗಾರಿ ನಡೆಸುವಲ್ಲಿ ಜನರಲ್ಲಿ ಹುರುಪು ಮೂಡಲು ಹಲವು ಕಾರಣಗಳಿವೆ. ಸಾಮಾನ್ಯವಾಗಿ ನರೇಗಾ ಕಾಮಗಾರಿ ಮಾಡುವುದಾದರೆ ಪ್ರತಿ ದಿನವೂ ಭಾವಚಿತ್ರ ತೆಗೆಯಬೇಕು, ಪ್ರಗತಿ ವರದಿ ನೀಡಬೇಕು ಎಂಬ ನೆಪವೊಡ್ಡಿ ಹೆಚ್ಚಿನವರು ಯೋಜನೆಯನ್ನು ಬಳಸಿಕೊಳ್ಳುವುದಿಲ್ಲ. ಆದರೆ, ಮೂಡುಬಿದಿರೆ ತಾ.ನ ಕೃಷಿಕರು ಇದಕ್ಕೆ ತಲೆಕೆಡಿಸಿಕೊಳ್ಳದೆ ಮುಂದುವರಿದಿದ್ದಾರೆ. ಇಲ್ಲಿ ಖಾಸಗಿಯಾಗಿಯೇ ಹೆಚ್ಚು ಕಾಮಗಾರಿಗಳು ನಡೆದಿವೆ. ಪ್ರತಿ ತಿಂಗಳು ಯಾವ ಗ್ರಾ.ಪಂ.ಸಾಧನೆ ಮಾಡಿದೆಯೋ ಅದನ್ನು ಗುರುತಿಸಿ ಸಮ್ಮಾನವನ್ನೂ ಮಾಡುತ್ತಿರುವುದು ಉತ್ಸಾಹ ಹುಟ್ಟಲು ಕಾರಣವಾಗಿದೆ.

ಮೂಡುಬಿದಿರೆ: ಗುರಿಸಾಧನೆಯ ಗುಟ್ಟು
ವಾಲ್ಪಾಡಿ ಗ್ರಾಮ ಪಂಚಾಯತ್‌ ಆಗಸ್ಟ್‌ ತಿಂಗಳಲ್ಲಿ ಶೇ.133.14 ಸಾಧನೆಯ ಮೂಲಕ ವರ್ಷದ ಗುರಿಯಲ್ಲೂ ಶೇ.68.22ನ್ನು ಪೂರೈಸಿದೆ. ಪಡುಮಾರ್ನಾಡು ಗ್ರಾ.ಪಂ. ಶೇ. 114.70, ಬೆಳುವಾಯಿ ಶೇ.101.55, ಇರುವೈಲು ಶೇ.101.50, ಪುತ್ತಿಗೆ 101.40, ಶಿರ್ತಾಡಿ ಗ್ರಾಮ ಪಂಚಾಯತ್‌ ಶೇ.99.31 ಸಾಧನೆ ಮಾಡಿದೆ. ಪಂಚಾಯತ್‌ಗಳ ಈ ಸಾಧನೆ ಮೂಡುಬಿದಿರೆ ತಾಲೂಕನ್ನು ಮುಂಚೂಣಿಗೆ ತಂದು ನಿಲ್ಲಿಸಿದೆ. ನರೇಗಾ ಕಾಮಗಾರಿಯಲ್ಲಿ ಕೃಷಿ ಚಟುವಟಿಕೆಯೇ ಮುಖ್ಯವಾಗಿ ನಡೆದಿದೆ. ಅವರಣ ಗೋಡೆ ನಿರ್ಮಾಣದಂಥ ಸರಳ ಚಟುವಟಿಕೆಗಳು ನಡೆಯದಿರುವುದು ಗುರಿಸಾಧನೆಗೆ ಹೆಚ್ಚಿನ ಮಹತ್ವ ತಂದುಕೊಟ್ಟಿದೆ.

ಯಾವ ತಾಲೂಕಿನ ಸಾಧನೆ ಏನು?
ಮೂಡುಬಿದಿರೆ ತಾಲೂಕು: ಈ ವರ್ಷದ ಒಟ್ಟು ಗುರಿ 82,407 ಮಾನವ ದಿನಗಳು. ಅದರಲ್ಲಿ ಆಗಸ್ಟ್‌ ತನಕ 39,130 ದಿನಗಳೆಂದು ನಿಗದಿಯಾಗಿವೆ. ಈಗಾಗಲೆ ಒಟ್ಟು 35,971 ಮಾನವ ದಿನಗಳನ್ನು ವ್ಯಯಿಸಲಾಗಿದೆ. ಅಂದರೆ ವಾರ್ಷಿಕ ಲೆಕ್ಕಾಚಾರದಲ್ಲಿ ಶೇ.43.65 ಸಾಧನೆಯಾಗಿದ್ದರೆ, ಇದುವರೆಗೆ ಗುರಿಯಲ್ಲಿ ಶೇ. 91.93 ಸಾಧನೆ ಮಾಡಲಾಗಿದೆ.

Advertisement

ಮಂಗಳೂರು ತಾಲೂಕು: ಈ ವರ್ಷದ ಗುರಿ 83,009 ಮಾನವ ದಿನಗಳು. ಆಗಸ್ಟ್‌ ತನಕದ ಗುರಿಯಾದ 39,416 ಮಾನವ ದಿನಗಳಲ್ಲಿ 35,230 ಮಾನವ ದಿನಗಳನ್ನು ವ್ಯಯಿಸಲಾಗಿದೆ. ವಾರ್ಷಿಕ ಲೆಕ್ಕಾಚಾರದಲ್ಲಿ ಶೇ. 42.44 ಮತ್ತು ಆಗಸ್ಟ್‌ ತನಕದ ಗುರಿಯಲ್ಲಿ ಶೇ.89.38 ಸಾಧನೆ ಮಾಡಲಾಗಿದೆ.

ಮೂಲ್ಕಿ ತಾಲೂಕು: ಮೂಲ್ಕಿ ತೀವ್ರ ಸ್ಪರ್ಧೆ ನೀಡುತ್ತಿದ್ದು, ಆಗಸ್ಟ್‌ತಿಂಗಳ ತನಕ ಶೇ .86 .34ರಷ್ಟು ಸಾಧನೆ ಮಾಡಿದೆ. ವಾರ್ಷಿಕ ಲೆಕ್ಕಾಚಾರದಲ್ಲಿ ಶೇ.41.00 ಸಾಧನೆಯಾಗಿದೆ.

ಇತರ ತಾಲೂಕುಗಳು: ನಾಲ್ಕನೇ ಸ್ಥಾನದಲ್ಲಿ ಕಡಬ (ಶೇ. 79 65), ಐದನೇ ಸ್ಥಾನದಲ್ಲಿ ಪುತ್ತೂರು (ಶೇ. 74.47), ಆರನೇ ಸ್ಥಾನದಲ್ಲಿ ಬೆಳ್ತಂಗಡಿ (ಶೇ. 69.74) ಇದೆ. ಸುಳ್ಯ (ಶೇ. 69.24), ಬಂಟ್ವಾಳ (ಶೇ. 68.91), ಉಳ್ಳಾಲ (ಶೇ. 63.55) ಕೊನೆಯ ಮೂರು ಸ್ಥಾನದಲ್ಲಿವೆ. ಯಾವಾಗಲೂ ಪ್ರಥಮ ಸ್ಥಾನ ಪಡೆಯುತ್ತಿದ್ದ ಸುಳ್ಯ ತಾಲೂಕು 7ನೇ ಸ್ಥಾನಕ್ಕೆ ಜಾರಿದೆ.

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next