Advertisement

ನರೇಗಾ; 60 ಲಕ್ಷ ಮಾನವ ದಿನ ಸೃಜನೆ ಗುರಿ

06:13 PM May 13, 2022 | Team Udayavani |

ಹಾವೇರಿ: ಜಿಲ್ಲೆಯಲ್ಲಿ 2022-23ನೇ ಸಾಲಿನ ಮಹಾತ್ಮ ಗಾಂಧಿ  ನರೇಗಾ ಕ್ರಿಯಾ ಯೋಜನೆ ಸಿದ್ಧಪಡಿಸಿರುವ ಜಿಪಂ ಬರೋಬ್ಬರಿ 60 ಲಕ್ಷ ಮಾನವ ದಿನಗಳ ಸೃಜನೆಯಾಗುವ ಗುರಿ ಹೊಂದಿದ್ದು, ಒಟ್ಟು 1,29,299 ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆ.

Advertisement

ಇಡೀ ರಾಜ್ಯಕ್ಕೆ ಮಾದರಿ ಆಗುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ಮಾದರಿಯಾಗುವಂತೆ ನಿರ್ಮಲ ಹಾವೇರಿ ಕಾರ್ಯಕ್ರಮದಡಿ ಗ್ರಾಮೀಣ ಭಾಗದಲ್ಲಿ ಬೂದು ನೀರು ನಿರ್ವಹಣೆಗಾಗಿ ಪ್ರತಿ ಗ್ರಾಪಂಗಳಿಗೆ 1 ಕಿ.ಮೀ ಚರಂಡಿ ನಿರ್ಮಾಣ, ಸಮಗ್ರ ಶಾಲಾ ಅಭಿವೃದ್ಧಿಯಡಿ ಆಟದ ಮೈದಾನ ಅಭಿವೃದ್ದಿ, ಭೋಜನಾಲಯ ನಿರ್ಮಾಣ, ಅಡುಗೆ ಕೋಣೆ ನಿರ್ಮಾಣ, ಪೌಷ್ಟಿಕ ಕೈ ತೋಟ, ಸಮಗ್ರ ಕೆರೆಗಳ ಅಭಿವೃದ್ಧಿ, ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಪವಿತ್ರ ವನ ನಿರ್ಮಾಣ, ಗ್ರಂಥಾಲಯಗಳು, ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಿ ಹೈಟೆಕ್‌ ಸ್ಪರ್ಶ ನೀಡುವ ಗ್ರಾಪಂ ನರೇಗಾ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಮುಂದಾಗಿದೆ.

1,29,299 ಕಾಮಗಾರಿ ಗುರಿ: ಈ ಬಾರಿ ವಿಶೇಷವಾಗಿ ಜಿಲ್ಲೆಯ ಜಲಮೂಲಗಳ ಸಂರಕ್ಷಣೆ, ನಿರ್ಮಲ ಹಾವೇರಿ ಕಾರ್ಯಕ್ರಮದಡಿ ಚರಂಡಿ ನಿರ್ಮಾಣ ಸೇರಿದಂತೆ ಶಾಲಾಭಿವೃದ್ಧಿ, ಅಂತರ್ಜಲ ಹಾಗೂ ಹಸಿರೀಕರಣ ಕಾಮಗಾರಿಗಳಿಗೆ ಆದ್ಯತೆ ಕೊಡಲು ಕ್ರಿಯಾ ಯೋಜನೆ ತಯಾರಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ನರೇಗಾ ಯೋಜನೆಯಡಿ ಅಂತರ್ಜಲ ಚೇತನ-ಜಲಸಂರಕ್ಷಣೆ ಯೋಜನೆಯಡಿ 19,960 ಕಾಮಗಾರಿಗಳು, ಹಸಿರೀಕರಣದಡಿ 1409 ಕಾಮಗಾರಿಗಳು, ರೈತರ ಕ್ರಿಯಾಯೋಜನೆಯಡಿ 96,097 ಕಾಮಗಾರಿಗಳು, ಶಾಲಾ ಅಭಿವೃದ್ಧಿಯಡಿ 1572 ಕಾಮಗಾರಿಗಳು ಹಾಗೂ ಇತರೆ 10,261 ಕಾಮಗಾರಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲಾದ್ಯಂತ ಕೈಗೊಳ್ಳಲು ಜಿಪಂ ತನ್ನ ವಾರ್ಷಿಕ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ಒಟ್ಟು 348443.09 ಲಕ್ಷ ರೂ.ಗಳ ಅಂದಾಜು ಮೊತ್ತದಲ್ಲಿ ಶೇ.71.20 ಕೂಲಿ ಹಣ ಅಂದರೆ ಒಟ್ಟು 248086.21 ಲಕ್ಷಗಳು ಹಾಗೂ ಸಾಮಗ್ರಿ ಮೊತ್ತ ಶೇ.28.80 ಅಂದರೆ ಒಟ್ಟು 100356.88 ಲಕ್ಷಗಳನ್ನು ಅಂದಾಜು ಮಾಡಲಾಗಿದೆ.

2,46,437 ಜಾಬ್‌ ಕಾರ್ಡ್‌ ಹಂಚಿಕೆ:ಜಿಲ್ಲೆಯಲ್ಲಿ ಪ್ರಸ್ತುತ ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟು 2,46,437 ಜಾಬ್‌ ಕಾರ್ಡ್‌ಗಳನ್ನು ಹಂಚಿಕೆ ಮಾಡಿದ್ದು, ಆ ಪೈಕಿ 1,44,642 ಉದ್ಯೋಗ ಚೀಟಿಗಳು ಸಕ್ರಿಯವಾಗಿ ಇವೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಪುರುಷರಿಗಿಂತ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತಿದೆ ಎಂದು ಜಿಪಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಮಾನವ ದಿನ ಸೃಜನೆಯಲ್ಲಿ ಸಾಧನೆ
ಪ್ರತಿವರ್ಷ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಸೃಜನೆಯಲ್ಲಿ ಜಿಲ್ಲೆ ಉತ್ತಮ ಸಾಧನೆ ತೋರಿದೆ. ಕಳೆದ 2018-19ರಲ್ಲಿ 36.08 ಲಕ್ಷ ಇದ್ದರೆ 2019-20ರಲ್ಲಿ 31.76 ಲಕ್ಷ, 2020-21ರಲ್ಲಿ 43.85 ಲಕ್ಷ, 2021-22ರಲ್ಲಿ 60.02 ಲಕ್ಷ ಮಾನವ ದಿನಗಳ ಸೃಜನೆ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 60 ಲಕ್ಷ ಮಾನವ ದಿನಗಳ ಸೃಜನೆ ಗುರಿ ಹೊಂದಲಾಗಿದೆ.

ಮಹಾತ್ಮ ಗಾಂಧಿ  ನರೇಗಾ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಒಟ್ಟು 60 ಲಕ್ಷ ಮಾನವ ದಿನಗಳ ಸೃಜನೆ ಮಾಡುವ ಗುರಿ ಹೊಂದಿದ್ದು, ಒಟ್ಟು 1,29,299
ಕಾಮಗಾರಿ ಕೈಗೆತ್ತಿಕೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆ. ಈ ಬಾರಿ ವಿಶೇಷವಾಗಿ ಜಿಲ್ಲೆಯ ಜಲಮೂಲಗಳ ಸಂರಕ್ಷಣೆ, ನಿರ್ಮಲ ಹಾವೇರಿ ಕಾರ್ಯಕ್ರಮದಡಿ ಚರಂಡಿ ನಿರ್ಮಾಣ ಸೇರಿದಂತೆ ಶಾಲಾಭಿವೃದ್ಧಿ, ಅಂತರ್ಜಲ ಹಾಗೂ ಹಸಿರೀಕರಣ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದೆ.
ಮಹಮ್ಮದ್‌ ರೋಷನ್‌, ಜಿಪಂ ಸಿಇಒ, ಹಾವೇರಿ

ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next