Advertisement

ನಾರಾಯಣನ ಓಟ ಜೋರು

09:53 AM Jan 01, 2020 | Lakshmi GovindaRaj |

ರಕ್ಷಿತ್‌ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’ ಸಿನಿಮಾದ ಓಟ ಜೋರಾಗಿದೆ. ದಿನದಿಂದ ದಿನಕ್ಕೆ ಚಿತ್ರವನ್ನು ನೋಡುವವರ ಸಂಖ್ಯೆ ಹೆಚ್ಚಾಗುವ ಜೊತೆಗೆ ಚಿತ್ರದ ಕಲೆಕ್ಷನ್‌ ಕೂಡಾ ಹೆಚ್ಚಾಗುತ್ತಿದೆ. ಇದು ಚಿತ್ರತಂಡದ ಮೊಗದಲ್ಲಿ ನಗುಮೂಡಿಸಿದೆ. ಇದೇ ಕಾರಣದಿಂದ ಚಿತ್ರಮಂದಿರಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರಸ್ತುತ “ಅವನೇ ಶ್ರೀಮನ್ನಾರಾಯಣ’ ಚಿತ್ರ 400ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಎರಡನೇ ವಾರದಿಂದ 80 ಕೇಂದ್ರಗಳನ್ನು ಸೇರಿಸಲು ಚಿತ್ರತಂಡ ಮುಂದಾಗಿದೆ.

Advertisement

ಸಾಮಾನ್ಯವಾಗಿ ಚಿತ್ರಗಳು ವಾರಾಂತ್ಯದಲ್ಲಿ ಹೆಚ್ಚು ಕಲೆಕ್ಷನ್‌ ಹಾಗೂ ಹೌಸ್‌ಫ‌ುಲ್‌ ಆಗುತ್ತವೆ. ಆದರೆ, “ಅವನೇ ಶ್ರೀಮನ್ನಾರಾಯಣ’ ಚಿತ್ರ ವಾರಾಂತ್ಯದ ಹೊರತಾಗಿ ಇತರೆ ದಿನಗಳಲ್ಲೂ ಹೌಸ್‌ಫ‌ುಲ್‌ ಪ್ರದರ್ಶನ ಕಾಣುತ್ತಿರೋದು ಚಿತ್ರತಂಡ ಖುಷಿಗೆ ಕಾರಣವಾಗಿದೆ. ಇನ್ನು, ಈಗಾಗಲೇ ಚಿತ್ರ ವಿದೇಶಗಳಲ್ಲಿ ಬಿಡುಗಡೆಯಾಗಿ ಅಲ್ಲಿನ ಪ್ರೇಕ್ಷಕರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎರಡನೇ ವಾರಕ್ಕೂ ಮುಂಗಡ ಬುಕ್ಕಿಂಗ್‌ ಬಹುತೇಕ ಫ‌ುಲ್‌ ಆಗಿವೆ.

ನಿರ್ಮಾಪಕ ಪುಷ್ಕರ್‌ ತಮ್ಮ ಪುಷ್ಕರ್‌ ಫಿಲಂಸ್‌ನಡಿ ವಿದೇಶಗಳಲ್ಲಿ ಸಿನಿಮಾ ಬಿಡುಗಡೆ ಮಾಡಿದ್ದಾರೆ. ಯುಕೆ, ಯೂರೋಪ್‌, ಆಸ್ಟ್ರೇಲಿಯಾ, ಯುಎಸ್‌ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ದೇಶಗಳಲ್ಲಿ ಈಗಾಗಲೇ ಬಿಡುಗಡೆಯಾಗಿದೆ. ಇನ್ನು ಎರಡನೇ ವಾರಕ್ಕೆ ಫ್ರಾನ್ಸ್‌, ಪೋಲ್ಯಾಂಡ್‌, ಕೀನ್ಯಾ, ಜಪಾನ್‌, ಥೈಲ್ಯಾಂಡ್‌, ಇಸ್ರೇಲ್‌ ಸೇರಿದಂತೆ ಮತ್ತಷ್ಟು ದೇಶಗಳಲ್ಲಿ ತೆರೆಕಾಣಲಿದೆ. ಕನ್ನಡದಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆಯುತ್ತಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರ ಹೊಸ ವರ್ಷದಲ್ಲಿ ಪರಭಾಷೆಗಳಲ್ಲೂ ಬಿಡುಗಡೆಯಾಗಲಿದೆ.

ತೆಲುಗು ತಮಿಳು ಹಾಗೂ ಮಲಯಾಳಂ ಹಾಗೂ ಹಿಂದಿಯಲ್ಲಿ ತೆರೆಕಾಣುತ್ತಿದೆ. ಕನ್ನಡಿಗರು ಸದಭಿರುಚಿಯ ಚಿತ್ರಗಳನ್ನು ಪ್ರೋತ್ಸಾಹಿಸುವುದರಿಂದ “ಅವನೇ ಶ್ರೀಮನ್ನಾರಾಯಣ’ ಚಿತ್ರವನ್ನು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಿ, ಇಲ್ಲಿಂದ ಚಿತ್ರದ ಯಶಸ್ವಿ ಪಯಣ ಮುಂದುವರೆಯಬೇಕೆಂಬುದು ಚಿತ್ರತಂಡದ ಆಶಯವಾಗಿತ್ತು. ಅದರಂತೆ ಈಗ ಪರಭಾಷೆಗಳಲ್ಲಿ ಬಿಡುಗಡೆಗೆ ಮುಂದಾಗಿದೆ. ಸಚಿನ್‌ ನಿರ್ದೇಶನದ ಈ ಚಿತ್ರವನ್ನು ಪುಷ್ಕರ್‌ ನಿರ್ಮಿಸಿದ್ದಾರೆ. ಶಾನ್ವಿ, ಪ್ರಮೋದ್‌ ಶೆಟ್ಟಿ, ಬಾಲಾಜಿ ಮನೋಹರ್‌, ಅಚ್ಯುತ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next