Advertisement

Narayanpura Dam: ಬಸವಸಾಗರಕ್ಕೆ ಹೆಚ್ಚಿದ ಒಳಹರಿವು ; ಸದ್ಯ 1.50 ಲಕ್ಷ ಏರಿಕೆ

02:41 PM Jul 27, 2023 | Team Udayavani |

ನಾರಾಯಣಪುರ: ಆಲಮಟ್ಟಿ ಶಾಸ್ತ್ರಿ ಜಲಾಶಯದಿಂದ ಬಸವಸಾಗರಕ್ಕೆ 1.50 ಲಕ್ಷ ಕ್ಯೂಸೆಕ್ ನಷ್ಟು ನೀರು ಹರಿದು ಬರುತ್ತಿದ್ದು, ಹೀಗಾಗಿ ಜು. 27ರ ಗುರುವಾರ ಬೆಳಿಗ್ಗೆ 11 ಗಂಟೆಗೆ ಜಲಾಶಯದ 12 ಕ್ರಸ್ಟಗೇಟ್ ಗಳನ್ನು ತೆರದು ಅಂದಾಜು 70 ಸಾವಿರ ಕ್ಯೂಸೆಕ್ ನಷ್ಟು ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗುತ್ತಿದೆ ಎಂದು ಆಣೆಕಟ್ಟು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇದರಿಂದ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಪ್ರವಾಹ ರೂಪ ಪಡೆದುಕೊಂಡಿದ್ದು ನದಿ ತೀರದ ಜನಕ್ಕೆ ಪ್ರವಾಹದ ಭೀತಿ ಶುರುವಾಗಿದೆ. ಈಗಾಗಲೇ ಕೃಷ್ಣಾ ನದಿ ತೀರದ  ಜಿಲ್ಲೆಗಳಾದ ಯಾದಗಿರಿ, ರಾಯಚೂರು ಎರಡು ಜಿಲ್ಲಾಡಳಿತದವರು ನದಿ ತೀರದ ಗ್ರಾಮಗಳಿಗೆ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಆಡಳಿತಗಳಿಗೆ  ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಿದ್ದು ಜನ ಜಾನುವಾರುಗಳು ನದಿಗೆ ಇಳಿಯದಂತೆ ಹಾಗೂ ಯಾವುದೇ ಚಟುವಟಿಕೆ ನಡೆಸದಂತೆ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿದೆ.

ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ಸೇರಿ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಆಲಮಟ್ಟಿ ಶಾಸ್ತ್ರೀ ಜಲಾಶಯಕ್ಕೆ ಒಳ ಹರಿವು ಸದ್ಯ 1.61 ಲಕ್ಷ ಕ್ಯೂಸೆಕ್ ನಷ್ಟಿದ್ದು ಇನ್ನು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ  ಶಾಸ್ತ್ರೀ ಜಲಾಶಯದಿಂದ ನಾರಾಯಣಪುರ ಬಸವಸಾಗರಕ್ಕೆ 1.50 ಲಕ್ಷ ಕ್ಯೂಸೆಕ್ ನಷ್ಟು ನೀರನ್ನು ಹರಿಬಿಡಲಾಗುತ್ತಿದೆ ಎಂದು ಕೆಬಿಜೆಎನ್ ಎಲ್ ಮೂಲಗಳಿಂದ ತಿಳಿದು ಬಂದಿದೆ.

ಪ್ರವಾಹ ನಿರ್ವಹಣೆ:

ಮಳೆಗಾಲವಾಗಿದ್ದರಿಂದ ಪ್ರವಾಹ ನಿರ್ವಹಣೆ ಸವಾಲಿನ ಕೆಲಸವಾಗಿದ್ದು, ಹೀಗಾಗಿ ಕೆಬಿಜೆಎನ್ ಎಲ್ ಹಿರಿಯ ಅಭಿಯಂತರರು, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಜಲಾಶಯದಲ್ಲೆ ಠಿಕಾಣಿ ಹೂಡಿದ್ದು ದಿನದ 24 ಗಂಟೆಗಳ ಕಾಲ ಬಸವಸಾಗರಕ್ಕೆ ಬರುವ ಒಳಹರಿವು ಗಮನಿಸಿ ಕೃಷ್ಣಾ ನದಿ ನೀರು ಹರಿಸುವ  ಕೆಲಸವನ್ನು ಅತ್ಯಂತ ಜಾಗೃತಿಯಿಂದ, ಜವಾಬ್ದಾರಿಯಿಂದ ನಿಭಾಯಿಸುತ್ತಿದ್ದಾರೆ.

Advertisement

ಕೃಷ್ಣಾ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದೆ ಹೀಗಾಗಿ ಬಸವಸಾಗರಕ್ಕೆ ಆಲಮಟ್ಟಿ ಶಾಸ್ತ್ರೀ ಜಲಾಶಯದಿಂದ ಬುಧವಾರ ರಾತ್ರಿ ವೇಳೆ 1.25 ಲಕ್ಷ ಕ್ಯೂಸೆಕ್ ಇತ್ತು. ಗುರುವಾರ ಬೆಳಿಗ್ಗೆ 11 ಗಂಟೆ ವೇಳೆಗೆ 1.50 ಲಕ್ಷ ಕ್ಯೂಸೆಕ್ ಗೆ ಏರಿಕೆಯಾದ ಹಿನ್ನೆಲೆಯಲ್ಲಿ ಬಸವಸಾಗರದ 12 ಕ್ರಸ್ಟಗೇಟ್ ಗಳನ್ನು ತೆರದು 70 ಸಾವಿರ ಕ್ಯೂಸೆಕ್ ನಷ್ಟು ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಹೀಗಾಗಿ ನದಿ ತೀರದ ಗ್ರಾಮಗಳ ಜನ  ಜಾನುವಾರುಗಳು ನದಿಗೆ ಇಳಿಯದಂತೆ ಯಾವುದೇ ಚಟುವಟಿಕೆ ನಡೆಸದಂತೆ ಜಾಗೃತಿ ವಹಿಸಬೇಕು. – ಪ್ರಕಾಶ ಎಂ., ಎಕ್ಸಿಕ್ಯೂಟಿವ್ ಇಂಜಿನೀಯರ್‌, ಅಣೆಕಟ್ಟು ವಿಭಾಗ, ನಾರಾಯಣಪುರ

Advertisement

Udayavani is now on Telegram. Click here to join our channel and stay updated with the latest news.

Next