ಕಲಬುರಗಿ: ಚುನಾವಣೆ ಜತೆಗೆ ಜಿಲ್ಲಾದ್ಯಂತ ಕುಡಿಯುವ ನೀರಿನ ಸಮಸ್ಯೆಗೂ ಆದ್ಯತೆ ನೀಡಲಾಗಿದೆ. ನೀರಿನ ಕೊರತೆ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ ನೀರು ಬಿಡಲಾಗಿದೆ. ಭೀಮಾ ನದಿಗೆ ಬಂದು ಸೇರಲಿದೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಡಾ| ಪಿ.ರಾಜಾ ಜಂಟಿಯಾಗಿ ತಿಳಿಸಿದರು.
ಚುನಾವಣೆ ನಿಂತಿ ಸಂಹಿತೆ ಜಾರಿ ಕುರಿತಾಗಿ ವಿವರಣೆ ನೀಡಲು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಗುರುತಿಸಿ ನೀರಿನ ಪೂರೈಕೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ತೀವ್ರ ಸಮಸ್ಯೆ ಇರುವ 20 ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದರು.
780 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಕುಡಿಯುವ ನೀರಿನ ಸಂಬಂಧವಾಗಿ ಜಿಲ್ಲೆಗೆ 6.75 ಕೋಟಿ ರೂ. ಬಿಡುಗಡೆಯಾಗಿದೆ. ಅದೇ ರೀತಿ ಎಸ್‌ಸಿ, ಎಸ್‌ಟಿ ಅನುದಾನದಡಿ 1.50 ಕೋಟಿ ರೂ. ಬಿಡುಗಡೆಯಾಗಿದೆ. ಒಟ್ಟಾರೆ ಹಣದಲ್ಲಿ 480 ಕಾಮಗಾರಿ ಕೈಗೊಳ್ಳಲಾಗಿದ್ದು, 300 ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ ಎಂದು ತಿಳಿಸಿದರು.
ನಗರದಲ್ಲಿ ಕಲುಷಿತ ನೀರು ಪೂರೈಕೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟುವ ನಿಟ್ಟಿನತ್ತ ಗಮನ ಹರಿಸಲಾಗುವುದು. ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ ಬಿಡುಗಡೆಯಾದ ನೀರು ಸರಡಗಿ ಬ್ಯಾರೇಜ್ ಗೆ ಬಂದ ನಂತರ ಸ್ವಲ್ಪ ಶುದ್ಧ ನೀರು ಪೂರೈಕೆಯಾಗಲಿದೆ.ಒಟ್ಟಾರೆ ಕುಡಿಯುವ ನೀರಿಗೆ ಹಣದ ಕೊರತೆಯಿಲ್ಲ ಎಂದು ಅಧಿಕಾರಿಗಳಿಬ್ಬರು ಸ್ಪಷ್ಟಪಡಿಸಿದರು.
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 1957ರಿಂದ ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಯಲ್ಲಿ ನಡೆದ ಲೋಕಸಭಾ ಚನಾವಣೆ ಕುರಿತಾಗಿ ಹೊರ ತಂದ ಪರಿವಿಡಿಯನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಎಸ್‌ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನಮ್ ಇದ್ದರು.