Advertisement

ನಾರಾಯಣಸ್ವಾಮಿ ಬಂಧನ ಶತಸ್ಸಿದ್ಧ

10:37 AM Feb 22, 2018 | Team Udayavani |

ಬೆಂಗಳೂರು: ಕೆ.ಆರ್‌.ಪುರದ ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್‌ ಎರಚಿ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಮಾಜಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾರಾಯಣಸ್ವಾಮಿಯನ್ನು ಎಲ್ಲಿ ಅಡಗಿದ್ದರೂ ಬಂಧಿಸಲಾಗುವುದೆಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವಿಧಾನಸಭೆಗೆ ತಿಳಿಸಿದ್ದಾರೆ. ಬುಧವಾರ ಸದನದಲ್ಲಿ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಅವರು ಕಾಂಗ್ರೆಸ್‌ ಮುಖಂಡ ನಾರಾಯಣಸ್ವಾಮಿ ಪ್ರಕರಣ ಪ್ರಸ್ತಾಪಿಸಿದ್ದಕ್ಕೆ ಸಚಿವರು ಉತ್ತರಿಸಿದರು.

Advertisement

ಸಮರ್ಥನೆ ಅಸಾಧ್ಯ: ನಾರಾಯಣ ಸ್ವಾಮಿ ಕಾನೂನು ಪ್ರಕಾರ ತಪ್ಪು ಮಾಡಿದ್ದಾರೆ. ಬಿಬಿಎಂಪಿ ಕಚೇರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿರುವುದನ್ನು ಸಮರ್ಥಿಸಲು ಸಾಧ್ಯವಿಲ್ಲ. ಇದನ್ನು ಯಾವ ಪಕ್ಷದವರು ಮಾಡಿದರೂ ತಪ್ಪು ತಪ್ಪೇ. ಹೀಗಾಗಿ ನಾರಾಯಣಸ್ವಾಮಿಯನ್ನು ಎಲ್ಲಿದ್ದರೂ ಬಂಧಿಸುವಂತೆ ಪೊಲೀಸ್‌ ಆಯುಕ್ತರಿಗೆ ತಿಳಿಸುತ್ತೇನೆ ಎಂದು ತಿಳಿಸಿದರು.

ಸಸ್ಪೆಂಡ್‌: ಈ ಪ್ರಕರಣ ಫೆ.16 ರಂದೇ ನಡೆದಿದೆ. ಇಂತಹ ಘಟನೆ ನಡೆದರೂ ಸಂಬಂಧಪಟ್ಟ ಸಹಾಯಕ ಕಂದಾಯ, ಕಂದಾಯ ಅಧಿಕಾರಿಯಾಗಲಿ ಪೊಲೀಸ್‌ಗೆ ದೂರು ನೀಡದಿರುವುದು ಸಹ ತಪ್ಪು. ಅದಕ್ಕಾಗಿ ಅವರನ್ನು ವರ್ಗಾಯಿಸಲಾಗಿದೆ. ಅಷ್ಟೇ ಅಲ್ಲ ದೂರು ನೀಡದೇ ಇರುವುದಕ್ಕೆ ಅಧಿಕಾರಿಯನ್ನು ಸಸ್ಪೆಂಡ್‌ ಮಾಡಬೇಕಾಗಿತ್ತು ಎಂದರು. 

ಅಧಿಕಾರಿಗಳು ದೂರು ನೀಡದೇ ಇರುವಂತಹ ಭಯದ ವಾತಾವರಣ ಸೃಷ್ಟಿಯಾಗಿದೆ. ಆಡಳಿತ ಪಕ್ಷ ಕಾಂಗ್ರೆಸ್‌ ಮುಖಂಡರ ವಿರುದ್ಧ ಅಧಿಕಾರಿಗಳು ಹೇಗೆ ದೂರು ನೀಡಲು ಸಾಧ್ಯವೆಂದು ಶೆಟ್ಟರ್‌ ಗೃಹ ಸಚಿವರನ್ನು ಪ್ರಶ್ನಿಸಿದರು. ಇದಕ್ಕೆ ಹೆಬ್ಟಾಳ್‌ ದನಿಗೂಡಿಸಿದರು.

ಕಾನೂನು ಬಾಹಿರವಾಗಿ ಖಾತೆ ಮಾಡಿಕೊಡದಿರುವುದಕ್ಕೆ ಅಧಿಕಾರಿಯನ್ನು ಮೆಚ್ಚಬೇಕು. ಆ ಕಾರಣಕ್ಕೆ ಈ ಘಟನೆ ನಡೆದಿದೆ. ನಾರಾಯಣಸ್ವಾಮಿಯ ಬೆದರಿಕೆ ಬಗ್ಗೆ ದೂರು ನೀಡಿಲ್ಲವೆಂದು ಅಧಿಕಾರಿ ವರ್ಗ ಮಾಡಿರುವುದು ಸರಿಯಾದ ಕ್ರಮವಲ್ಲ, ಅವರನ್ನು ಸಸ್ಪೆಂಡ್‌ ಮಾಡುವುದು ಬೇಡವೆಂದು ಸಲಹೆ ನೀಡಿದರು. ಅಮಾನತ್ತು ಮಾಡುವುದಿಲ್ಲವೆಂದು ಸಚಿವ ರಾಮಲಿಂಗಾರೆಡ್ಡಿ ಸದನಕ್ಕೆ ಭರವಸೆ ನೀಡಿದರು.

Advertisement

ಅಪರಾಧ ಹೆಚ್ಚಳ: ರಾಮಲಿಂಗಾರೆಡ್ಡಿಯವರು ಗೃಹ ಸಚಿವರಾದ ನಂತರ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗತೊಡಗಿವೆ ಎಂದು ಶೆಟ್ಟರ್‌ ಸರ್ಕಾರವನ್ನು ತರಾಟೆಗೆ ತಗೆದುಕೊಂಡರು. ಇದು ಸರ್ಕಾರವೇ..? ಗೃಹ ಇಲಾಖೆ ನಡೆಸಲು ನಿಮ್ಮ ಕಡೆಯಿಂದ ಆಗೋದಿಲ್ಲವೆಂದು ಟೀಕಿಸಿದರು. 

ಸಮಾಧಾನದಿಂದ ಉತ್ತರಿಸಿದ ಗೃಹ ಸಚಿವರು, ರಾಜ್ಯದಲ್ಲಿ ಪದೇ ಪದೇ ಕ್ರಿಮಿನಲ್‌ ಅಪರಾಧ ಚಟುವಟಿಕೆಗಳಲ್ಲಿ ತೊಡಗುವ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವ ಯುವಕರನ್ನು ಗಡಿಪಾರು ಮಾಡಲು ಪೊಲೀಸರಿಗೆ ಆದೇಶ ನೀಡಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದರು.

ಗೂಂಡಾಗಿರಿ ಖಂಡಿಸಿ ಜೆಡಿಎಸ್‌ ಪ್ರತಿಭಟನೆ 
ಕೆ.ಆರ್‌.ಪುರ: ಸಾರ್ವಜನಿಕರ ಮೇಲೆ ಕಾಂಗ್ರೆಸ್‌ ಮುಖಂಡರ ಗೂಂಡಾಗಿರಿಯನ್ನು ಖಂಡಿಸಿ ಜೆಡಿಎಸ್‌ ಪಕ್ಷದ ನೂರಾರು ಕಾರ್ಯಕರ್ತರು ಕೆಆರ್‌ಪುರ ಬಿಬಿಎಂಪಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. 

ನೇತೃತ್ವ ವಹಿಸಿ ಮಾತನಾಡಿದ ಮಾಜಿ ನಗರಸಭಾ ಸದಸ್ಯ ಡಿ.ಎ.ಗೋಪಾಲ್‌, ರಾಜ್ಯದಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ರೌಡಿ ಸಂಸ್ಕೃತಿಯಿಂದಲೇ ಬೆಳೆದಿದ್ದಾರೆ. ಕೈ ನಾಯಕರ ಪುಂಡಾಟಿಕೆ ಮಿತಿಮೀರಿದೆ, ಶಾಸಕ ಹ್ಯಾರಿಸ್‌ ಪುತ್ರ ಮೊಹಮ್ಮದ್‌ ನಲಪಾಡ್‌ ಹ್ಯಾರಿಸ್‌ ವಿದ್ವತ್‌ ಮೇಲೆ ಹಲ್ಲೆ ಮಾಡಿರುವುದು, ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್‌ ಸುರಿದು ಅಧಿಕಾರಿಗಳಿಗೆ ಬೆದರಿಕೆಯೊಡ್ಡಿ ದಾಂಧಲೆ ನಡೆಸಿರುವುದು ಸಮಾಜ ತಲೆತಗ್ಗಿಸುವಂಥ ಕೃತ್ಯವಾಗಿದೆ. ಕೂಡಲೇ ಕಲ್ಕೆರೆ ನಾರಾಯಣ ಸ್ವಾಮಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವ್ಯಸ್ಥೆ ಹಾಳಾಗಿದ್ದು ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಹ್ಯಾರಿಸ್‌ ಪುತ್ರ ತನ್ನ ತಂದೆಯ ಅಭಯಾಸ್ತವಿದ್ದರಿಂದಲೇ ಹಲವು ದಾಂಧಲೆಗಳನ್ನು ನಡೆಸಿದ್ದಾನೆ. ಬೆಂಬಲಿಗರ ದರ್ಪ ಮೆರೆದಿದ್ದಾರೆ ಎಂದರು. ಇದೆ ವೇಳೆ ಜೆಡಿಎಸ್‌ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಕಾಂಗ್ರೆಸ್‌ ನಾಯಕರ ಭಾವಚಿತ್ರಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ ಕಾರ್ಯದರ್ಶಿ ಕೃಷ್ಣಮೂರ್ತಿ. ಕ್ಷೇತ್ರ ಆಧ್ಯಕ್ಷ ಬಾಲಕೃಷ್ಣ. ದೇವರಾಜ್‌, ಟಿ.ಕೆ ಗೋಪಾಲ್‌, ಗಗನ್‌ಯಾದವ್‌ ಇತರರು ಇದ್ದರು. 

ಕಚೇರಿಗಳಲ್ಲಿ ಸಿಸಿಟಿವಿ ಬಿಬಿಎಂಪಿಯ ಪ್ರತಿಯೊಂದು ವಾರ್ಡ್‌ ಕಚೇರಿಯಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಯೊಂದು ಕಚೇರಿಯಲ್ಲಿ ಕ್ಯಾಮೆರಾ ಅಳವಡಿಕೆ ಮಾಡುವುದರಿಂದ ಕಚೇರಿಗೆ ಬರುವವರ ವರ್ತನೆಯ ಮೇಲೆ ನಿಗಾವಹಿಸಬಹುದಾಗಿದೆ. ಇದರಿಂದಾಗಿ ಅಧಿಕಾರಿಗಳ ಮೇಲೆ ದೌರ್ಜನ್ಯಕ್ಕೆ ಮುಂದಾಗಲು ಹಿಂದೆ ಸರಿಯುತ್ತಾರೆ. ಆ ಹಿನ್ನೆಲೆಯಲ್ಲಿ ಕೇಂದ್ರ ಕಚೇರಿ ಸೇರಿದಂತೆ ಎಲ್ಲ ವಾರ್ಡ್‌ ಕಚೇರಿಗಳಲ್ಲಿ ಕ್ಯಾಮೆರಾ ಅಳವಡಿಸಲಾಗುವುದು ಎಂದರು.

ವರ್ಗಾವಣೆ ಸಹಜ: ಹುಲಿಮಾವು ಸಹಾಯಕ ಕಂದಾಯ ಅಧಿಕಾರಿ ಚೆಂಗಲರಾಯಪ್ಪರನ್ನು ಅಮಾನತುಗೊಳಿಸಿಲ್ಲ. ಬದಲಿಗೆ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇದು ಸಹಜ ಪ್ರಕ್ರಿಯೆಯಾಗಿದೆ. ಚೆಂಗಲರಾಯಪ್ಪ ಕೆ.ಆರ್‌.ಪುರ ಕ್ಷೇತ್ರದ ನಿವಾಸಿಯಾಗಿದ್ದು, ಚುನಾವಣೆ ಸಂದರ್ಭದಲ್ಲಿ ಯಾವುದೇ ಅಧಿಕಾರಿ ಸ್ವಂತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವಂತಿಲ್ಲ. ಹೀಗಾಗಿ ಅವರನ್ನು ಬೇರೆ ಕ್ಷೇತ್ರದ ಬಿಬಿಎಂಪಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ.
 
ಗೃಹಸಚಿವ ತೀಕ್ಷ್ಣ ಪ್ರತಿಕ್ರಿಯೆ
 ಪೂರ್ಣಿಮಾ ದಾಸ್‌ ಅವರು ಮೊಹಮ್ಮದ್‌ ನಲಪಾಡ್‌ ಹ್ಯಾರಿಸ್‌ ವಿರುದ್ಧ ಈ ಹಿಂದೆ ಕಬ್ಬನ್‌ ಪಾರ್ಕ್‌ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ಗೆ ದೂರು ನೀಡಿದರೆ ಸ್ವೀಕರಿಸಲಿಲ್ಲವೆಂದು ಆರೋಪಿಸಿದ್ದಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಪೂರ್ಣಿಮಾ ದಾಸ್‌ ಅವರು, ದೂರು ತೆಗೆದುಕೊಳ್ಳಲು ನಿರಾಕರಿಸಿದ ಪೊಲೀಸರ ವಿರುದ್ಧ ಎಸಿಪಿ, ಡಿಸಿಪಿ, ಪೊಲೀಸ್‌ ಆಯುಕ್ತರಿಗೆ ದೂರು ಕೊಡಬಹುದಿತ್ತು ಮೇಲಾಧಿಕಾರಿಗಳಿಗೆ ಏಕೆ ದೂರು ನೀಡಲಿಲ್ಲವೆಂದು ಪ್ರಶ್ನಿಸಿದರು.

ಪುಂಡರ ರಕ್ಷಣೆಗೆಸರ್ಕಾರ ಸದಾ ಸಿದ್ಧ
 ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರದ “ಸದಾ ಸಿದ್ಧ ಸರ್ಕಾರ’ ಘೋಷಣೆ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ, ಕಾಂಗ್ರೆಸ್‌ ಪುಂಡು ಪೋಕರಿಗಳಿಗೆ, ರೌಡಿ ಹಾಗೂ ಗೂಂಡಾಗಳ ರಕ್ಷಣೆಗೆ ಟೊಂಕ ಕಟ್ಟಿನಿಂತಿರುವ ಸದಾ ಸಿದ್ಧ ಸರ್ಕಾರ ಎಂದು ಆರೋಪಿಸಿದೆ.

ಬುಧವಾರ ವಿಧಾನಸೌಧದಲ್ಲಿ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಶಾಸಕರು, ಶಾಂತಿಯ ತೋಟವಾಗಿದ್ದ ಬೆಂಗಳೂರು ನಗರವನ್ನು ಅಶಾಂತಿಯ ಕ್ಷೋಭೆಗೆ ದೂಡಿ ಅಪರಾಧಿಗಳ ಸ್ವರ್ಗ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಟೊಂಕ ಕಟ್ಟಿ ನಿಂತಿದೆ. ಐಟಿ ಸಿಟಿಯನ್ನು ಕ್ರೈಂ ಸಿಟಿಯಾಗಿ ಮಾರ್ಪಡಿಸಿದ ಗೂಂಡಾಗಳು ಮತ್ತು ಸಮಾಜದಲ್ಲಿ ಭಯದ ವಾತಾವರಣ ಹರಡುತ್ತಿರುವ ವಿಷಕಾರಿ ಜಂತುಗಳಿಗೆ ರಕ್ಷಣೆ ನೀಡುವ ಮೂಲಕ ಕಾಂಗ್ರೆಸ್‌ ಸರ್ಕಾರ ಅಪರಾಧಿಗಳ ರಕ್ಷಣೆಗೆ ಸದಾ ಸಿದ್ಧ ಸರ್ಕಾರವಾಗಿದೆ ಎಂದು ಆರೋಪಿಸಿದರು. 

ಕಳೆದ ಕೆಲ ದಿನಗಳಿಂದ ಕಾಂಗ್ರೆಸ್‌ ನಾಯಕರ ಪುಂಡಾಟಿಕೆ ಪರಾಕಾಷ್ಠೆ ತಲುಪಿದೆ. ಕಾಂಗ್ರೆಸ್‌ ಶಾಸಕರ ಪುತ್ರ ಮಹಮದ್‌ ನಲಪಾಡ್‌ನಿಂದ ಹಲ್ಲೆಗೊಳಗಾದ ವಿದ್ವತ್‌ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ತನ್ನ ಉಳಿವಿಗೆ ಹೋರಾಟ ನಡೆಸುವಂತಾಗಿದೆ. ಇನ್ನೊಂದೆಡೆ ಬ್ಲಾಕ್‌ ಕಾಂಗ್ರೆಸ್ಸಿನ ನಾರಾಯಣಸ್ವಾಮಿ ಎಂಬಾತ ನಕಲಿ ಖಾತೆ ಮಾಡಿಕೊಡದ ಕಾರಣಕ್ಕಾಗಿ ಬಿಬಿಎಂಪಿ ಅಧಿಕಾರಿಗೆ ಬೆದರಿಕೆ ಹಾಕಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಲು ಹೊರಟಿದ್ದರು. ಇಂಥವರಿಂದ ಬೆಂಗಳೂರು ಆತಂಕದ ಗೂಡಾಗಿದೆ ಎಂದು ಆರೋಪಿಸಿದರು.

ಶಾಸಕರಾದ ಅರವಿಂದ ಲಿಂಬಾವಳಿ, ವಿ.ಸೋಮಣ್ಣ, ಎಸ್‌. ರಘು, ಸತೀಶ್‌ ರೆಡ್ಡಿ, ಮುನಿರಾಜು, ವಿಧಾನ ಪರಿಷತ್‌ ಸದಸ್ಯೆ ತಾರಾ ಅನುರಾಧ, ಮಾಜಿ ಶಾಸಕ ನಂದೀಶ್‌ ರೆಡ್ಡಿ, ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ, ಸಹ ವಕ್ತಾರ ಎಸ್‌.ಪ್ರಕಾಶ್‌, ಬಿಜೆಪಿ ಬೆಂಗಳೂರು ನಗರ ಅಧ್ಯಕ್ಷ ಪಿ.ಎನ್‌.ಸದಾಶಿವ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ಸರ್ಕಾರವನ್ನು ಜರಿದ ಬಿಜೆಪಿ ಕಾಂಗ್ರೆಸ್‌ ಶಾಸಕ ಎನ್‌.ಎ.ಹ್ಯಾರಿಸ್‌ ಪುತ್ರ ಮಹಮದ್‌ ನಲಪಾಡ್‌ ಹ್ಯಾರಿಸ್‌ ಮತ್ತು ಬೆಂಬಲಿಗರು ವಿದ್ವತ್‌ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಪ್ರಕರಣ, ಕೆ.ಆರ್‌.ಪುರ ಬ್ಲಾಕ್‌ ಕಾಂಗ್ರೆಸ್‌ ಮುಖಂಡ ನಾರಾಣಸ್ವಾಮಿ ಬಿಬಿಎಂಪಿ ಕಚೇರಿಗೆ ನುಗ್ಗಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ. ಬ್ಯಾಟರಾಯನಪುರದಲ್ಲಿ ಕಳಪೆ ಕಾಮಗಾರಿ ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್‌ನವರು ದೌರ್ಜನ್ಯ ನಡೆಸಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ಮನೆ ಗೋಡೆ ಮೇಲೆ ಕಮಲ ಚಿತ್ರ ಬರೆಯಲು ಹೊರಟ ಬಿಬಿಎಂಪಿ ಸದಸ್ಯ ಜಿ.ಕೆ.ವೆಂಕಟೇಶ್‌ ಮೇಲೆ ಕಾಂಗ್ರೆಸಿಗರು ನಡೆಸಿದ್ದಾರೆ ಎನ್ನಲಾದ ದೌರ್ಜನ್ಯ, ಗಾಂಜಾ- ಅಫೀಮು ದಂಧೆ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ಪ್ರಸ್ತಾಪಿಸಿಬಿಜೆಪಿ ಶಾಸಕರು ರಾಜ್ಯ ಸರ್ಕಾರವನ್ನು ಕಾಂಗ್ರೆಸ್‌  ಪುಂಡು ಪೋಕರಿಗಳಿಗೆ, ರೌಡಿ ಹಾಗೂ ಗೂಂಡಾಗಳ ರಕ್ಷಣೆಗೆ ಟೊಂಕ ಕಟ್ಟಿನಿಂತಿರುವ ಸದಾ ಸಿದ್ಧ ಸರ್ಕಾರ ಎಂದು ಜರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next