Advertisement

ನಾರಾಯಣ ಗುರೂಜಿ ತತ್ವಾದರ್ಶ ಪಾಲಿಸಿ

01:09 PM Sep 07, 2017 | |

ವಿಜಯಪುರ: ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ತ್ರೀಯರ, ಹಿಂದುಳಿದ ವರ್ಗದವರ ಶೋಷಿತ ಸಮುದಾಯದವರ ಧ್ವನಿಯಾಗಿ, ಅಸಮಾನತೆ ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು
ಎಂದು ಅಪರ ಜಿಲ್ಲಾಧಿಕಾರಿ ಡಾ| ಎಚ್‌.ಬಿ. ಬೂದೆಪ್ಪ ಹೇಳಿದರು.

Advertisement

ಬುಧವಾರ ನಗರದ ಕಂದಗಲ್‌ ಹನುಮಂತರಾಯ ಜಿಲ್ಲಾ ರಂಗಮಂದಿರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಒಳ್ಳೆಯದನ್ನು ಮಾಡದಿದ್ದರೂ ಕೆಟ್ಟದ್ದನ್ನು ಮಾಡಬಾರದೆಂಬ
ಸಂದೇಶ ಸಾರಿದ ನಾರಾಯಣ ಗುರುಗಳ ಜೀವನ ಸಂದೇಶ ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಅರವಿಂದ ಕೊಪ್ಪ ಉಪನ್ಯಾಸ ನೀಡಿ, ದೌರ್ಜನ್ಯ, ಹಿಂಸೆ, ಶೋಷಣೆಯಿಂದ ಬಳಲುತ್ತಿರುವ ವರ್ಗವನ್ನು ಅದರಿಂದ ಹೊರತಂದು, ಜಾತಿಯಿಂದ ಹೊರತಾದ ಸಮಾಜ ನಿರ್ಮಾಣದಲ್ಲಿ, ಸಮಾಜವಾದಿ ತತ್ವಗಳೊಂದಿಗೆ ಹಿಂದುತ್ವ ಸುಧಾರಣೆಗೆ ವಿವೇಕಾನಂದರ ಮಾತಿನಂತೆ ಶ್ರಮಿಸಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಬಣ್ಣಿಸಿದರು.

ನಾರಾಯಣ ಗುರುಗಳ ಬದುಕೇ ಒಂದು ಸನಾತನ ಧರ್ಮದಂತಿತ್ತು ಎಂದು ಥಿಯೋಸಾಫಿಕಲ್‌ ಸೊಸೈಟಿಯ ಆ್ಯನಿಬೆಸೆಂಟ್‌ ಹೊಗಳಿದ್ದಾರೆ. ಇದು ನಾರಾಯಣ ಗುರುಗಳ ಆದರ್ಶ ಜೀವನಕ್ಕೆ ಸಾಕ್ಷಿ. ಸಮಾಜವನ್ನು ಸುಧಾರಿಸಲು ದ್ವೇಷ, ಸಂಘರ್ಷ ರಹಿತ ಹಾದಿ ತುಳಿದರು. ಶೂದ್ರ ವರ್ಗವನ್ನು ಸಮಾಜದ ಸಮಾನತೆಯ ಮಾರ್ಗಕ್ಕೆ ತಂದರು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದಂತೆ 19ನೇ ಶತಮಾನದ ಅಂತ್ಯದಲ್ಲಿ 20ನೇ ಶತಮಾನದ ಆದಿಯ ಆ ಕಾಲದಲ್ಲಿದ್ದ ಅನೇಕ ಅನಿಷ್ಠ ಪದ್ಧತಿಗಳನ್ನು ವಿರೋಧಿಸುತ್ತ ಕೇರಳದ ಬಸವಣ್ಣ ಎಂದು ಹೆಸರು ಪಡೆದಿದ್ದರು. ಇವರ ಚಿಂತನೆಗಳಿಂದ ರವೀಂದ್ರನಾಥ ಟ್ಯಾಗೋರ್‌ರವರು ಪ್ರಭಾವಿತರಾಗಿದ್ದರು ಎಂದು ಹೇಳಿದರು.

ಬಾಲ್ಯ ವಿವಾಹದಂತಹ ಅನಿಷ್ಠ ಪದ್ಧತಿ ವಿರೋಧಿಸಿದಲ್ಲದೇ, ಸಮಾಜದಲ್ಲಿ ವಿಧವಾ ವಿವಾಹ ಪ್ರೋತ್ಸಾಹಿಸಿದರು. ತಮ್ಮ ತತ್ವ ಆದರ್ಶಗಳಿಂದ ಜಗತ್ತಿನಲ್ಲಿ ಆದರ್ಶರಾದರು. ಸಮಗ್ರ ಸಮಾಜದ ಅಭಿವೃದ್ಧಿ ಕನಸು ಕಂಡಿದ್ದ ಅವರನ್ನು ಯಾವುದೇ ಒಂದು ವರ್ಗ, ಜಾತಿ, ಧರ್ಮಕ್ಕೆ ಸೀಮಿತಗೊಳಿಸುವ ಸಂಕುಚಿತ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

Advertisement

ಪೊಲೀಸ್‌ ಅಧಿಕಾರಿ ಸಿಂಧೂರ, ಬಸವರಾಜ ಈಳಗೇರ, ಡಿ.ಎಸ್‌. ಬಿರಾದಾರ, ಸುನೀಲ ಗುತ್ತೇದಾರ, ಯಶವಂತ ಈಳಗೇರ, ಆಂಜನೇಯ ಈಳಗೇರ, ಡಾ| ಎಸ್‌.ಕೆ. ಬಿರಾದಾರ ವೇದಿಕೆಯಲ್ಲಿದ್ದರು. ಈ ವೇಳೆ ಸುರೇಶ ಶಹಾ ನೇತೃತ್ವದ ನೂಪುರ ಕಲಾ ಸಂಸ್ಥೆಯಿಂದ ನೃತ್ಯ ರೂಪಕ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಸಹಾಯಕ ನಿರ್ದೇಶಕ ಜೆ.ಎಸ್‌. ಪೂಜೇರಿ ಸ್ವಾಗತಿಸಿದರು. ಶಿಕ್ಷಕ ಹುಮಾಯುನ ಮಮದಾಪುರ ನಿರೂಪಿಸಿದರು. ಇದಕ್ಕೂ ಮೊದಲು ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್‌ ಹನುಮಂತರಾಯ ರಂಗಮಂದಿರದವರೆಗೆ ನಾರಾಯಣ ಗುರುಗಳ ಭಾವಚಿತ್ರ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next