ಬೆಂಗಳೂರು: ”ಭಾರತದ ಕೆಲಸದ ಸಂಸ್ಕೃತಿ ಬದಲಾಗಬೇಕು ಮತ್ತು ಜಾಗತಿಕ ಮಟ್ಟದಲ್ಲಿ ದೇಶವು ಪರಿಣಾಮಕಾರಿಯಾಗಿ ಸ್ಪರ್ಧಿಸಬೇಕಾದರೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಸಿದ್ಧರಾಗಿರಬೇಕು” ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.
77 ರ ಹರೆಯದ ನಾರಾಯಣ ಮೂರ್ತಿ ಅವರುಮಾಜಿ ಇನ್ಫೋಸಿಸ್ ಸಿಇಒ ಮೋಹನ್‌ದಾಸ್ ಪೈ ಅವರೊಂದಿಗೆ 3one4 ಕ್ಯಾಪಿಟಲ್‌ನ ಪಾಡ್‌ಕಾಸ್ಟ್ ‘ದಿ ರೆಕಾರ್ಡ್’ ನ ಮೊದಲ ಸಂಚಿಕೆಯಲ್ಲಿ ಮಾತನಾಡುವ ವೇಳೆ ಈ ಸಲಹೆ ನೀಡಿದ್ದಾರೆ.
ವಿಸ್ತೃತ ಕೆಲಸದ ಸಮಯವನ್ನು ಜಾರಿಗೊಳಿಸಿದ ದೇಶಗಳಾದ ಜಪಾನ್ ಮತ್ತು ಜರ್ಮನಿಗೆ ಸಮಾನಾಂತರಗಳು, ರಾಷ್ಟ್ರ ನಿರ್ಮಾಣ, ತಂತ್ರಜ್ಞಾನ, ಇನ್ಫೋಸಿಸ್ ಮತ್ತು ಇತರ ವಿಷಯಗಳ ಬಗ್ಗೆ ಮಾತನಾಡಿದರು.
ಮುಂದಿನ 10, 15 ವರ್ಷಗಳ ಅವರ ದೃಷ್ಟಿಕೋನದ ಬಗ್ಗೆ ಕೇಳಿದಾಗ, ಭಾರತದಲ್ಲಿ ಉತ್ಪಾದಕತೆಯನ್ನು ಸುಧಾರಿಸುವ ಮತ್ತು ಸರಕಾರದ ವಿಳಂಬವನ್ನು ದೂರ ಮಾಡುವ ಅಗತ್ಯವನ್ನು ಎತ್ತಿ ತೋರಿಸಿದರು.
“ಭಾರತದ ಕೆಲಸದ ಉತ್ಪಾದಕತೆಯು ವಿಶ್ವದಲ್ಲೇ ಅತ್ಯಂತ ಕಡಿಮೆಯಾಗಿದೆ, ನಾವು ನಮ್ಮ ಕೆಲಸದ ಉತ್ಪಾದಕತೆಯನ್ನು ಸುಧಾರಿಸದ ಹೊರತು, ಸರಕಾರದಲ್ಲಿನ ಭ್ರಷ್ಟಾಚಾರವನ್ನು ಕೆಲವು ಹಂತದಲ್ಲಿ ಕಡಿಮೆ ಮಾಡದ ಹೊರತು(ನಾವು ಓದುತ್ತಿದ್ದೇವೆ ಅದರ ಸತ್ಯಾಸತ್ಯತೆ ನನಗೆ ತಿಳಿದಿಲ್ಲ) ಈ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ನಮ್ಮ ಅಧಿಕಾರಶಾಹಿಯಲ್ಲಿನ ವಿಳಂಬಗಳು, ಪ್ರಚಂಡ ಪ್ರಗತಿಯನ್ನು ಸಾಧಿಸಿದ ದೇಶಗಳೊಂದಿಗೆ ಸ್ಪರ್ಧಿಸಲು ನಮಗೆ ಸಾಧ್ಯವಾಗುವುದಿಲ್ಲ.ಆದ್ದರಿಂದ, ನಮ್ಮ ಯುವಕರು ಇದು ನನ್ನ ದೇಶ. ನಾನು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಲು ಬಯಸುತ್ತೇನೆ ಎಂದು ಹೇಳಬೇಕು ಎಂಬುದು ನನ್ನ ವಿನಂತಿ” ಎಂದರು.
”ಎರಡನೆಯ ಮಹಾಯುದ್ಧದ ನಂತರ ಜರ್ಮನಿ ಮತ್ತು ಜಪಾನ್ ದೇಶಗಳು ಶಿಸ್ತು ಮತ್ತು ವರ್ಧಿತ ಉತ್ಪಾದಕತೆಯ ನಿರ್ಣಾಯಕ ಪಾತ್ರವನ್ನು ತೋರಿವೆ. ಪ್ರತಿ ಜರ್ಮನ್ ಪ್ರಜೆ, ಜಪಾನ್ ಪ್ರಜೆ ನಿರ್ದಿಷ್ಟ ಸಂಖ್ಯೆಯ ವರ್ಷಗಳವರೆಗೆ ಹೆಚ್ಚುವರಿ ಗಂಟೆಗಳ ಕೆಲಸ ಮಾಡುವುದನ್ನು ಖಚಿತಪಡಿಸಿಕೊಂಡಿದ್ದರು”ಎಂದು ಐತಿಹಾಸಿಕ ಉದಾಹರಣೆಯನ್ನೂ ನೀಡಿದರು. ಐಟಿ ದಿಗ್ಗಜ ಮೂರ್ತಿ ಅವರ ಸಲಹೆ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.