ಪ್ರಖ್ಯಾತ ಭಾಗವತರಾದ ಸತೀಶ್ ಶೆಟ್ಟಿ ಪಟ್ಲ ಸ್ಥಾಪಕಾಧ್ಯಕ್ಷರಾಗಿರುವ ಯಕ್ಷಧ್ರುವ ಪಟ್ಲ ಫೌಂಡೇಶನ್ ವತಿಯಿಂದ ಮಂಗಳೂರಿನ ಅಡ್ಯಾರ್ ಗಾರ್ಡನ್‌ನಲ್ಲಿ ಮೇ 27ರಂದು ಜರಗಿದ ಮೂರನೆಯ ವರ್ಷದ ಯಕ್ಷಧ್ರುವ ಪಟ್ಲ ಸಂಭ್ರಮ ಯಕ್ಷಗಾನದ ಇತಿಹಾಸಕ್ಕೆ ವಿಶಿಷ್ಟ ಅಧ್ಯಾಯವನ್ನು ಸೇರ್ಪಡೆಗೊಳಿಸಿತು. ಸತತ 16 ತಾಸುಗಳ ಕಾಲ ಯಕ್ಷಗಾನದ ಎಲ್ಲ ಸ್ವರೂಪಗಳ ಅಭಿವ್ಯಕ್ತಿಯಾಯಿತು. ಸಾಮಾಜಿಕವಾಗಿ ಪ್ರಸ್ತುತವಾದ ಸೇವಾ ಕಾರ್ಯಕ್ರಮಗಳೂ ನಡೆದವು.
ಮಹಿಳಾ ಕಲಾವಿದರು ಉತ್ಸುಕತೆಯಿಂದ ಭಾಗವಹಿಸಿದರು. ಬಾಲಕಿಯರು ಪ್ರದರ್ಶಿಸಿದ “ಪುಣ್ಯಕೋಟಿ’ ಕಥಾ ಪ್ರಸಂಗ ಉಲ್ಲೇಖನೀಯ. ಬಳಿಕ ಕಲಾವಿದೆಯರು ಶಶಿಪ್ರಭಾ ಪರಿಣಯ ಪ್ರಸಂಗ ಪ್ರಸ್ತುತಪಡಿಸಿದರು. ಮಂಗಳೂರು, ಸುರತ್ಕಲ್, ಕಳಸ, ಕಾರಿಂಜದ ಈ ಕಲಾವಿದೆಯರಿಗೆ ಪೂರ್ಣಿಮಾ ಯತೀಶ್ ರೈ ನಿರ್ದೇಶನ ನೀಡಿದ್ದರು.ಮುಂಬಯಿಯ ಸಾನ್ವಿ ಅವರು ಪಟ್ಲ ಅವರ ಹಾಡುಗಳಿಗೆ ಯಕ್ಷಗಾನ ನೃತ್ಯ ಪ್ರದರ್ಶಿಸಿದರು. ಅವರ ಜತೆಗೆ ಯಕ್ಷನರ್ತನಗೈದ ಎಳೆಯರು ಹೃದನ್ ಶೆಟ್ಟಿ ಪಟ್ಲ ಮತ್ತು ರಾಶಿ ಆರ್. ಪೂಂಜ. ಮುಂದಿನ ಕಾರ್ಯಕ್ರಮ “ಯಕ್ಷಮಿತ್ರರು ದುಬಾೖ’ ಮಕ್ಕಳ ತಂಡದವರ ಏಕಾದಶಿ ವ್ರತ ಮಹಾತ್ಮೆ. ಜತೆಯಲ್ಲಿ ಸ್ವತಃ ಪಟ್ಲ ಅವರೇ ಭಾಗವಹಿಸಿ ಮೆರುಗು ಹೆಚ್ಚಿಸಿದರು.
ಯಕ್ಷಧ್ರುವ ಪಟ್ಲ ಸಂಭ್ರಮಕ್ಕಿದು 3ನೇ ವರ್ಷ. ಸಹಜವಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯ ತಾಳಮದ್ದಲೆ ಪ್ರಧಾನ ಆಕರ್ಷಣೆಗಳಲ್ಲೊಂದು. ಪ್ರಸಂಗ- ಅಗ್ರಪೂಜೆ. ಭಾಗವತರು- ದಿನೇಶ್ ಅಮ್ಮಣ್ಣಾಯ, ಸುಬ್ರಹ್ಮಣ್ಯ ಧಾರೇಶ್ವರ. ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಭಟ್ ದೇಲಂತ ಮಜಲು, ಪರಮೇಶ್ವರ ಭಂಡಾರಿ ಗುಣವಂತೆ, ರಾಮಕೃಷ್ಣ ಮಂದಾರ್ತಿ, ಗುರುಪ್ರಸಾದ್ ಬೊಳಿಂಜಡ್ಕ. ಕಲಾವಿದರು: ಕುಂಬ್ಳೆ ಸುಂದರ ರಾವ್, ರಾಧಾಕೃಷ್ಣ ಕಲ್ಚಾರ್, ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ಹರೀಶ್ ಬೊಳಂತಿಮೊಗರು, ಸದಾಶಿವ ಆಳ್ವ ತಲಪಾಡಿ.
ಅಂದಹಾಗೆ, ಪಾಂಡವರ ರಾಜಸೂಯ ಯಾಗದಲ್ಲಿ ಅಗ್ರಪೂಜೆ ಶ್ರೀಕೃಷ್ಣನಿಗೇ ಸಲ್ಲುತ್ತದೆ. ಅಂತೆಯೇ ಯಕ್ಷಧ್ರುವ ಪಟ್ಲ ಪ್ರತಿಷ್ಠಾನದ ಯಕ್ಷಸಂಭ್ರಮದ ಮೂರೂ ಆವೃತ್ತಿಗಳಲ್ಲಿ ಪ್ರತಿಷ್ಠೆಯ ಪಟ್ಲ ಪ್ರಶಸ್ತಿಯನ್ನು ಸ್ವೀಕರಿಸಿದವರು “ನಾರಾಯಣ’ರು! ಅಂದರೆ, ಮೂರು ಮಂದಿ ನಾರಾಯಣರು. ಮೊದಲ ವರ್ಷ- ಪೆರುವಾಯಿ ನಾರಾಯಣ ಶೆಟ್ಟಿ. ಎರಡನೆಯ ವರ್ಷ- ಬಲಿಪ ನಾರಾಯಣ ಭಾಗವತರು. ಈ ಬಾರಿ- ಡಾ| ಶಿಮಂತೂರು ನಾರಾಯಣ ಶೆಟ್ಟಿ!
ಪ್ರತಿಷ್ಠಾನವು ಯಕ್ಷಗಾನದ ಮತ್ತು ಯಕ್ಷ ಕಲಾವಿದರ ಸಂಬಂಧಿತ ಮತ್ತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಟ್ಲ ಸತೀಶ್ ಶೆಟ್ಟಿ ಅವರು ಹೇಳುತ್ತಾರೆ: “ಮುಂದಿನ ಡಿಸೆಂಬರ್‌ನೊಳಗೆ ಎಲ್ಲ ಕಡೆಗಳಲ್ಲೂ ಪ್ರತಿಷ್ಠಾನದ ಘಟಕಗಳ ಸ್ಥಾಪನೆ ಪೂರ್ಣಗೊಳ್ಳಲಿದೆ. ಒಂದು ಲಕ್ಷ ಸದಸ್ಯರನ್ನು ನೋಂದಾಯಿಸಲಾಗುತ್ತದೆ. ಅಶಕ್ತ ಕಲಾವಿದರಿಗೆ ನೂರು ಮನೆಗಳನ್ನು ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ.
ಪಟ್ಲ ಭಾಗವತರ ಮೂರು ತಲೆಮಾರು ಕಲಾವಿದರಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಸತೀಶರ ತಂದೆ ಪಟ್ಲ ಮಹಾಬಲ ಶೆಟ್ಟಿ ಅವರು ಚಕ್ರತಾಳದಲ್ಲಿ, ಯಕ್ಷಗಾನ ಪ್ರದರ್ಶನ ವೊಂದರಲ್ಲಿ ಸತೀಶರು ಭಾಗವತರಾಗಿ, ಎಳೆಯರ ಒಂದು ಪ್ರದರ್ಶನದಲ್ಲಿ ಸತೀಶರ ಪುತ್ರ ಹೃದನ್ ಶೆಟ್ಟಿ ಪಟ್ಲ ಅವರು ವೇಷಕಟ್ಟಿ ಕುಣಿದರು! ಪ್ರೇಕ್ಷಕರಾಗಿ 3 ತಲೆಮಾರಿನ ಅನೇಕ ಕುಟುಂಬಗಳವರು ಭಾಗವಹಿಸಿದ್ದು ಉಲ್ಲೇಖನೀಯ.
ಮನೋಹರ ಪ್ರಸಾದ್