ಪಿರಿಯಾಪಟ್ಟಣ: ಅಸ್ಪೃಶ್ಯತೆ ಹೋಗಲಾಡಿಸಲು ಎಲ್ಲಾ ಮಹನೀಯರು ಹೋರಾಟ ನಡೆಸಿದ್ದು ನಾರಾಯಣಗುರುಗಳು ಪ್ರಮುಖರು ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು. ಪಿರಿಯಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 163ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಇಂತಹವರು ಹಾಕಿಕೊಟ್ಟ ಮಾರ್ಗಗಳನ್ನು ಜೀವನದಲ್ಲಿ ಸ್ಪಲ್ಪವಾದರೂ ಅಳವಡಿಸಿಕೊಳ್ಳಬೇಕು. ಸದಾ ದುಡಿಮೆಯನ್ನು ನಂಬಿ ಬದುಕು ನಡೆಸುತ್ತಿರುವ ಆರ್ಯ ಈಡಿಗರ ಸಮಾಜಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿಸಿಕೊಡಿಸಲು ಈಗಾಗಲೇ ತಹಶೀಲ್ದಾರ್‌ರಿಗೆ ಸೂಚಿಸಲಾಗಿದೆ ಶೀಘ್ರದಲ್ಲಿ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್.ಆರ್.ಕಾಂತರಾಜು, ಬಸವಣ್ಣವರ ನಂತರ ಸಾಮಾಜಿಕ ಕಾಂತ್ರಿ ಮಾಡಿ ಅಸ್ಪೃಶ್ಯತೆ ಮತ್ತು ಅಸಮಾನತೆ ವಿರುದ್ಧ ಹೋರಾಟ ನಡೆಸಿದ ಮಹಾನ್ ಸಂತ ಎಂದರೆ ನಾರಾಯಣಗುರು. ಕೇರಳ ರಾಜ್ಯದಲ್ಲಿ ಈಡಿಗ ಜನಾಂಗದವರು ಮತ್ತು ಮುಂದುವರಿದ ಜನಾಂಗದವರ ನಡುವೆ ಇದ್ದ ಅಸಮಾನತೆ ತೊಡೆದುಹಾಕಿ ತುಳಿತಕ್ಕೆ ಒಳಗಾದ ಸಮಾಜಗಳಿಗೆ ಶಿಕ್ಷಣ ನೀಡಿದರು ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ವೇಣುಗೋಪಾಲ್, ಪಟ್ಟಣದಲ್ಲಿ ಹಲವು ಬೀದಿಗಳಿಗೆ ಜಾತಿಯ ಹೆಸರಿಡಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇವುಗಳನ್ನು ಬದಲಾವಣೆ ಮಾಡಿ ಒಂದು ಬೀದಿಗೆ ನಾರಾಯಣಗುರುಗಳ ಹೆಸರನ್ನು ನಾಮಕರಣ ಮಾಡುವುದಾಗಿ ತಿಳಿಸಿದರು. ಸಮಾರಂಭಕ್ಕೂ ಮುನ್ನ ಆರ್ಯ ಈಡಿಗರ ಸಮುದಾಯ ಭವನದಿಂದ ನಾರಾಯಣಗುರುಗಳ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ತಹಶೀಲ್ದಾರ್ ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾನ್ಸೂನ್‌ಚಂದ್ರು, ಪುರಸಭೆ ಸದಸ್ಯರಾದ ಅಬ್ದುಲ್‌ಅಜೀಜ್, ಅಶೋಕ್‌ಕುಮಾರ್‌ಗೌಡ, ಎಂ.ಸುರೇಶ್,ಪುಟ್ಟಯ್ಯ, ಪಿ.ಮಹದೇವ್, ಆರ್ಯ ಈಡಿಗರ ಸಂಘದ ಅಧ್ಯಕ್ಷ ಪಿ.ವೈ.ಮಲ್ಲೇಶ್, ಕಾರ್ಯದರ್ಶಿ ನಿಂಗರಾಜು, ಖಜಾಂಜಿ ಅಕ್ಷಯ ಕಾಂತರಾಜು, ಉಪಾಧ್ಯಕ್ಷ ಪಿ.ಎಸ್.ನಾರಾಯಣ, ಜೆ.ಮೋಹನ್, ಉಮೇಶ್, ಕುಮಾರ್, ಮಾಧು, ದೇವರಾಜ್, ಪಿ.ಜನಾರ್ಧನ್ ಮತ್ತಿತರರಿದ್ದರು.