Advertisement

ಸಮಾನತೆಯ ಸಮಾಜಕ್ಕೆ ನಾರಾಯಣ ಗುರುಗಳು ಆದರ್ಶ

09:32 PM Sep 13, 2019 | Team Udayavani |

ದೇವನಹಳ್ಳಿ: ಬದುಕಿನಲ್ಲಿ ದುಖಃ ರಹಿತವಾಗಿ ಬಾಳಬೇಕಾದರೆ ದೇಶ ಮತ್ತು ಈಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಧಿಕಾರಿ ಪಿ.ಎನ್‌ ರವೀಂದ್ರ ಅಭಿಪ್ರಾಯಪಟ್ಟರು. ತಾಲೂಕಿನ ಚಪ್ಪರದ ಕಲ್ಲು ಸರ್ಕಲ್‌ ಬಳಿ ಇರುವ ಜಿಲ್ಲಾ ಸಂಕೀರ್ಣದಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಆಯೋಜಿಸಿದ್ದ ಮಹರ್ಷಿ ನಾರಾಯಣ ಗುರುಗಳ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತೆ ಇದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಅವರ ಅಮೂಲ್ಯವಾದ ಚಿಂತನೆಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಯಾವುದೇ ಲೋಪ ದೋಷಗಳಿಲ್ಲದ ಜನಪರ ಕಾಳಜಿ ಗುರುಗಳಲ್ಲಿ ಇತ್ತು. ಆದರೆ ಇಂದು ಮೇಲ್ಜಾತಿ, ಕೆಳಜಾತಿ, ಅಸ್ಪೃಶ್ಯತೆ ಸೇರಿದಂತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಎಲ್ಲೆಡೆ ಜನರ ಮನಸ್ಸನ್ನು ಆಳುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿದರು.

ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಠ ಪದ್ದತಿಗಳನ್ನು ತೊಡೆದು ಹಾಕಲು ಜನರಲ್ಲಿ ಜಾಗೃತಿ ಮತ್ತು ಹೋರಾಟ ಮಾಡಿದ ಮಹಾನ್‌ ವ್ಯಕ್ತಿಯ ದಿನಾಚರಣೆಯನ್ನು ವಿಜೃಂಭಣೆಯಿಂದ ಮಾಡಬೇಕಾಗಿತ್ತು. ಆದರೆ ಉತ್ತರ ಕರ್ನಾಟಕದಲ್ಲಿ ಉಂಟಾದ ನರೆ ಹಾವಳಿಯಿಂದ ಜನ ಸಂಕಷ್ಟದಲ್ಲಿ ಇದ್ದು, ಸರ್ಕಾರ ನಾರಾಯಣ ಗುರುಗಳ ಜಯಂತಿಯನ್ನು ಸರಳವಾಗಿ ಆಚರಣೆ ಮಾಡುವಂತೆ ಆದೇಶ ನೀಡಿದೆ. ಅದರಂತೆ ಸರಳವಾಗಿ ಆಚರಿಸುತ್ತಿದ್ದೇವೆ ಎಂದರು.

ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್‌ ಮಾತನಾಡಿ, ಮನುಷ್ಯನ ಜೀವನಕ್ಕೆ ಅವಶ್ಯವಾದ ನ್ಯಾಯ ಮತ್ತು ಸಮಾನತೆಯ ಕುರಿತಾಗಿ ಅದ್ವೈತ ತತ್ವ ಇದೆ ಎಂಬುವುದನ್ನು ನಾರಾಯಣ ಗುರುಗಳು ಕಂಡು ಕೊಂಡಿದ್ದರು. ಮನುಷ್ಯ ಮನುಷ್ಯನ ಸಂಬಂಧಗಳ ಬಗ್ಗೆ ಕುರಿತು ಸಮಾನತೆಯನು ಗುರುಗಳು ಬಯಸಿದ್ದರು ಎಂದು ಹೇಳಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್‌ ಕೆ.ನಾಯಕ್‌, ರಾಜ್ಯ ಕಂದಾಯ ನೌಕರರ ಸಂಘದ ಅಧ್ಯಕ್ಷ ವಿಜಯ್‌ ಕುಮಾರ್‌, ಜೆ.ಎಚ್‌.ಎಮ್‌ ಮಂಜುನಾಥ್‌, ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next