Advertisement
ಬ್ರಹ್ಮಶ್ರೀ ನಾರಾಯಣ ಗುರುಗಳ 167ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಅವರ ಸಮಾಧಿಯ ದಿನವನ್ನು ಯಾಕೆ ನೆನಪು ಮಾಡಿದೆ ಎಂದರೆ ಆದಿ ಮತ್ತು ಸಮಾಧಿಗೆ ಹತ್ತಿರದ ಸಂಬಂಧವಿದೆ. ಹುಟ್ಟು ಮತ್ತು ಸಾವು ಒಂದೇ ನಾಣ್ಯದ ಎರಡು ಮುಖಗಳು. ಸಮಾಜ ದಲ್ಲಿ ನಿಜವಾದ ಸಂತ ಸತ್ವದ ಬದುಕು ಸಾರ್ಥಕ ಆಗುವುದು ಅದು ಕಾಲಗರ್ಭದಲ್ಲಿ ಸೇರಿಹೋದ ಮೇಲೆ. ಈ ಮಾತಿಗೆ ನಾರಾಯಣ ಗುರುಗಳೇ ಸಾಕ್ಷಿ.
Related Articles
Advertisement
ನಾರಾಯಣ ಗುರುಗಳ ಬದುಕು, ಬರಹ, ತತ್ತ್ವ ಚಿಂತನೆಗಳು ಸೂರ್ಯನ ಬೆಳಕಿನಂತೆ. ಅದಕ್ಕೆ ಜಾತಿ, ಮತ, ಧರ್ಮ, ವರ್ಣದ ಗೋಡೆಯಿಲ್ಲ. ಈ ಭೂಮಿಗೆ ಬಂದ ಮನುಷ್ಯನ ವ್ಯಕ್ತಿತ್ವ ಗಟ್ಟಿಯಾಗುವುದು, ಪರಿಪೂರ್ಣವಾಗುವುದು ಅದು ಶ್ರೀಮಂತಿಕೆಯಿಂದಲ್ಲ. ಅಹಂಕಾರ, ಅಧಿಕಾರ, ಪರಂಪರೆಯ ಅಸ್ವಿತ್ವದಿಂದಲ್ಲ. ನೈತಿಕತೆಯಿಂದ ಕೂಡಿದ ಸ್ವತ್ಛ ಚರಿತ್ರೆಯೇ ನಿಜವಾದ ಶ್ರೀಮಂತಿಕೆ ಎಂಬ ಲೋಕ ಸತ್ಯವನ್ನು “ವಿದ್ಯಾವಂತರಾಗಿ ವಿದ್ಯೆಯಿಂದ ಸ್ವತಂತ್ರರಾಗಿ’ ಎಂಬ ಸರಳ ವಾಕ್ಯದ ಮೂಲಕ ತಿಳಿಹೇಳಿದ್ದಾರೆ.
ಅದ್ವೈತ ತಣ್ತೀವನ್ನು ಪ್ರತಿಪಾದಿಸುವ ಗುರುಗಳು “ಅಸತ್ಯ ದರ್ಶನ’ ಎಂಬ ಸಂಸ್ಕೃತ ಕೃತಿಯಲ್ಲಿ ಈ ಲೋಕ ದಲ್ಲಿ ಸತ್ಯ ಎಂಬುದು ಒಂದೇ, ಎರಡಿಲ್ಲ. ಪಂಚೇಂದ್ರಿಯಗಳ ಬಲೆಯಲ್ಲಿ ಸಿಲುಕಿ ಮನುಷ್ಯ ಜೀವಕ್ಕೆ ಅಸತ್ಯವೂ ಸತ್ಯದಂತೆ ಕಾಣುತ್ತದೆ. ಗುಡ್ಡದ ಸಾಮಾನ್ಯ ಕಲ್ಲೊಂದು ಶಿಲ್ಪಿಯ ಹೃದಯದ ಮೂಲೆ ಯಲ್ಲಿದ್ದ ದೇವರ ಕಲ್ಪನೆಯ ಮೂಲಕ ಕಲೆಯ ಬಲೆ ಯಲ್ಲಿ ಒಂದೊಂದು ಹೊಡೆತಕ್ಕೆ ವಿವಿಧ ದೇವರ ಮೂರ್ತಿಗಳಾಗುತ್ತದೆ. “ದೇವರು’ ಎನ್ನುವುದು ಶಿಲ್ಪಿ ಯೊಳಗಿನ ಆತ್ಮದಲ್ಲಿರುವ ರೂಪ. ಒಬ್ಬನೇ ದೇವರೆಂಬ ಈ ಸತ್ಯವನ್ನು ಹೃದಯಕ್ಕೆ ಮುಟ್ಟುವಂತೆ ಹೇಳಿದ ನಾರಾಯಣ ಗುರುಗಳು ಕೃಷಿ ಮೂಲದ, ವೈದ್ಯ ಮೂಲದ ಪಂಡಿತ ಪರಂಪರೆಯ ತಾಯಿ ಬೇರಿನಿಂದ ಚಿಗುರಿದವರು. ಶ್ರಾವಣ ಮಾಸದ ಓಣಂ ಹಬ್ಬದ ದಿನ ಶತಭಿಷ ನಕ್ಷತ್ರದಲ್ಲಿ ಕೇರಳದ ತಿರುವನಂತಪುರದ ಚೆಂಬಿಳಂತಿ ಗ್ರಾಮದಲ್ಲಿ ಈಳವ ಜನಾಂಗಕ್ಕೆ ಸೇರಿದ ಮಾದಲ್ ಆಶಾನ್ ಮತ್ತು ಕುಟ್ಟಿ ಅಮ್ಮಾಳ್ ದಂಪತಿಗೆ ಮಗನಾಗಿ ಹುಟ್ಟಿದ ನಾಣಿ, 2,500 ವರ್ಷಗಳ ಹಿಂದೆ ಹುಟ್ಟಿದ ಸಿದ್ಧಾರ್ಥ ಲೋಕದ ಕಣ್ಣೀರ ಸ್ನಾನದಿಂದ ಮಡಿಯಾಗಿ ಬುದ್ಧನಾದಂತೆ ಬಡವರ ಹಸಿವೆ, ದುಃಖ, ಅವಮಾನಗಳನ್ನು ಅನುಭವಿಸಿ ನಾರಾಯಣ ಗುರುವೆನಿಸಿದರು.
ಇಂದು ಕೊರೊನಾ ಎಂಬ ಮಹಾಮಾರಿಯಿಂದ ಪ್ರಪಂಚ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ನಾರಾ ಯಣ ಗುರುಗಳ ಪ್ರಕೃತಿ ತಣ್ತೀ, ಬೈದ್ಯ ಸತ್ವ ನಮಗೆ ನೆನಪಾಗಬೇಕಾಗಿದೆ. ಒಬ್ಬರ ಮುಖವನ್ನು ಇನ್ನೊಬ್ಬ ನೋಡಲಾರದಂತೆ ಮುಖ ಮುಚ್ಚಿಕೊಂಡು ಬದುಕುವ ಕಾಲದಲ್ಲಿ ಪ್ರಕೃತಿಯೇ ನಮ್ಮ ನಿಜ ಬದುಕು ಎಂದು ಹೇಳಿದ ನಾರಾಯಣ ಗುರುಗಳ ಮಾತುಗಳು ಅಮೃತ ಸದೃಶವಾಗುತ್ತವೆ. ಎಂತಹ ಜ್ಞಾನಿಯಾಗಲೀ ವಿಜ್ಞಾನಿ ಯಾಗಲೀ ಸಂತನಾಗಲೀ ಸಂಸಾರಿಯಾಗಲೀ ಪಂಚ ಭೂತಗಳ ತಣ್ತೀವನ್ನು ಮೀರಿ ಬದುಕಲು ಸಾಧ್ಯವಿಲ್ಲ. ಸಂಸ್ಕೃತ, ಮಲೆಯಾಳ, ತಮಿಳು ಭಾಷೆಗಳಲ್ಲಿ 79 ಕೃತಿಗಳನ್ನು ರಚಿಸಿದ ನಾರಾಯಣ ಗುರುಗಳು ಎಲ್ಲ ಕಡೆಯಲ್ಲೂ ಹೇಳಿರುವುದು ಹಸಿವು, ಬಡತನ, ಸ್ವಾಭಿಮಾನ, ಸಮಾನತೆಯ ಬಗ್ಗೆ. ಅವರ ಬದುಕು ಪವಾಡವಲ್ಲ, ಪರಿಶ್ರಮ. ಸ್ವಾಮಿ ಎಂದುಕೊಂಡು ಪೀಠದಲ್ಲಿ ಕೂರಲಿಲ್ಲ, ತಲೆ ಮೇಲೆ ಕಿರೀಟ ಇಡಲಿಲ್ಲ. ಸಮಾಜದಲ್ಲಿ ತಲೆಯೆತ್ತಿ ನಡೆಯಲಾರದವನಿಗೆ ಸಾಮಾಜಿಕ ನ್ಯಾಯ ಕೊಡುವುದೇ ನನಗೆ ಪೀಠ. ಅವರ ಬದುಕಿನಲ್ಲಿ ಬೆಳಕು ಕಂಡು ಮುಖದಲ್ಲಿ ನಗುವನ್ನು ಕಾಣುವುದೇ ನನಗೆ ಕಿರೀಟ ಎಂದು ಕನ್ನಡಿಯಲ್ಲಿ ನಿಮ್ಮ ನಿಮ್ಮ ಮುಖವನ್ನು ನೋಡಿಕೊಳ್ಳಿ ಎಂದರು. ನಾವು ದೇವರನ್ನು ಕಾಣಬೇಕಾದುದು ಮೂರ್ತಿಯಲ್ಲಿ ಅಲ್ಲ, ದೇವಸ್ಥಾನದಲ್ಲಿ ಅಲ್ಲ. ಭಜನೆ, ಬಲಿ, ಮೆರವಣಿಗೆಗಳಲ್ಲಿ ಅಲ್ಲ. ನಮ್ಮ ಒಳಗಿನ ಗುಡಿಯನ್ನು ಅರಿತುಕೊಳ್ಳುವುದ ರಲ್ಲಿ. ನಮ್ಮ ವಿದ್ಯೆ, ಸಂಘಟನೆ ನಮ್ಮ ಉದ್ಧಾರಕ್ಕೆ, ಸಮಾಜದ ಒಳಿತಿಗೆ. ಇನ್ನೊಬ್ಬರಿಗೆ ನೋವು ಕೊಡುವುದ ಕ್ಕಲ್ಲ. ಶಾಲೆಗಳು ವಿದ್ಯಾಮಂದಿರಗಳಾಗಬೇಕು. ಜ್ಞಾನಕ್ಕೆ ಜಾತಿಯಿಲ್ಲ. ವಿದ್ಯೆಯಿಂದ ಮಾತ್ರ ಉದ್ಧಾರ, ಸಮಾನತೆ ಸಾಧ್ಯ ಎಂದರು. 1916ರಲ್ಲಿ ರಮಣ ಮಹರ್ಷಿಗಳು, 1922ರಲ್ಲಿ ರವೀಂದ್ರನಾಥ ಠಾಗೋರರು, 1925ರಲ್ಲಿ ಮಹಾತ್ಮಾ ಗಾಂಧೀಜಿಯವರಂತಹ ಲೋಕ ಚಿಂತಕರು ಗುರುಗಳನ್ನು ಕಂಡು ಅವರ ತಣ್ತೀಗಳನ್ನು ಮನಗಾಣಿಸಿ ಕೊಂಡರು. ಅಂಬೇಡ್ಕರ್‌ರಂತಹ ಮೇಧಾವಿಗಳು ಅವರ ಸಂದೇಶದ ಸತ್ವವನ್ನು ಸಂವಿಧಾನದಲ್ಲಿ ಅಳ ವಡಿಸಿದರು. ವಿವೇಕಾನಂದರಂತಹ ಯೋಗಿಗಳು, ತ್ಯಾಗಿಗಳು ನಾರಾಯಣ ಗುರುಗಳ ಸೇವೆಗೆ ತಲೆದೂಗಿ ಅವರನ್ನು “ಲೋಕ ಗುರು’ ಎಂದು ಕರೆದರು.
ಇಂದು ಜಗತ್ತು ರೋಗಗ್ರಸ್ತವಾಗಿರುವ ಸಂದರ್ಭದಲ್ಲಿ ಅವರ ನೆನಪು ಮಾತ್ರ ನಮಗೆ ಸಾಲದು. ಅವರ ಸಂದೇಶಗಳನ್ನು ಮುಂದಿನ ಜನಾಂಗಕ್ಕೆ ಸಾರುವ ಕೆಲಸ ಆಗಬೇಕು. ಅವರು ಹೇಳಿದ ಮನುಷ್ಯ ಧರ್ಮ ಬೇಕು. ನಮ್ಮ ವೈಭವಕ್ಕೆ, ಉತ್ಸವಕ್ಕೆ, ಮನಸ್ಸು-ಮನಸ್ಸುಗಳನ್ನು ಮುರಿದು ಕಟ್ಟುವ ದೇವಸ್ಥಾನಗಳು, ಮಠ ಮಂದಿರ ಗಳು ಬೇಡ. ಸರ್ವ ಧರ್ಮದ ಜನರನ್ನು ಒಂದು ಮಾಡುವ ಬ್ರಹ್ಮಜ್ಞಾನ ಬೇಕಾಗಿದೆ. ಬನ್ನಿ, ನಾರಾಯಣ ಗುರುಗಳು ಹೇಳಿದ ಕನ್ನಡಿ ಯಲ್ಲಿ ನೋಡುವ. ಹೃದಯ ದೇಗುಲಕ್ಕೆ ಬ್ರಹ್ಮಕಲಶ ಮಾಡಿ ಕೊಳ್ಳುವ.
ಡಾ| ಗಣೇಶ ಅಮೀನ್ ಸಂಕಮಾರ್