Advertisement

ಸಚಿವರ ಎಚ್ಚರಿಕೆ ಹಿನ್ನೆಲೆ –ರಾಜ್ಯದಲ್ಲಿ ಒಂದೇ ತಿಂಗಳಲ್ಲಿ 150 ಕೋಟಿ ಅನುದಾನ ಬಳಕೆ

08:07 PM Mar 25, 2021 | Team Udayavani |

ಬೆಂಗಳೂರು: ಯುವ ಸಬಲೀಕರಣ ಮತ್ತು ಕ್ರೀಡೆ, ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರು ತಿಂಗಳ ಹಿಂದೆ ಪ್ರಗತಿ ಪರಿಶೀಲನಾ ಸಭೆ ನಡೆಸಿದಾಗ 1150 ಕೋಟಿ ರೂ. ಅನುದಾನ ಪಿಡಿ ಖಾತೆಯಲ್ಲಿರುವುದು ಗಮನಕ್ಕೆ ಬಂದಿತ್ತು. ಅನುದಾನ ಬಳಕೆಯಾಗದೆ ಇರುವುದಕ್ಕೆ ಗರಂ ಆಗಿದ್ದ ಸಚಿವರು ತಿಂಗಳ ಗಡವು ನೀಡಿದ್ದರು. ಇಂದು ಮತ್ತೆ ಸಭೆ ನಡೆಸಿದಾಗ ಒಂದೇ ತಿಂಗಳಲ್ಲಿ ಜಿಲ್ಲಾಧಿಕಾರಿಗಳು 150 ಕೋಟಿ ರೂ. ಅನುದಾನ ವೆಚ್ಚ ಮಾಡಿರುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಿದ್ದಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ವಿಕಾಸ ಸೌಧದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿಪರಿಶೀಲನಾ ಸಭೆ ನಡೆಸಿದ ಸಚಿವರು, ಅಧಿಕಾರಿಗಳು ಜಾಗೃತೆಯಿಂದ ಕೆಲಸ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಆದರೆ ಕೆಲ ಜಿಲ್ಲೆಯ ಪ್ರಗತಿ ಇನ್ನೂ ವೇಗವಾಗಬೇಕು ಎಂದು ಹೇಳಿದರು. ಮೈಸೂರು ಸೇರಿದಂತೆ ಕೆಲವು ಜಿಲ್ಲೆಯ ಜಿಲ್ಲಾಧಿಕಾರಿಗಳು ಸ್ಪಷ್ಟ ಮಾಹಿತಿಯೊಂದಿಗೆ ಸಭೆಗೆ ಬಂದಿಲ್ಲ. ಮತ್ತೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಹೇಳಿದರು.

ಅನುದಾನ ಬಳಕೆಯಲ್ಲಿ ಹಾಸನ ಜಿಲ್ಲೆ ಪ್ರಥಮ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಶೇ. 68 ರಷ್ಟು ಅನುದಾನ ಬಳಕೆ ಮಾಡಿದ್ದಾರೆ. ಉಡುಪಿ ಎರಡನೆ ಸ್ಥಾನದಲ್ಲಿದ್ದು 63 ರಷ್ಟು ಅನುದಾನ ವೆಚ್ಚ ಮಾಡಿದ್ದಾರೆ. 61 ರಷ್ಟು ಅನುದಾನ ಉಪಯೋಗಿಸಿರುವ ಚಿಕ್ಕಮಗಳೂರು 3 ನೇ ಸ್ಥಾನದಲ್ಲಿದೆ. ಅತ್ಯುತ್ತಮ ಕೆಲಸ ಮಾಡಿರುವ ಜಿಲ್ಲಾಧಿಕಾರಿಗಳನ್ನು ಸಚಿವರು ಅಭಿನಂದಿಸಿದರು. ಅಲ್ಲದೆ ಒಂದು ವರ್ಷದೊಳಗೆ ಇದೆ ರೀತಿಯಲ್ಲಿ ಕೆಲಸ ಮಾಡುವ ಜಿಲ್ಲಾಧಿಕಾರಿಗಳನ್ನ ವಿಧಾನ ಸೌಧಕ್ಕೆ ಕರೆದು ಗೌರವಿಸುತ್ತೇನೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಕೆಯಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಜಿಲ್ಲಾಧಿಕಾರಿಗಳನ್ನು ಸನ್ಮಾನಿಸುತ್ತೇನೆ ಎಂದು ಸಚಿವರು ಹೇಳಿದರು.

ಶಾಸಕರ ಅನುದಾನ ಹೊರತುಪಡಿಸಿ, ಇಲಾಖೆಯಿಂದ ನೀಡಿರುವ ಅನುದಾನ ಪಿಡಿ ಖಾತೆಯಲ್ಲಿ ಇದ್ದು, ಅನುದಾನ ಬಳಕೆಗಾಗಿ 2017 ರಲ್ಲೇ ಅನುಮೋದನೆ ನೀಡಲಾಗಿತ್ತು.  ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಕಾಮಗಾರಿ ನಡೆಸಲು ಅನುಮೋದನೆ ನೀಡಲಾಗಿತ್ತು. ಆದರೆ ಇನ್ನೂ ಸಮರ್ಪಕ ರೀತಿಯಲ್ಲಿ ಬಳಕೆಯಾಗದಿರುವುದಕ್ಕೆ ಸಚಿವರು ಜಿಲ್ಲಾಧಿಕಾರಿಗಳ ಮೇಲೆ ಗರಂ ಆದರು. ತಕ್ಷಣ ಕಾಮಗಾರಿ ಮುಗಿಸಿ, ವರದಿ ನೀಡಿ ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

Advertisement

ಎರಡು ವರ್ಷಕ್ಕಿಂತ ಹಳೆಯ ಕಾಮಗಾರಿ ಮುಗಿಸಿ. ಇಲ್ಲದಿದ್ದರೆ ಹಣ ವಾಪಸ್ ಪಡೆಯುವ ಎಚ್ಚರಿಕೆ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನದ ಅಡಿ ಎರಡು ವರ್ಷಗಳಿಂದ ಕಾಮಗಾರಿಗಳನ್ನೇ ಆರಂಭಿಸಿಲ್ಲ. ಏನು ಸಮಸ್ಯೆ ಎಂದು ಸಚಿವರು ಜಿಲ್ಲಾಧಿಕಾರಿಗಳನ್ನ ಪ್ರಶ್ನಿಸಿದರು. ತಕ್ಷಣ ಕೆಲಸ ಆರಂಭವಾಗಬೇಕು. ಇಲ್ಲದಿದ್ದಲ್ಲಿ ಅಂತಹ ಕಾಮಗಾರಿಗಳನ್ನು ರದ್ದುಪಡಿಸಿ, ಹಣವನ್ನು ವಾಪಸ್ ಪಡೆಯುವುದಾಗಿ ಎಚ್ಚರಿಕೆ ನೀಡಿದರು.

ಕಳೆದ ಸಾಲಿನ 2 ಕೋಟಿ ಗೆ, ವರ್ಷ 1 ಕೋಟಿ ರೂ. ಅನುದಾನಕ್ಕೆ ಮಾತ್ರ ಅನುಮೋದನೆ

ಕೋವಿಡ್ ಕಾರಣದಿಂದ ಆರ್ಥಿಕ ಸಮಸ್ಯೆ ಇದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಕ್ಕೆ ಅನುಮೋದನೆ ನೀಡುವಾಗ ಸರ್ಕಾರದ ಮಾರ್ಗಸೂಚಿ ಪಾಲಿಸಬೇಕು. 2019-20 ನೇ ಸಾಲಿಗೆ ಪ್ರತಿ ಶಾಸಕರ ಅನುದಾನದಲ್ಲಿ 2 ಕೋಟಿ ರೂ. ಗೆ ಮಾತ್ರ ಅನುಮೋದನೆ ನೀಡಬೇಕು. ಪ್ರಸಕ್ತ ಸಾಲಿಗೆ ಕೇವಲ 1 ಕೋಟಿ ರೂ. ಗೆ ಮಾತ್ರ ಅನುಮೋದನೆ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ಕ್ರಿಯಾ ಯೋಜನೆಯನ್ನೇ ನೀಡದ ಶಾಸಕರು

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನ ಬಳಕೆಗೆ ಆಯಾ ಶಾಸಕರು ಕ್ರಿಯಾಯೋಜನೆ ನೀಡಬೇಕು. ಅದರ ಅನ್ವಯ ಪಿಡಿ ಖಾತೆಯಿಂದ ಅನುದಾನ ಬಿಡುಗಡೆಯಾಗುತ್ತದೆ. ಆದರೆ ಶಾಸಕರೇ ತಮ್ಮ ಕ್ಷೇತ್ರಕ್ಕೆ ಕೆಲಸ ಅನುದಾನ ಬಳಕೆ ಮಾಡಿಕೊಳ್ಳುವಲ್ಲಿ ಹಿಂದುಳಿದಿದ್ದಾರೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿಗಳು ನೀಡಿರುವ ಮಾಹಿತಿ ಅನ್ವಯ 2019-20 ನೇ ಸಾಲಿನಲ್ಲಿ ಕೇವಲ 45 ಶಾಸಕರು ಮತ್ತು 6 ಜನ ವಿಧಾನಪರಿಷತ್ ಸದಸ್ಯರು ಕ್ರಿಯಾಯೋಜನೆ ಕೊಟ್ಟಿದ್ದಾರೆ. 2020- 21 ನೇ ಸಾಲಿನಲ್ಲೂ ಶಾಸಕರ ನಿರಾಸಕ್ತಿ ಮುಂದುವರೆದಿದೆ. 53 ಶಾಸಕರು, 8 ಜನ ಎಮ್ಮೆಲ್ಸಿಗಳು ಮಾತ್ರ ಕ್ರಿಯಾಯೋಜನೆ ಕೊಟ್ಟಿದ್ದಾರೆ.

ಒಟ್ಟಾರೆಯಾಗಿ ರಾಜ್ಯದಲ್ಲಿ ಶಾಸಕರ ಸ್ಥಳೀಯಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಕೇವಲ ಶೇ. 32 ರಷ್ಟು ಮಾತ್ರ ಬಳಕೆಯಾಗಿದೆ. ಎಪ್ರಿಲ್ ಅಂತ್ಯದೊಳಗೆ ಪ್ರಗತಿಯಲ್ಲಿರುವ ಎಲ್ಲ ಕಾಮಗಾರಿ ಮುಗಿಸಿ ವರದಿ ನೀಡಬೇಕು  ಎಂದು ಜಿಲ್ಲಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು, ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗಳು  ಉಪಸ್ಥಿರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next