ಕಾಸರಗೋಡು: ಕೇರಳ ಸರಕಾರವು ನೀಡುವ 2021 – 22ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕನ್ನಡಿಗರಾದ ನಾರಾಯಣ ದೇಲಂಪಾಡಿ ಆಯ್ಕೆಯಾಗಿದ್ದಾರೆ.
ಪ್ರಸ್ತುತ ಎಸ್‌ಎಸ್‌ಕೆ ಕಾಸರಗೋಡು ಜಿಲ್ಲಾ ಪ್ರೋಗ್ರಾಂ ಆಫೀಸರ್ ಆಗಿರುವ ನಾರಾಯಣ ಅವರು ಕ್ರಿಯಾಶೀಲ ವ್ಯಕ್ತಿತ್ವ ಮತ್ತು ಬಹುಮುಖೀ ಪ್ರತಿಭಾ ವಂತರು. 2001ರಲ್ಲಿ ಕೇರಳ ಲೋಕಸೇವಾ ಆಯೋಗ ನಡೆಸಿದ ಪರೀಕ್ಷೆಯಲ್ಲಿ ಪ್ರಥಮ ರ್‍ಯಾಂಕ್‌ನೊಂದಿಗೆ ತೇರ್ಗಡೆ
ಯಾಗಿ ಪ್ರೌಢ ಶಾಲಾ ಶಿಕ್ಷಕರಾಗಿ ತಾನು ಕಲಿತ ಜಿಎಚ್‌ಎಸ್ ದೇಲಂಪಾಡಿ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು. ಗ್ರಾಮೀಣ ಪ್ರದೇಶದ ಈ ಶಾಲೆಯಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವ ಮೂಲಕ ಸರ್ವರ ಮೆಚ್ಚುಗೆಗೆ ಪಾತ್ರರಾದರು. 2005ರಲ್ಲಿ ಐಟಿ ಅಟ್ ಸ್ಕೂಲ್‌ನಲ್ಲಿ ಮಾಸ್ಟರ್ ಟ್ರೈನರ್ ಆಗಿ ಆಯ್ಕೆಯಾದರು. ಈ ಮೂಲಕ ಸುಮಾರು 2,000ಕ್ಕಿಂತಲೂ ಅಧಿಕ ಶಿಕ್ಷಕರಿಗೆ ರಾಜ್ಯ, ತಾಲೂಕು ಮಟ್ಟದಲ್ಲಿ ತರಬೇತಿ ನೀಡಿದ್ದಾರೆ.
2014ರಲ್ಲಿ ಕಾಸರಗೋಡು ಮಾಯಿಪ್ಪಾಡಿ ಡಯಟ್‌ಗೆ ಅಧ್ಯಾಪಕ ತರಬೇತುದಾರರಾಗಿ ಸೇರಿದ ಅವರು ಮೂಲಭೂತ ವಿದ್ಯಾಭ್ಯಾಸ, ಮನಃಶಾಸ್ತ್ರ, ಸಮಾಜ ವಿಜ್ಞಾನ ಮತ್ತು ಕನ್ನಡ ಭಾಷೆಯನ್ನು ಕಲಿಸುವುದರೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಅಧ್ಯಾಪಕ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿ ಎಲ್ಲರ ನೆಚ್ಚಿನ ಅಧ್ಯಾಪಕರೆನ್ನಿಸಿಕೊಂಡರು.
ಯಕ್ಷಗಾನ ಪ್ರಿಯರಾಗಿರುವ ನಾರಾಯಣ ಅವರು ಆ ಕಲೆಯ ಒಲವನ್ನು ತಮ್ಮ ಅಧ್ಯಾಪಕ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಮೂಲಕ ಪಸರಿಸಿದ್ದಾರೆ.