ವಿಜಯಪುರ: ಶೋಷಿತರ ಶ್ರೇಯದ ಜೊತೆಗೆ ಅಸಮಾನತೆ ತುಂಬಿಕೊಂಡಿರುವ ಸಮಾಜದಲ್ಲಿ ಸಮಾನತೆಗಾಗಿ ಶ್ರಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಗಳು ಸಾರ್ವಕಾಲಿಕ ಅಮೂಲ್ಯ ಎಂದು ಡಾ| ಮಲ್ಲಿಕಾರ್ಜುನ ಮೇತ್ರಿ ಅಭಿಪ್ರಾಯಪಟ್ಟರು.
ಶನಿವಾರ ನಗರದಲ್ಲಿ ಜಿಲ್ಲಾಡಳಿತ, ಜಿಪಂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬಸವಾದಿ ಶರಣರಂತೆ ನಾರಾಯಣ ಗುರುಗಳು ಸಹ ಸಮಾಜದಲ್ಲಿ ಶೋಷಿತ, ದುರ್ಬಲ ಸಮುದಾಯದ ಜನರ ಏಳ್ಗೆಗಾಗಿ ಶ್ರಮಿಸಿದ್ದರು ಎಂದರು. ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರೆಂಬ ಸೈದ್ದಾಂತಿಕ ಚಿಂತನೆಗಳ ಮೂಲಕ ದೇಶದಲ್ಲಿ ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಯೋಗದಲ್ಲಿ ಪತಂಜಲರಂತೆ, ಜ್ಞಾನದಲ್ಲಿ ಶಂಕರಾಚಾರ್ಯರರಂತೆ, ಅಹಿಂಸೆಯಲ್ಲಿ ಬುದ್ಧರಂತೆ, ಮಾನವೀಯತೆಯಲ್ಲಿ ಏಸುವಿನಂತೆ ಬ್ರಹ್ಮಶ್ರೀ ನಾರಾಯಣ ಗುರುಗಳು ಸೇವೆ ಮಾಡಿದ್ದಾರೆ ಎಂದು ವರ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾ ಧಿಕಾರಿ ರಮೇಶ ಕಳಸದ ಮಾತನಾಡಿ, ಕೇರಳ ರಾಜ್ಯದಲ್ಲಿ ಜನಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು, ಸಮಾಜ ಕಂಡ ಶ್ರೇಷ್ಠ ದಾರ್ಶನಿಕರು. ಕೆಳ ವರ್ಗದ ಜನರ ಉದ್ಧಾರಕ್ಕಾಗಿ ಶ್ರಮಿಸಿದ ನಾರಾಯಣ ಗುರುಗಳು ಸೇವೆ ಸದಾ ಸ್ಮರಣೀಯ ಎಂದರು.
ಸಮಾಜದಲ್ಲಿ ಸಮಾನತೆ ಸ್ಥಾಪನೆಗಾಗಿ ಸರ್ವಧರ್ಮ ಸಮ್ಮೇಳನ ಮಾಡುವ ಮೂಲಕ ಸಮಾಜದಲ್ಲಿ ಮನುಕುಲ ಒಂದೇ, ಮಾನವರೆಲ್ಲ ಒಂದೆ ಎಂದ ಸಂದೇಶದೊಂದಿಗೆ ನಾರಾಯಣ ಗುರುಗಳು ಸಮಾಜೊದ್ಧಾರಕ್ಕೆ ಪರಿಶ್ರಮಿಸಿದರು ಎಂದು ಅಭಿಪ್ರಾಯಪಟ್ಟರು.
ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಎಸ್.ಜಿ.ಲೋಣಿ, ಈಡಿಗ ಸಮಾಜದ ಜಿಲ್ಲಾಧ್ಯಕ್ಷ ಬದವರಾಜ ಈಳಿಗೇರ, ಡಾ| ನಾಗೇಶ ಈಳಿಗೇರ, ಪ್ರಭಾಕರ ಈಳಿಗೇರ, ಸದಾಶಿವ ಈಳಿಗೇರ, ಹನುಮಂತಪ್ಪ ಈಳಿಗೇರ, ಸಿದ್ದು ಈಳಿಗೇರ, ಬಾಪು ಈಳಿಗೇರ, ಕಸ್ತೂರಿ ಈಳಿಗೇರ, ಯಮನಪ್ಪ ಈಳಿಗೇರ, ದೇವೇಂದ್ರ ಮೀರೆಕರ, ಭೀಮರಾಯ ಜಿಗಜಿವಣಿ, ವಿದ್ಯಾವತಿ ಅಂಕಲಗಿ, ಗಿರೀಶ ಕುಲಕರ್ಣಿ ಇದ್ದರು.