Advertisement

ನಾರಾವಿ: ಗ್ರಾಮಸ್ಥರಿಂದ ರಸ್ತೆ ನಿರ್ಮಾಣದ ಪಣ

03:38 PM Feb 02, 2018 | |

ವೇಣೂರು: ರಸ್ತೆಯಿಲ್ಲದೆ ಶತಮಾನಗಳಿಂದ ಪರದಾಡುತ್ತಿದ್ದ ಕುಟುಂಬಕ್ಕೆ ಗ್ರಾಮಸ್ಥರೇ ಹಾರೆ ಪಿಕ್ಕಾಸುಗಳನ್ನು ಹೆಗಲಿಗೇರಿಸಿ ಶ್ರಮದಾನದ ಮೂಲಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.

Advertisement

ನಾರಾವಿ ಗಾ.ಪಂ. ವ್ಯಾಪ್ತಿಯ ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯೊಳಗಿನ ಮೂಡಾಡಿ ಗ್ರಾಮದ ಸಂಪರ್ಕಕ್ಕೆ ರಸ್ತೆ ನಿರ್ಮಾಣವಾಗಲಿದೆ. ಅಲ್ಲಿರುವುದು ಒಂದೇ ಮನೆ. ತಲೆ ತಲಾಂತರದಿಂದಲೂ ಅಲ್ಲೇ ವಾಸ್ತವ್ಯವಿದ್ದಾರೆ. ‘ಅಲ್ಪಮೊತ್ತದ ಹಣದ ಆಸೆಗೆ ನಾವು ಬದುಕಿದ ಮನೆ, ಪರಿಸರ ಬಿಟ್ಟು ಹೊರ ಹೋಗಲಾರೆವು’ ಎಂದು ಕಾಡಿನೊಳಗಿರುವ ಕುಟುಂಬಕ್ಕೆ ರಸ್ತೆ ಸೌಲಭ್ಯವೇ ಇಲ್ಲವಾಗಿತ್ತು. ಈ ಕುಟುಂಬದಲ್ಲಿ ಶಾಲೆಗೆ ಹೋಗುವ ಮೂವರು ಸಣ್ಣ ಮಕ್ಕಳಿದ್ದಾರೆ. ಶಾಲೆ ಬಲುದೂರ. ಇವರಿಗೆ ಬೆಳಗ್ಗಿನ ಕಾಲ್ನಡಿಗೆಯೇ ದಿನನಿತ್ಯದ ಪಾಠವಾಗಿತ್ತು. ಹೆತ್ತವರೂ ಮಕ್ಕಳೊಂದಿಗೆ ಶಾಲಾ ಬಸ್‌ ಬರುವಲ್ಲಿಯವರೆಗಿನ ಸುಮಾರು ಒಂದೂವರೆ ಕಿ.ಮೀ. ದೂರ ನಡೆದೇ ಬಸ್‌ ಹತ್ತಿಸಿ ಮನೆಗೆ ಹಿಂದಿರುಗುತ್ತಾರೆ. ಸಂಜೆಯೂ ಕಾಲ್ನಡಿಗೆ. ಇದು ನಿತ್ಯದ ಕೆಲಸ.

ಇಂತಹ ಪ್ರದೇಶಕ್ಕೆ ಮೂಲ ಸೌಕರ್ಯವಾದ ರಸ್ತೆ ನಿರ್ಮಾಣಕ್ಕೆ ಅನುಮತಿ ಇಲ್ಲ. ಸರಕಾರದ ನಿಲುವಿನಿಂದ ಬೇಸತ್ತಿರುವ ರಾಷ್ಟ್ರೀಯ ಉದ್ಯಾನವಾಸಿಗಳು ಕಾಡಿನ ಕೊನೆಯ ಮನೆಯವರೆಗೂ ರಸ್ತೆ ನಿರ್ಮಾಣ ಆಗಬೇಕೆಂದು ಪಣತೊಟ್ಟು ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಗ್ರಾಮಸ್ಥರೆಲ್ಲರೂ ಜತೆಯಾಗಿಯೇ ಶ್ರಮದಾನದಲ್ಲಿ ಪಾಲ್ಗೊಂಡು ರಸ್ತೆ ನಿರ್ಮಿಸುತ್ತಿದ್ದು, ಶತಮಾನದ ನೋವೊಂದು ಅಂತ್ಯ ಕಾಣುವ ನಿರೀಕ್ಷೆಯಲ್ಲಿದೆ.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮತ್ತು ಡಿ.ವೈ.ಎಫ್‌.ಐ. ಕುತ್ಲೂರು ಘಟಕದ ನಿರಂತರ ಶ್ರಮದ ಫಲವಾಗಿ ಮಣ್ಣು ಹದಗೊಂಡಿದೆ. ರಸ್ತೆಯ ಗುರುತು ನಿರ್ಮಾಣವಾಗಿದೆ. ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿದೆ. ನಮ್ಮೂರಿನ ಒಂಟಿ ಮನೆಗೂ ವಾಹನದ ಚಕ್ರ ತಿರುಗಿಯೇ ತಿರುಗುತ್ತದೆಂಬ ಭರವಸೆ ಜನರಲ್ಲಿ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next