Advertisement

ಕೊಳೆ ರೋಗಕ್ಕೆ  ಪರಿಹಾರ ಒದಗಿಸಲು ಆಗ್ರಹ 

11:47 AM Aug 19, 2018 | Team Udayavani |

ವೇಣೂರು: ವಾಡಿಕೆಗಿಂತ ಅಧಿಕ ಮಳೆ ಸುರಿದು ಅಡಿಕೆ ಕೃಷಿ ನಾಶವಾಗಿದೆ. ವ್ಯಾಪಕವಾಗಿ ಅಡಿಕೆ ಕೊಳೆರೋಗಗಳಿಗೆ ತುತ್ತಾದ ಕಾರಣ ಅಡಿಕೆ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕೆಂಬ ಮಹತ್ವರ ನಿರ್ಣಯನ್ನು ನಾರಾವಿ ಗ್ರಾಮಸಭೆಯಲ್ಲಿ ಕೈಗೊಳ್ಳಲಾಯಿತು. ನಾರಾವಿ ಗ್ರಾ.ಪಂ. 2018-19ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಗ್ರಾ.ಪಂ. ಅಧ್ಯಕ್ಷ ರವೀಂದ್ರ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಮಾರ್ಗದರ್ಶಿ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಗುರುಪ್ರಸಾದ್‌ ಸಭೆಯನ್ನು ನಡೆಸಿಕೊಟ್ಟರು.

Advertisement

ಕೃಷಿ ಅಧಿಕಾರಿ ಮಾಹಿತಿ ನೀಡಿ, ಪ್ರಧಾನಮಂತ್ರಿ ಬಿಮಾ ಫಸಲು ಯೋಜನೆಯಡಿ ಅರ್ಜಿ ಸಲ್ಲಿಸಲು ಜೂ. 30ಕ್ಕೆ ಮುಗಿದಿದೆ. ಇನ್ನು ಯೋಜನೆಯಲ್ಲಿ ಇನ್ನು ಅರ್ಜಿ ಸ್ವೀಕರಿಸಲು ಅಸಾಧ್ಯ ಎಂದು ಅಧಿಕಾರಿ ಹೇಳುತ್ತಿದ್ದಂತೆ ಆಕ್ರೋಶಗೊಂಡ ಗ್ರಾಮಸ್ಥರು, ಅಧಿಕಾರಿ ವಿರುದ್ಧ ಹರಿಹಾಯ್ದರು. ವ್ಯಾಪಕ ಅಡಿಕೆ ಕೃಷಿ ಕೊಳೆರೋಗಕ್ಕೆ ತುತ್ತಾಗಿದೆ. ಯಾವುದಾದರೂ ಯೋಜನೆಯಲ್ಲಿ ಅಡಿಕೆ ಕೃಷಿಕರಿಗೆ ಪರಿಹಾರ ಒದಗಿಸಲು ಶ್ರಮವಹಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಫಸಲು ಬಿಮಾ ಯೋಜನೆಯಡಿ ಪರಿಹಾರ ಅರ್ಜಿ ಸ್ವೀಕರಿಸಲು ಅವಧಿ ವಿಸ್ತರಿಸುವಂತೆ ಆಗ್ರಹಿಸಿದರು. ಕೃಷಿ, ತೋಟಗಾರಿಕೆ ಸಹಿತ ಇನ್ನಿತ್ತರ ಇಲಾಖೆಗಳಿಂದ ಲಭಿಸುವ ಯೋಜನೆಗಳ ಮಾಹಿತಿಯನ್ನು ಗ್ರಾ.ಪಂ.ನಲ್ಲೇ ಲಭಿಸುವಂತೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಪುರುಷಗುಡ್ಡೆ-ಮರೋಡಿ ರಸ್ತೆಯಲ್ಲಿ ಸರಕಾರಿ ಜಾಗದ ಅತಿಕ್ರಮಣ ಆಗಿರುವ ಬಗ್ಗೆ ಗ್ರಾಮಸ್ಥರು ಕಂದಾಯ ಇಲಾಖೆಯ ಅಧಿಕಾರಿಯ ಗಮನಕ್ಕೆ ತಂದರು. ಪಂ.ನಿಂದ ವರದಿ ಪಡೆದು ಕ್ರಮಕೈಗೊಳ್ಳುವುದಾಗಿ ಅಧಿಕಾರಿ ಹೇಳಿದರು.

ನಾರಾವಿ ಆರೋಗ್ಯ ಕೇಂದ್ರ
ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಎಲ್ಲ ವ್ಯವಸ್ಥೆಗಳಿದ್ದರೂ ಸಿಬಂದಿಯಿಲ್ಲ. ಅಲ್ಲದೆ ರಾತ್ರಿ ವೇಳೆಯಲ್ಲೂ ವೈದ್ಯರ ನೇಮಕ ಆಗಬೇಕು. ಖಾಲಿಯಿರುವ ಸಿಬಂದಿ ನೇಮಕ ಆಗಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಗ್ರಾಮಸ್ಥರು ಆಗ್ರಹಿಸಿದರು. ವಿವಿಧ ಇಲಾಖಾಧಿಕಾರಿಗಳು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಗ್ರಾ.ಪಂ. ಸದಸ್ಯರು, ಸಿಬಂದಿ ಉಪಸ್ಥಿತರಿದ್ದರು. ಪಂ. ಅಭಿವೃದ್ಧಿ ಅಧಿಕಾರಿ ನಿರ್ಮಲ್‌ ಕುಮಾರ್‌ ಸ್ವಾಗತಿಸಿ, ಈ ಹಿಂದಿನ ಸಭೆಯ ನಡಾವಳಿ ಮಂಡಿಸಿದರು. ಪಂ. ಸಿಬಂದಿ ಸತೀಶ್‌ ಎಚ್‌. ವಂದಿಸಿದರು.

ಪೊಲೀಸರಿಗೆ ಕರೆ 
ಜಾನುವಾರುಗಳ ಕಳ್ಳತನ, ಸಾಗಾಟ ಅಧಿಕವಾಗಿದೆ. ಪ್ರತೀ ದಿನ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಬೇಕು. ವೇಣೂರಿಂದ 18 ಕಿ.ಮೀ. ಅಂತರವಿರುವ ಕಾರಣ ನಾರಾವಿಯಲ್ಲಿ ಪೊಲೀಸ್‌ ಔಟ್‌ಪೋಸ್ಟ್‌ ನಿರ್ಮಾಣ ಆಗಬೇಕು ಎಂದು ಪೊಲೀಸ್‌ ಅಧಿಕಾರಿಯನ್ನು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಅಧಿಕಾರಿ, ವಾರದಲ್ಲಿ 3 ದಿನ ಗ್ರಾಮಕ್ಕೆ ಭೇಟಿ ನೀಡುತ್ತಿದ್ದೇವೆ. ಪೊಲೀಸರು ಗ್ರಾಮಸ್ಥರ ನೇರ ಸಂಪರ್ಕದಲ್ಲಿರುತ್ತಾರೆ. ಅಪರಾಧ ಕೃತ್ಯಗಳು ಕಂಡು ಬಂದರೆ ಬೀಟ್‌ ಪೋಲೀಸರಿಗೆ ಕರೆ ಮಾಡಿ ತಿಳಿಸಬಹುದು ಎಂದರು.

Advertisement

ಪ್ರಮುಖ ಬೇಡಿಕೆ
· ಕುತ್ಲೂರು ಪುರುಷಗುಡ್ಡೆ ಬಳಿಯ ಮೋರಿ ದುರಸ್ತಿಗೊಳಿಸಬೇಕು.
· ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಜಾಗ ಕಾದಿರಿಸಬೇಕು.
· ಪೊಲೀಸ್‌ ಚೆಕ್‌ಪೋಸ್ಟ್‌ ನಿರ್ಮಾಣ ಆಗಬೇಕು.
· ಕುತ್ಲೂರು ಬಜಿಲಪಾದೆಯಲ್ಲಿ ದಾರಿದೀಪಗಳ ದುರಸ್ತಿ.
· ನಾರಾವಿ ಪ್ರಾ.ಆ. ಕೇಂದ್ರದ ಮೇಲ್ಛಾವಣಿ ದುರಸ್ತಿ ಕಾರ್ಯ ಆಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next