Advertisement

ನರಸಿಂಹರಾಜ ಕ್ಷೇತ್ರಕ್ಕೆ ಯಾರಾಗಲಿದ್ದಾರೆ ಅಧಿಪತಿ

12:45 PM Mar 21, 2023 | Team Udayavani |

ಮೈಸೂರು: ಮುಸ್ಲಿಂ ಮತಗಳ ಗಣನೀಯ ಸಾಂಧ್ರತೆ ಹೊಂದಿರುವ ಹಾಗೂ ದೀರ್ಘ‌ಕಾಲದವರೆಗೆ ಕಾಂಗ್ರೆಸ್‌ ಭದ್ರಕೋಟೆಯಾಗಿರುವ ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಾಲಿ ಶಾಸಕರಿಗೆ ಬಿಜೆಪಿ, ಜೆಡಿಎಸ್‌ ಹಾಗೂ ಎಸ್‌ಡಿಪಿಐ ಕಠಿಣ ಸವಾಲೊಡ್ಡಲು ಅಣಿಯಾಗುತ್ತಿವೆ.

Advertisement

ಕಾಂಗ್ರೆಸ್‌ಗೆ ಪಾರಂಪರಿಕವಾಗಿ ಸುರಕ್ಷಿತ ಕ್ಷೇತ್ರವೆಂದು ಪರಿಗಣಿಸಲಾಗಿದ್ದ ನರಸಿಂಹರಾಜ ವಿಧಾನಸಭೆ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಮೂರು ಪಕ್ಷಗಳಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದ್ದರೆ, ಎಸ್‌ಡಿಪಿಐನಲ್ಲಿ ಹಿಂದಿನ ಅಭ್ಯ ರ್ಥಿಯೇ ಸ್ಪರ್ಧಿಸುವುದು ಖಚಿತವಾಗಿದೆ. ಈ ಮೂಲಕ ಚತುಷ್ಕೋನ ಸ್ಪರ್ಧೆಗೆ ಎನ್‌.ಆರ್‌. ಕ್ಷೇತ್ರ ಸಾಕ್ಷಿಯಾಗಲಿದೆ.

ಹಾಲಿ ಶಾಸಕರೇ ಮತ್ತೂಮ್ಮೆ ಸ್ಪರ್ಧೆ ಸಾಧ್ಯತೆ: ಹಾಲಿ ಶಾಸಕ ತನ್ವೀರ್‌ ಸೇಠ್ 2023ರ ಚುನಾವಣೆ ಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕೆಲ ದಿನಗಳ ಹಿಂದೆ ಘೋಷಣೆ ಮಾಡಿದ್ದರೂ, ಎನ್‌.ಆರ್‌. ಕ್ಷೇತ್ರದಿಂದ ಮತ್ತೂಮ್ಮೆ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಗೋಚರಿಸಿದೆ. ಇತ್ತ ಮತ್ತೋರ್ವ ಆಕಾಂಕ್ಷಿ ಪಾಲಿಕೆ ಸದಸ್ಯ ಹಾಗೂ ಮಾಜಿ ಮೇಯರ್‌ ಆಗಿರುವ ಅಯೂಬ್‌ ಖಾನ್‌ ತನಗೂ ಟಿಕೆಟ್‌ ನೀಡುವಂತೆ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಶಾಸಕ ತನ್ವೀರ್‌ ಸೇಠ್‌ ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಬೆಂಬಲವಿದ್ದರೆ, ಅಯೂಬ್‌ ಖಾನ್‌ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೆರವಿದೆ. ಇವರಿಬ್ಬರಲ್ಲಿ ಹಾಲಿ ಶಾಸಕರೇ ಮತ್ತೂಮ್ಮೆ ಸ್ಪರ್ಧೆಗೆ ಇಳಿಯುವ ಸಾಧ್ಯತೆಗಳಿದೆ.

ಸ್ಪರ್ಧೆಗೆ ಪೂರಕ ವಾತಾವರಣ ಸೃಷ್ಟಿ: ಜೆಡಿಎಸ್‌ನಲ್ಲಿ ಪ್ರಭಾವಿಯಾಗಿರುವ ಅಬ್ದುಲ್‌ ಅಜೀಜ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಈ ಬಾರಿಯೂ ಅವರನ್ನೇ ಪಕ್ಷ ಕಣಕ್ಕಿಳಿಸಲು ನಿರ್ಧರಿಸಿದೆ. ಅಬ್ದುಲ್ಲಾಗೆ ಪೈಪೋಟಿ ನೀಡುವ ಮತ್ತೋರ್ವ ಮುಖಂಡ ಪಕ್ಷದಲ್ಲಿ ಇಲ್ಲದಿರುವುದು ಅವರ ಸ್ಪರ್ಧೆಗೆ ಪೂರಕ ವಾತಾವರಣ ಸೃಷ್ಟಿಯಾದಂತಾಗಿದೆ.

ಎಸ್‌ಡಿಪಿಐನಿಂದ ಅಬ್ದುಲ್‌ ಮಜೀದ್‌: ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದ್ದರೆ, ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಮಾತ್ರ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ. ಉಳಿದೆಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಸ್ಪರ್ಧೆ ಏರ್ಪಟ್ಟರೆ ಎನ್‌ಆರ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಈ ಮೂರು ಪಕ್ಷಗಳೊಂದಿಗೆ ಎಸ್‌ಡಿ ಪಿಐ ಸ್ಪರ್ಧೆಗೆ ಇಳಿಯಲಿದೆ. ಕೆ.ಎಚ್‌. ಅಬ್ದುಲ್‌ ಮಜೀದ್‌ ಈ ಚುನಾವಣೆಯಲ್ಲೂ ಎಸ್‌ಡಿಪಿ ಐನಿಂದ ಕಣಕ್ಕಿಳಿಯುವುದು ನಿಚ್ಚಳವಾಗಿದೆ. ಎನ್‌. ಆರ್‌. ಕ್ಷೇತ್ರದಲ್ಲಿ ಎಸ್‌ಡಿಪಿಐ ಪ್ರಬಲವಾಗಿದ್ದು, ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಲಿದೆ. ಕಾಂಗ್ರೆಸ್‌, ಜೆಡಿಎಸ್‌ ಮತ್ತು ಎಸ್‌ಡಿಪಿಐ ಅಭ್ಯರ್ಥಿಗಳು ಮುಸ್ಲಿಂ ಸಮುದಾಯದವರೇ ಆಗಿದ್ದು, ಮುಸ್ಲಿಂ ಮತಗಳಿಗಾಗಿ ಪೈಪೋಟಿ ನಡೆಸಲಿವೆ. ಇದನ್ನೇ ಲಾಭವಾಗಿ ಮಾಡಿಕೊಂಡು ಹಿಂದೂ ಮತಗಳನ್ನು ಒಟ್ಟುಗೂಡಿಸಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಹವಣಿಸುತ್ತಿದೆ.

Advertisement

ಬಿಜೆಪಿಯಲ್ಲಿ ನಾಲ್ಕಕ್ಕೂ ಹೆಚ್ಚು ಆಕಾಂಕ್ಷಿಗಳು :

ಮೈಸೂರು: ಎನ್‌.ಆರ್‌. ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿಯಲ್ಲಿ ನಾಲ್ಕಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದು, ಪಕ್ಷ ಯಾರಿಗೆ ಮಣೆ ಹಾಕಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದ ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಜತೆಗೆ ಆರೆಸ್ಸೆಸ್‌ ಹಿನ್ನೆಲೆಯಿಂದ ಬಂದಿರುವ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಎಚ್‌.ಜಿ. ಗಿರಿಧರ್‌ ಮತ್ತೋರ್ವ ಮುಖಂಡ ಗಿರಿಧರ್‌ ಹಾಗೂ ಪಾಲಿಕೆ ಸದಸ್ಯ ಎಂ. ಸತೀಶ್‌ ಈ ಬಾರಿಯ ಚುನಾವಣೆಯಲ್ಲಿ ಎನ್‌.ಆರ್‌.ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಆದರೆ ಇವರಲ್ಲದೇ ಹೊಸಬರಿಗೆ ಪಕ್ಷ ಮಣೆ ಹಾಕುವ ಸಾಧ್ಯತೆಗಳಿದೆ. 1994ರಲ್ಲಿ ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಬಿಜೆಪಿ ಜಯಗಳಿಸಿದ್ದು, ಮಾರುತಿರಾವ್‌ ಪವಾರ್‌ ಅವರು ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಅಜೀಜ್‌ ಸೇಠ್ ಅವರನ್ನು ಸೋಲಿಸುವ ಮೂಲಕ ಬಿಜೆಪಿ ಬಾವುಟ ಹಾರಿಸಿದ್ದರು. ಇದಾದ ಬಳಿಕ ಬಿಜೆಪಿ ಮೂರನೇ ಸ್ಥಾನದಲ್ಲಿ ಉಳಿದಿದೆ. ‌

ಜನತಾದಳ ದತ್ತ ಸಂದೇಶ್‌ ಸ್ವಾಮಿ ಚಿತ್ತ : ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಸಂದೇಶ್‌ ಸ್ವಾಮಿ ಅವರಿಗೆ ಟಿಕೆಟ್‌ ಕೈತಪ್ಪಿದರೆ ಜೆಡಿಎಸ್‌ಗೆ ಹೋಗಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿದೆ. ಒಂದು ವೇಳೆ ಜೆಡಿಎಸ್‌ನಿಂದ ಅಬ್ದುಲ್ಲಾ ಬದಲಿಗೆ ಸಂದೇಶ್‌ ಸ್ವಾಮಿ ಅವರಿಗೆ ಟಿಕೆಟ್‌ ನೀಡಿದರೆ ಕಾಂಗ್ರೆಸ್‌ ಅಭ್ಯರ್ಥಿಗೆ ಪೈಪೋಟಿ ನೀಡುವ ಸಾಧ್ಯತೆಯೂ ಇದೆ.

– ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next