Advertisement
ವಿರಕ್ತಮಠಕ್ಕೆ ಆಗಮಿಸಿದ ದಿಂಡಿ ಪಾದಯಾತ್ರಿಗಳು ಕಥಾ-ಕೀರ್ತನ-ಅಭಂಗಗಳನ್ನು ಪಠಿಸಿ, ಶ್ರೀಮಠದಲ್ಲಿ ಸಿದ್ಧಪಡಿಸಿದ್ದ ಪ್ರಸಾದ ಸ್ವೀಕರಿಸಿದ ನಂತರ ಕೆಲಕಾಲ ವಿಶ್ರಮಿಸಿ ಮುಂದೆ ಸಾಗಿದರು. ಇದು ಪ್ರತಿವರ್ಷ ಪಂಢರಪುರ ಯಾತ್ರಾರ್ಥಿಗಳಿಗೆ ಶ್ರೀಮಠದಿಂದ ನೀಡಲಾಗುವ ಸಾಂಪ್ರದಾಯಿಕ ಆದರಾತಿಥ್ಯ.
Related Articles
Advertisement
ದಿಂಡಿ ಪಾದಯಾತ್ರೆ ಉದ್ದೇಶ: ವಿಠ್ಠಲನ ಆರಾಧನೆಯೊಂದಿಗೆ ಜಾತೀಯತೆ ಮೀರಿ ಎಲ್ಲರೂ ಆ ದಿಂಡಿಯಲ್ಲಿ ಸಮಾನತೆ, ಮಾನವೀಯತೆ ಶಾಂತಿ, ಸಹಬಾಳ್ವೆ, ಅಹಿಂಸೆಯಿಂದ ಪರಸ್ಪರ ಒಬ್ಬರಿಗೊಬ್ಬರು ತಲೆಬಾಗುವಿಕೆಯಿಂದ ಎಲ್ಲರೂ ಸಮಾನರು ಎಂದು ತೋರಿಸುವ ಆಧ್ಯಾತ್ಮಿಕ ಚಳವಳಿ ಎನ್ನಲಾಗಿದೆ.
ನೈತಿಕ ನಡವಳಿಕೆ, ಮದ್ಯಪಾನ, ತಂಬಾಕು ದೂರವಿಡುವಲ್ಲಿ ಕಟ್ಟುನಿಟ್ಟಿನ ಆಚಾರ ವಿಚಾರಗಳನ್ನು ಪಾಲಿಸಲಾಗುತ್ತದೆ. ಮುಖ್ಯವಾಗಿ ಸಾತ್ವಿಕ ಆಹಾರ ಸೇವನೆ, ಏಕಾದಶಿ ದಿನದಂದು ಈರುಳ್ಳಿ, ಬೆಳ್ಳುಳ್ಳಿ ಸ್ವೀಕರಿಸದೇ ಇರುವುದು ಇವರು ಸಂಪ್ರದಾಯದ ಭಾಗವಾಗಿದೆ. ಪ್ರತಿ ವರ್ಷ ಕಾರ್ತಿಕ ಮಾಸದ ಏಕಾದಶಿಯಂದು ಪಾದಯಾತ್ರೆ ಮೂಲಕ ಪಂಢರಪುರ ವಿಠ್ಠಲನ ದರ್ಶನಕ್ಕೆ ತೆರಳುತ್ತಾರೆ. ಇದು ಭಾರತೀಯ ಹಿಂದೂ ಸಂಸ್ಕೃತಿಯ ಬಹುದೊಡ್ಡ ಆಧ್ಯಾತ್ಮಿಕ ಪಾದಯಾತ್ರೆ.
ದೊರೆಸ್ವಾಮಿ ವಿರಕ್ತಮಠ ಸೇವೆ: ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ತಾಲೂಕಿನ ಭೈರನಹಟ್ಟಿ ಗ್ರಾಮದ ಚಿಕ್ಕ ಮಠ ದೊರೆಸ್ವಾಮಿ ವಿರಕ್ತಮಠ. ಹಲವಾರು ವರ್ಷಗಳಿಂದ ಗ್ರಾಮದಲ್ಲಿ ಆಧ್ಯಾತ್ಮಿಕ ಚಿಂತನೆಗಳೊಂದಿಗೆ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಕನ್ನಡಪರ ಕೈಂಕರ್ಯಗಳೊಂದಿಗೆ ಶ್ರೀಮಠ ಜನಸಾಮಾನ್ಯರಿಗೆ ಜಾತಿ-ಮತ-ಪಂಥ ಭೇದವನ್ನರಿಯದೆ ಸರ್ವರನ್ನೂ ಸಮಾನವಾಗಿ ಕಾಣುತ್ತಿರುವ ಕೋಮು ಸೌಹಾರ್ದತೆಯ ಪ್ರತಿರೂಪದಂತೆ ಕಂಗೊಳಿಸುತ್ತಿದೆ. ಅಲ್ಲದೇ, ದಿಂಡಿ ಪಾದಯಾತ್ರಿಗಳಿಗೆ ಆದರಾತಿಥ್ಯ ನೀಡುವ ಮೂಲಕ ಭಕ್ತಸಾಗರದಲ್ಲಿ ವಿಶೇಷ ಛಾಪು ಮೂಡಿಸುತ್ತಿದೆ.
ವಾರಿ ಸಂಪ್ರದಾಯ 13ನೇ ಶತಮಾನದಲ್ಲಿ ಪ್ರಾರಂಭವಾದ ಒಂದು ಬಹುದೊಡ್ಡ ಆಧ್ಯಾತ್ಮಿಕ ಚಳವಳಿ. ಜಾತಿ, ವರ್ಗ, ವರ್ಣ ರಹಿತ ಯಾತ್ರೆ ಇದಾಗಿದೆ. ಇಂತಹ ವಿಶಿಷ್ಟ ಪರಂಪರೆ ಹೊಂದಿರುವ ವಾರಕರಿ ಸಂಪ್ರದಾಯದವರು ನೂರಾರು ವರ್ಷಗಳಿಂದ ಶ್ರೀಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. -ಶ್ರೀ ಶಾಂತಲಿಂಗ ಸ್ವಾಮೀಜಿ, ದೊರೆಸ್ವಾಮಿ ವಿರಕ್ತಮಠ, ಭೈರನಹಟ್ಟಿ
-ಸಿದ್ಧಲಿಂಗಯ್ಯ ಮಣ್ಣೂರಮಠ