Advertisement

ಮಹದಾಯಿಗಾಗಿ ನರಗುಂದ ಬಂದ್‌

10:28 AM Jul 17, 2019 | Suhan S |

ನರಗುಂದ: ಮಹದಾಯಿ ನೀರಿಗಾಗಿ ಕರೆ ನೀಡಿದ್ದ ನರಗುಂದ ಬಂದ್‌ ಸಂಪೂರ್ಣ ಯಶಸ್ವಿಯಾಯಿತು.

Advertisement

ನೀರಿಗಾಗಿ ನಾಲ್ಕನೇ ವರ್ಷ ಪೂರೈಸಿ ಮಂಗಳವಾರ ಐದನೇ ವರ್ಷಕ್ಕೆ ಕಾಲಿಟ್ಟ ಗಳಿಗೆಯಲ್ಲಿ ಮಹದಾಯಿ ಹೋರಾಟಗಾರರು ನರಗುಂದ ಬಂದ್‌ಗೆ ಕರೆ ನೀಡಿದ್ದರು. ಇದಕ್ಕೆ ಪಟ್ಟಣದ ಎಲ್ಲರೂ ಸಂಪೂರ್ಣ ಬೆಂಬಲಿಸಿದ ಹಿನ್ನೆಲೆಯಲ್ಲಿ ಪಟ್ಟಣ ಸಂಪೂರ್ಣ ಬಿಕೋ ಎನ್ನುತಿತ್ತು.

ಬೆಳಗ್ಗೆಯಿಂದಲೇ ಪಟ್ಟಣದ ಸಣ್ಣ ಮತ್ತು ದೊಡ್ಡ ವ್ಯಾಪಾರಸ್ಥರು ಬಂದ್‌ ಬೆಂಬಲಿಸಿ ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟು ಬಂದ್‌ ಮಾಡಿದ್ದರು. ಬೀದಿಬದಿ ವ್ಯಾಪಾರಸ್ಥರೂ ದೈನಂದಿನ ವಹಿವಾಟು ಸ್ಥಗಿತಗೊಳಿಸಿದ್ದರು.

ಪಟ್ಟಣ ಸೇರುವ ಎಲ್ಲ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನಿಟ್ಟು ಯಾವುದೇ ವಾಹನ ಒಳ ಪ್ರವೇಶಿಸದಂತೆ ಬಂದೋಬಸ್ತ್ ಮಾಡಿದ್ದರು. ಸಾರಿಗೆ ಸಂಸ್ಥೆ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಪಟ್ಟಣದಲ್ಲಿನ ಎಲ್ಲ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಮಾಹಿತಿ ತಿಳಿಯದ ವಿದ್ಯಾರ್ಥಿಗಳು ಶಾಲೆವರೆಗೂ ಬಂದು ಮರಳಿದ್ದು ಕಂಡುಬಂದಿತು.

ಸೂಕ್ತ ಪೊಲೀಸ್‌ ಬಂದೋಬಸ್ತ್ ಮಾಡಿದ್ದರಿಂದ ಪಟ್ಟಣದ ಎಲ್ಲೆಲ್ಲೂ ಪೊಲೀಸರು, ಪೊಲೀಸ್‌ ವಾಹನಗಳ ಓಡಾಟ ಸಹಜವಾಗಿತ್ತು. ಡಿವೈಎಸ್‌ಪಿ ಎ.ಎಸ್‌. ಪಾಟೀಲ, ಸಿಪಿಐ ಸುಧೀರಕುಮಾರ ಬೆಂಕಿ ಸ್ಥಳದಲ್ಲಿದ್ದರು. ಮಹದಾಯಿ ಹೋರಾಟಗಾರರಿಂದ ಬಂದ್‌ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಯಿತು. ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Advertisement

ಹೋರಾಟಗಾರರಿಗೆ ಸಮವಸ್ತ್ರ:

ಮಹದಾಯಿ ಹೋರಾಟಕ್ಕೆ ರೈತ ಮಹಿಳೆಯರು ಸಮವಸ್ತ್ರದಲ್ಲಿ ಧುಮುಕಿದ್ದು, ರೈತ ಸೇನಾ ಕರ್ನಾಟಕ ಸಂಘಟನೆ ವಿತರಿಸಿದ ಗಿಳಿ ಹಸಿರು ವರ್ಣದ ಸೀರೆಯುಟ್ಟು ಗಮನ ಸೆಳೆದರು.

ಮೆರವಣಿಗೆಯುದ್ದಕ್ಕೂ ಗಿಳಿ ಹಸಿರು ಬಣ್ಣದ ಸೀರೆಯುಟ್ಟ ಮಹಿಳೆಯರು ಮತ್ತು ಗಿಳಿ ಹಸಿರು ಬಣ್ಣದ ಟವೆಲ್ ಧರಿಸಿದ ಪುರುಷರು ರೈತ ಕುಲದ ಸಂಕೇತವಾದ ಹಸಿರು ವರ್ಣದ ಅವತರಣೆಯೊಂದಿಗೆ ಹೊಸ ಸ್ವರೂಪದೊಂದಿಗೆ ಐದನೇ ವರ್ಷದ ಹೋರಾಟಕ್ಕೆ ಅಣಿಯಾದರು. ಮಂಗಳವಾರ ಹೋರಾಟ ವೇದಿಕೆಯಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿದ ಮಹದಾಯಿ ಹೋರಾಟಗಾರರು ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಪಟ್ಟಣದೊಳಗೆ ಪ್ರವೇಶಿಸಿ ಪುರಸಭೆ ಆವರಣದ ಬಾಬಾಸಾಹೇಬ ಭಾವೆ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿದರು. ಬಳಿಕ ಪ್ರಮುಖ ಮಾರ್ಗಗಳಲ್ಲಿ ಹಾಯ್ದು ಸರ್ವಜ್ಞ ವೃತ್ತದಿಂದ ಹೆದ್ದಾರಿಯ ಶಿವಾಜಿ ವೃತ್ತ ಪ್ರವೇಶಿಸಿದರು. ರಾಷ್ಟ್ರೀಯ ಹೆದ್ದಾರಿ ಶಿವಾಜಿ ವೃತ್ತದಲ್ಲಿ ಕೆಲಕಾಲ ಧರಣಿ ನಡೆಸಿದ ಹೋರಾಟಗಾರರು ಮಹದಾಯಿ ಮತ್ತು ಕಳಸಾ-ಬಂಡೂರಿ ಅನುಷ್ಠಾನಕ್ಕೆ ಆಗ್ರಹಿಸಿದರು. ವಿಚಿತ್ರವೆಂದರೆ ಯಾವುದೇ ರಾಜಕಾರಣಿಗಳನ್ನಾಗಲಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನಾಗಲಿ ದೂಷಿಸದೇ ಕೇವಲ ಜೀವಜಲ ಹಕ್ಕು ಪ್ರತಿಪಾದನೆಯೊಂದಿಗೆ ಸೇರಿದ್ದ ನೂರಾರು ರೈತರು ಹಕ್ಕೊತ್ತಾಯ ಮಂಡಿಸಿದರು. ಬೃಹತ್‌ ಮೆರವಣಿಗೆ ಬಳಿಕ ಹೋರಾಟ ವೇದಿಕೆ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದ ರೈತ ಹೋರಾಟಗಾರರು, ಮಹಿಳೆಯರು ರೈತಗೀತೆ ಹಾಡುವಾಗ ಹಸಿರು ಟವೆಲ್ ಝಳಪಿಸಿ, ಮೇಲೆತ್ತಿ ತಿರುಗಿಸುವ ಮೂಲಕ ಸರ್ಕಾರಗಳಿಗೆ ರೈತ ಶಕ್ತಿ ಪ್ರದರ್ಶಿಸಿದರು. ವೇದಿಕೆಯಲ್ಲೂ ಶಾಂತಿಪ್ರಿಯರು ಎನಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next