ಆಫ್ ಬೀಟ್… ರಾತ್ರಿ ಹೇಗಾಯ್ತು…!: ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಹೊಣೆ ಹೊತ್ತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಸದಾ ಕಾರ್ಯ ಒತ್ತಡದಲ್ಲೇ ಇರುತ್ತಾರೆ. ಇತ್ತೀಚೆಗೆ ವಿಧಾನಸಭೆಯ ಮೊಗಸಾಲೆಯಲ್ಲಿ ಪತ್ರಕರ್ತರೊಂದಿಗೆ ಅನೌಪಚಾರಿಕ ಮಾತುಕತೆಗಿಳಿಸಿದ್ದರು. ಆಗ ಸಹಜವಾಗಿ ಕೇಳಿಬಂದ “ಹೌ ಇಸ್ ದ ಡೇ ಸರ್’ ಎಂಬ ಪ್ರಶ್ನೆಗೆ ಗೃಹ ಸಚಿವರು, “”ನೀವು ಹೌ ಇಸ್ ದ ಡೇ ಅಂತ ಕೇಳ್ತಿರಾ. ಆದರೆ ನಮಗೆ “ಹೌ ವಾಸ್ ದ ನೈಟ್’ ಎಂದು ಹೇಳಿ ಅಭ್ಯಾಸ” ಎಂದರು. ಇದು ಸಹಜವಾಗಿಯೇ ಕುತೂಹಲ ಮೂಡಿಸಿತು. ಈ ಬಗ್ಗೆ ಹೆಚ್ಚು ಕೆದಗಿದಾಗ ಗೃಹ ಸಚಿವರು ಆ ಬಗ್ಗೆ ಸ್ವಾರಸ್ಯಕರವಾಗಿ ಬಿಡಿಸಿ ಹೇಳಿದರು. ಹಿಂದೆಲ್ಲಾ ಬೇರೆ ಖಾತೆ ನಿಭಾಯಿಸುವಾಗ ಇದೇ ರೀತಿ ನಾನು ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದೆ. ಈಗ ಗೃಹ ಸಚಿವನಾಗಿದ್ದೇನೆ. ಹಾಗಾಗಿ ಬೆಳಗ್ಗೆ ಎದ್ದ ಕೂಡಲೇ ಹಿರಿಯ ಅಧಿಕಾರಿಗಳನ್ನು “ರಾತ್ರಿ ಹೇಗಾಯ್ತು’ ಅಂತಾ ಕೇಳುವಂತಾಗಿದೆ. ರಾಜ್ಯದಲ್ಲಿ ರಾತ್ರಿಯಿಂದ ಬೆಳಗ್ಗೆವರೆಗೆ ಏನೆಲ್ಲಾ ಬೆಳವಣಿಗೆಯಾಗಿದೆ ಎಂಬ ಮಾಹಿತಿ ಪಡೆದ ಬಳಿಕವಷ್ಟೇ ನಮ್ಮ ದಿನ ಆರಂಭವಾಗುವುದು. ಹಾಗಾಗಿ ನಾವು “ರಾತ್ರಿ ಹೇಗಾಯ್ತು’ ಎಂಬುದನ್ನು ಕೇಳಿಯೇ ಮುಂದಿನ ಕೆಲಸ ನೋಡುವವರು ಎಂದು ಗೃಹ ಸಚಿವರು ನಗಲಾರಂಭಿಸಿದಂತೆ ಸುತ್ತಲಿದ್ದವರು ನಗೆಯಲ್ಲಿ ತೇಲಿದರು.
ಮೌನಿ ನಾನು, ಕೇಳಬೇಡಿ ಏನು!: ಕಳೆದ ವಾರ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಕುರಿತ ಯಾವುದೇ ಮಾಹಿತಿ ಬೇಕಿದ್ದರೂ ಆರೋಗ್ಯ ಇಲಾಖೆ ಸಚಿವರು ಅಥವಾ ವೈದ್ಯಕೀಯ ಶಿಕ್ಷಣ ಸಚಿವರನ್ನು ಮಾತ್ರ ಕೇಳು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಲಾಖೆಯ ಅಧಿಕಾರಿಗಳಿಗೆ ಎಲ್ಲಾ ಮಾಹಿತಿ ಗೊತ್ತಿದ್ದರೂ ತುಟಿಬಿಚ್ಚುತ್ತಿರಲಿಲ್ಲ. ಅದು ಯಾವ ಮಟ್ಟಿಗೆ ಎಂದರೆ ಸಚಿವರು ಕೊರೊನಾ ಸೋಂಕಿತರು, ಶಂಕಿತರ, ಕಾರ್ಯಚಟುವಟಿಕೆಗಳ ಕುರಿತು ತಪ್ಪು ಮಾಹಿತಿ ನೀಡಿದರೂ ಅಧಿಕಾರಿಗಳು ಸುಮ್ಮನೇ ಕುಳಿತಿರುತ್ತಿದ್ದರು. ಈ ವೇಳೆ ಮಾಧ್ಯಮದವರು ಅಲ್ಲಿಯೇ ಇದ್ದ ಇಲಾಖೆ ಅಧಿಕಾರಿಗಳನ್ನು, ವೈದ್ಯಾಧಿಕಾರಿಗಳನ್ನು ಸರಿಯಾದ ಮಾಹಿತಿ ನೀಡಿ ಎಂದು ಪ್ರಶ್ನಿಸಿದರೆ, ಸಚಿವರು ಆ ಅಧಿಕಾರಿಗಳನ್ನು ದಿಟ್ಟಿಸಿ ನೋಡುತ್ತಿದ್ದರು. ಇನ್ನು ಅಧಿಕಾರಿಗಳು ಉತ್ತರ ಕೊಡಬೇಕೊ, ಬೇಡವೊ ಎಂದು ತಿಳಿಯದೇ ಮುಖ ಸಣ್ಣ ಮಾಡಿಕೊಂಡು ಕುಳಿತುಕೊಳ್ಳುತ್ತಿದ್ದರು. ಆ ಬಳಿಕ ಅನೇಕ ಅಧಿಕಾರಿಗಳು “ಸಚಿವರ ಮುಂದೆ ದಯವಿಟ್ಟು ನಮ್ಮನ್ನು ಏನೂ ಕೇಳಬೇಡಿ’ ಎಂದು ಪತ್ರಕರ್ತರಲ್ಲಿ ಮನವಿ ಮಾಡಿದ್ದುಂಟು.
ಮಿಡ್ ನೈಟ್ ಟಿವಿ ಫೋನೋ: ನಾಡಿನ ಹಿರಿಯ ಚೇತನ, ಶತಾಯುಷಿ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಅವರ ನಿಧನದ ಸುದ್ದಿ ಕೇಳಿ ನಾಡಿನ ಹಿರಿಯ ರಾಜಕಾರಣಿಯೊಬ್ಬರು ಪಾಪು ಅವರ ಬಗ್ಗೆ ರಾತ್ರಿಯೇ ತಮ್ಮ ಸಂತಾಪ ಸೂಚಿಸಲು ಟಿವಿ ಚಾನೆಲ್ ಗಳಿಗೆ ದೂರವಾಣಿ ಕರೆ ಮಾಡಲು ಆಪ್ತ ಸಹಾಯಕನಿಗೆ ಸೂಚಿಸಿದ್ದಾರೆ. ರಾತ್ರಿ 12 ಗಂಟೆ ಹೊತ್ತಲ್ಲಿ ಅವರ ಆಪ್ತ ಸಹಾಯಕರು ತಮಗೆ ಗೊತ್ತಿರುವ ಟಿವಿ ವರದಿಗಾರರಿಗೆ ಮಧ್ಯರಾತ್ರಿ ಕರೆ ಮಾಡಿ ಫೋನೋ ಕೊಡಿಸುವ ಕಸರತ್ತು ನಡೆಸಿದ್ದಾರೆ. ಅವರ ಪುಣ್ಯಕ್ಕೆ ಮಧ್ಯರಾತ್ರಿಯಲ್ಲಿ ಒಬ್ಬ ರಿಪೋರ್ಟರ್ ಫೋನ್ ರಿಸೀವ್ ಮಾಡಿದ್ದಾರೆ. ಅವರು ನೇರವಾಗಿ ಸಾಹೇಬ್ರು ಮಾತಾಡ್ತಾರೆ ಎಂದು ರಿಪೋರ್ಟರ್‌ಗೆ ಹೇಳಿ, ಟಿವಿ ಚಾನೆಲ್‌ನವರು ಫೋನಲ್ಲಿದ್ದಾರೆ ಎಂದು ಸಾಹೇಬರ ಕೈಗೆ ಫೋನ್ ಕೊಟ್ಟಿದ್ದಾರೆ. ಸಾಹೇಬರು ಫೋನ್ ತೆಗೆದುಕೊಂಡು ತಮ್ಮದೇ ಆದ ಸ್ಟೈಲ್ ನಲ್ಲಿ ಪಾಪು ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳುತ್ತ ಹೋಗಿದ್ದಾರೆ. ಎದುರಿಗಿರುವ ವರದಿಗಾರನಿಗೆ ಫೋನ್ ಕಟ್ ಮಾಡಲು ಆಗಿಲ್ಲ. ಅದು ಲೈವ್ ಫೋನೋ ಅಲ್ಲ ಅಂತಾನೂ ಹೇಳಲು ಧೈರ್ಯ ಬಂದಿಲ್ಲ. ಸಾಹೇಬ್ರು ಮಾತ್ರ ಲೈವ್ ಇದೆ ಅಂತ ತಮ್ಮ ಅಭಿಪ್ರಾಯವನ್ನು ಹೇಳುತ್ತಲೇ ಹೋದರಂತೆ. ರಿಪೋರ್ಟರ್ ಮಾತ್ರ ಮಿಡ್‌ನೈಟಲ್ಲಿ ದೊಡ್ಡವರ ಫೋನೋ ನಿಮಿಷಗಟ್ಟಲೆ ಕೇಳಿ ಸುಸ್ತಾದರಂತೆ!
ಸಿದ್ದು- ಈಶ್ವರಪ್ಪ ಜಟಾಪಟಿಗೆ ಪೆಚ್ಚಾದರು: ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾತನಾಡುತ್ತಾ, ಲ್ಯಾಪ್‌ಟಾಪ್ ಖರೀದಿಯಲ್ಲಿ ಅವ್ಯವಹಾರ ಆಗಿದೆ. ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಕಳೆದ ವರ್ಷಕ್ಕಿಂತ ಕಡಿಮೆ ಹಣ ಮೀಸಲಾಗಿಡಲಾಗಿದೆ ಎಂದು ಆರೋಪಿಸಿ ನಮ್ಮ ಕಾಲದಲ್ಲಿ ಹೆಚ್ಚು ಹಣ ಇಟ್ಟಿದ್ದೆವು ಎಂದರು. ಆಗ ಸಚಿವ ಕೆ.ಎಸ್. ಈಶ್ವರಪ್ಪ, ಹಣ ಎಷ್ಟು ಮೀಸಲಿಟ್ಟಿದ್ದೀರಿ ಎಂಬುದು ಮುಖ್ಯವಲ್ಲ, ನೀವು ಮುಖ್ಯಮಂತ್ರಿಯಾಗಿದ್ದಾಗ ಮಾತೆತ್ತಿದರೆ ಅಹಿಂದ, ಅಹಿಂದ ಅಂತಾ ಇದ್ದಿರಿ. ಆದರೆ, ಅವರ ಹೆಸರಿನ ಹಣ ಎಲ್ಲೆಲ್ಲಿ ಹೋಯಿತು ಅದೂ ತನಿಖೆಯಾಗಲಿ ಎಂದು ಅಬ್ಬರಿಸಿದರು. ಅದಕ್ಕೆ ಸಿದ್ದರಾಮಯ್ಯ, ಆಯ್ತು ತನಿಖೆ ಮಾಡಿಸಿ ನಿಮ್ಮದೇ ಸರ್ಕಾರ ಇದೆ, ತಪ್ಪಾಗಿದ್ದರೆ ಕ್ರಮ ಕೈಗೊಳ್ಳಿ ಎಂದರು. ಆಗ ಮಾತಿನ ಚಕಮಕಿಯೂ ನಡೆದು ಒಂದು ಹಂತದಲ್ಲಿ ಈಶ್ವರಪ್ಪ, ಬಾಯ್ತಪ್ಪಿ, ತನಿಖೆ ಮಾಡಿಸಿ ನೀವು ತಪ್ಪು ಮಾಡಿದ್ದರೆ ನಿಮ್ಮನ್ನು ನೇಣಿಗೆ ಹಾಕಿ ಎಂದು ನಾನು ಹೇಳಿಲ್ಲ ಎಂದುಬಿಟ್ಟರು. ಇಡೀ ಸದನ ಒಮ್ಮೆಲೇ ಬೆಚ್ಚಿಬಿದ್ದಿತು. ಆದರೆ, ಸಿದ್ದರಾಮಯ್ಯ ಅವರು ನೇಣಿಗೆ ಯಾಕ್ರಿ ಹಾಕ್ತೀರಿ, ಆ ಪದ ಬಿಟ್ಟು ಬೇರೆ ಪದ ಉಪಯೋಗಿಸಿ ಎಂದು ನಗುತ್ತಲೇ ಸಲಹೆ ನೀಡಿದರು. ಮತ್ತೂಂದು ಸಂದರ್ಭದಲ್ಲಿ ಈಶ್ವರಪ್ಪ, ಪ್ರತಿ ಚುನಾವಣೆಯಲ್ಲೂ ಇದೇ ಕೊನೇ ಅಂತೀರಿ, ಮತ್ತೆ ನಿಲ್ತಿàರಿ ಎಂದು ಕಿಚಾಯಿಸಿದರು. ಸದನದಲ್ಲಿ ವಾಕ್ಸಮರ ನೋಡಿದವರು ಇಬ್ಬರೂ ನಾಯಕರ ನಡುವೆ ಇದು ವಿರಸ ಸೃಷ್ಟಿಸಬಹುದು ಎಂದುಕೊಂಡಿದ್ದವರು ಕಲಾಪ ಮುಗಿದ ನಂತರ ಇಬ್ಬರೂ ಏನೂ ಆಗಿಯೇ ಇಲ್ಲ ಎಂಬಂತೆ ಮಾತನಾಡಿದ್ದು ನೋಡಿ ಪೆಚ್ಚಾದರು.
ಸೆಕೆಂಡ್ಸ್‌ಗೂ ಭಾರೀ ಡಿಮ್ಯಾಂಡ್: ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ವೈನ್ಸ್ ಮತ್ತು ಬಾರ್ ಆ್ಯಂಡ್ ರೆಸ್ಟೋರೆಂಟ್ ಬಂದ್ ಮಾಡಿರುವುದರಿಂದ ಸರ್ಕಾರದ ವಿರುದ್ಧ ಬೇಸರಗೊಂಡಿರುವ ಸಣ್ಣ-ಪುಟ್ಟ ಬ್ರಾಂಡ್ ಮದ್ಯ ವ್ಯಸನಿಗಳು ಇದೀಗ ನಗರದ ಹೊರವಲಯಗಳಲ್ಲಿ ಸಿಗುವ ನೀರಾ ಹಾಗೂ ದ್ವಿತೀಯ ದರ್ಜೆಯ ಮದ್ಯದ ಮೊರೆ ಹೋಗುತ್ತಿದ್ದಾರಂತೆ. ಹೀಗಾಗಿ ಈ ಭಾಗದಲ್ಲಿ ಅತೀ ಹೆಚ್ಚಾಗಿ ದೊರೆಯುವ ದ್ವಿತೀಯ ದರ್ಜೆಯ ಎಣ್ಣೆಗೆ ಭಾರೀ ಡಿಮ್ಯಾಂಡ್ ಬಂದಿದೆ. ಕೆಲವರು ನಾಲ್ಕು ದಿನಗಳ ಹಿಂದೆಯೇ ಹತ್ತಾರು ಬಾಕ್ಸ್‌ಗಳ ಮದ್ಯವನ್ನು ಕೊಂಡೊಯ್ದಿದ್ದಾರೆ. ಹಾಗೆಯೇ ಸ್ವಲ್ಪ ಅಧಿಕವಾದರೂ ಪರವಾಗಿಲ್ಲ ಎಂದು ಎಂಆರ್‌ಪಿ ಮಳಿಗೆಗಳಿಗೆ ಮುಗಿ ಬಿಳುತ್ತಿದ್ದಾರೆ. ಅದರಿಂದ ವಿಚಲಿತಗೊಂಡಿರುವ ಮಳಿಗೆ ಮಾಲೀಕರು ಮಾಸ್ಕ್ ಧರಿಸಿಕೊಂಡು, ಹ್ಯಾಂಡ್ ಸ್ಯಾನಿಟೈಸರ್ ಅನ್ನು ಜತೆಯಲ್ಲಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲದೆ, ಗ್ರಾಹಕರಿಗೂ ದಯವಿಟ್ಟು ಮಾಸ್ಕ್ ಧರಿಸಿಕೊಂಡು ಬರುವಂತೆ ಮಳಿಗೆ ಮುಂಭಾಗ ಬೋರ್ಡ್‌ಗಳನ್ನು ಹಾಕಿದ್ದಾರೆ. ಮತ್ತೂಂದೆಡೆ ಶುಕ್ರವಾರ ಮತ್ತು ಶನಿವಾರವೇ ತಮಗೆ ನಿರೀಕ್ಷೆಗೂ ಮೀರಿದ ವ್ಯಾಪಾರ ನಡೆದಿದೆ. ಶೇ.90ರಷ್ಟು ಮಂದಿ ಗ್ರಾಹಕರು ಹತ್ತು ದಿನಗಳಿಗೆ ಬೇಕಾಗುವ ಮದ್ಯವನ್ನು ಖರೀದಿಸಿ ಶೇಖರಿಸಿಕೊಂಡಿದ್ದಾರೆ ಎನ್ನುತ್ತಾರೆ ಮದ್ಯ ಮಾರಾಟ ಮಳಿಗೆ ಮಾಲೀಕರು. ಅದರಿಂದ ಅಬಕಾರಿ ಅಧಿಕಾರಿಗಳಿಗೂ ಕೆಲಸ ಹೆಚ್ಚಾಗಿದ್ದು, ಅಕ್ರಮ ಮಾರಾಟಗಾರರ ಮೇಲೆ ದಾಳಿಗೆ ಸಜ್ಜಾಗಿದ್ದರಂತೆ.
(ಲಕ್ಷ್ಮಿ, ಕೀರ್ತಿ, ಪಾಗೋಜಿ, ಮೋಹನ್, ಬಿರಾದಾರ್)