ಕೋಲ್ಕತಾ: ನಾರದ ಸ್ಟಿಂಗ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ತೃಣಮೂಲ ಕಾಂಗ್ರೆಸ್ ಶಾಸಕ ಮದನ್ ಮಿತ್ರ ಹಾಗೂ ಮಾಜಿ ಸಚಿವ ಸೋವನ್ ಚಟರ್ಜಿ ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಮಂಗಳವಾರ(ಮೇ 18) ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಇವರೇನು ಶೋಕಿ ಮಾಡುವುದಕ್ಕೆ ಬಂದಿದ್ದಾ? : ಆರ್. ಅಶೋಕ್ ವಿರುದ್ಧ ಮೀನುಗಾರರ ಆಕ್ರೋಶ
ಉಸಿರಾಟದ ತೊಂದರೆ ಎದುರಿಸುತ್ತಿರುವ ಇಬ್ಬರನ್ನೂ ಎಸ್ ಎಸ್ ಕೆಎಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕ್ಸಿಜನ್ ಸಪೋರ್ಟ್ ನಲ್ಲಿ ಇಡಲಾಗಿದೆ ಎಂದು ವರದಿ ಹೇಳಿದೆ.
ನಾರದ ಪ್ರಕರಣದಲ್ಲಿ ಸೋಮವಾರ ಸಿಬಿಐ ತೃಣಮೂಲ ಕಾಂಗ್ರೆಸ್ ನ ಇಬ್ಬರು ಸಚಿವರುಗಳಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ ಹಾಗೂ ಶಾಸಕ ಮದನ್ ಮಿತ್ರ, ಮಾಜಿ ಸಚಿವ ಸೋವನ್ ಚಟರ್ಜಿಯನ್ನು ಸಿಬಿಐ ಬಂಧಿಸಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ ಚಟರ್ಜಿ ಹಾಗೂ ಮಿತ್ರ ಮುಂಜಾನೆ 3ಗಂಟೆ ಸುಮಾರಿಗೆ ಉಸಿರಾಟದ ತೊಂದರೆ ಎದುರಿಸುತ್ತಿರುವುದನ್ನು ಗಮನಿಸಿ ಇಬ್ಬರನ್ನೂ ಎಸ್ ಎಸ್ ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಬ್ಬರ ಆರೋಗ್ಯವು ಸ್ಥಿರವಾಗಿರುವುದಾಗಿ ಪಿಟಿಐ ವರದಿ ತಿಳಿಸಿದೆ.
ಮುಖರ್ಜಿಗೂ ಕೂಡಾ ಅನಾರೋಗ್ಯ ಕಾಣಿಸಿಕೊಂಡಿದ್ದು, ಮಂಗಳವಾರ ಬೆಳಗ್ಗೆ ಆಸ್ಪತ್ರೆಗೆ ಕರೆದೊಯ್ದು ಆರೋಗ್ಯ ತಪಾಸಣೆ ನಡೆಸಿದ ನಂತರ ಪೊಲೀಸ್ ಅಧಿಕಾರಿಗಳು ಜೈಲಿಗೆ ಕರೆದೊಯ್ದಿದ್ದರು. ಸಚಿವ ಚಟರ್ಜಿ ಆಸ್ಪತ್ರೆಗೆ ದಾಖಲಿಸುವುದು ಬೇಡ ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ.
ನಾಲ್ವರು ಆರೋಪಿಗಳಿಗೂ ಸಿಬಿಐ ವಿಶೇಷ ಕೋರ್ಟ್ ಜಾಮೀನು ನೀಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕೋಲ್ಕತಾ ಹೈಕೋರ್ಟ್ ಜಾಮೀನು ಆದೇಶಕ್ಕೆ ತಡೆ ನೀಡಿತ್ತು.