ಕೋಲ್ಕತಾ: ನಾರದ ಸ್ಟಿಂಗ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿಎಂಸಿಯ ಮುಖಂಡರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಸೋವನ್ ಚಟರ್ಜಿ ಮತ್ತು ಮದನ್ ಮಿತ್ರಾಗೆ ಕೋಲ್ಕತಾ ಹೈಕೋರ್ಟ್ ಶುಕ್ರವಾರ(ಮೇ 28) ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇದನ್ನೂ ಓದಿ:ಜಿಯೋ ಜೊತೆಗೆ ಕೈ ಜೋಡಿಸಿದ ಗೂಗಲ್ : ಸದ್ಯದಲ್ಲೇ ಬರಲಿದೆ ಕಡಿಮೆ ದರದ ಸ್ಮಾರ್ಟ್ ಫೋನ್
ನಾರದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿಗೆ ತಲಾ ಎರಡು ಲಕ್ಷ ರೂಪಾಯಿ ಬಾಂಡ್ ನೀಡುವಂತೆ ಹೈಕೋರ್ಟ್ ನಾಲ್ವರು ಮುಖಂಡರಿಗೂ ಸೂಚಿಸಿದೆ. ಅಷ್ಟೇ ಅಲ್ಲ ಸಿಬಿಐ ತನಿಖೆಗೆ ಸಂಬಂಧಿಸಿದಂತೆ ನ್ಯೂಸ್ ಚಾನೆಲ್ ಗಳಿಗೆ ಯಾವುದೇ ಹೇಳಿಕೆ, ಸಂದರ್ಶನ ನೀಡದಂತೆ ನಿರ್ಬಂಧ ವಿಧಿಸಿದೆ.
ತಲಾ ಎರಡು ಲಕ್ಷ ರೂಪಾಯಿ ಬಾಂಡ್ ಜತೆ ಇಬ್ಬರು ಶ್ಯೂರಿಟಿಯನ್ನು ನೀಡುವಂತೆ ಹೈಕೋರ್ಟ್ ತಿಳಿಸಿದ್ದು, ಸಿಬಿಐ ವಿಡಿಯೋ ಕಾನ್ಫರೆನ್ಸ್ ಮೂಲಕ ತನಿಖೆ ನಡೆಸುವ ವೇಳೆ ಹಾಜರಾಗುವಂತೆ ಆದೇಶದಲ್ಲಿ ತಿಳಿಸಿದೆ. ನಾರದ ಲಂಚ ಪ್ರಕರಣದ ತನಿಖೆ ಬಾಕಿ ಇರುವುದರಿಂದ ಯಾವುದೇ ಪತ್ರಿಕಾ ಹೇಳಿಕೆ, ಸಂದರ್ಶನ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ ಎಂದು ವರದಿ ವಿವರಿಸಿದೆ.
ನಾರದ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಕೋಲ್ಕತಾ ಹೈಕೋರ್ಟ್ ಪೀಠ, ಟಿಎಂಸಿ ನಾಲ್ವರು ಮುಖಂಡರಿಗೆ ಜಾಮೀನು ನೀಡಿ ಗೃಹಬಂಧನದಲ್ಲಿ ಇರಿಸುವಂತೆ ಆದೇಶ ನೀಡಿತ್ತು. ಅಲ್ಲದೇ ಪ್ರಕರಣವನ್ನು ಪಂಚ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಿತ್ತು. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಆದರೆ ಸುಪ್ರೀಂಕೋರ್ಟ್ ಕೋಲ್ಕತಾ ಹೈಕೋರ್ಟ್ ಪಂಚಸದಸ್ಯ ಪೀಠದ ಮುಂದೆ ಆಕ್ಷೇಪ ಸಲ್ಲಿಸಲು ಸೂಚಿಸಿತ್ತು.