Advertisement

ಪ್ರಸ್ತಾವನೆಯಲ್ಲಿಯೇ ಬಾಕಿ ನಂತೂರು ಓವರ್‌ಪಾಸ್‌!

09:17 PM Sep 16, 2021 | Team Udayavani |

ಮಹಾನಗರ: ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಜಂಕ್ಷನ್‌ ಬಳಿ ಫ್ಲೈಓವರ್‌ ನಿರ್ಮಾಣಕ್ಕೆ ರಾ. ಹೆ. ಪ್ರಾಧಿಕಾರ ಅನುಮೋದನೆ ನೀಡಿದರೂ 2005ರಿಂದ ಪ್ರಸ್ತಾವನೆಯಲ್ಲಿದ್ದ ನಂತೂರಿನ ಫ್ಲೈಓವರ್‌ ಅಥವಾ ಓವರ್‌ಪಾಸ್‌ ನಿರ್ಮಾಣ ಯೋಜನೆ ಮಾತ್ರ ಕಡತದಲ್ಲಿಯೇ ಬಾಕಿಯಾಗಿದೆ.

Advertisement

ನಂತೂರು ವೃತ್ತದಲ್ಲಿ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಓವರ್‌ಪಾಸ್‌ ಪ್ರಸ್ತಾವನೆ ಯನ್ನು ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಕಳುಹಿಸಿ ಹಲವು ವರ್ಷವಾದರೂ ಇನ್ನೂ ಯೋಜನೆಗೆ ಅನುಮತಿ ದೊರಕಿಲ್ಲ. ಹೀಗಾಗಿ ನಂತೂರು ಭಾಗದ ಬಹುಕಾಲದ ಬೇಡಿಕೆ ಈಡೇರಲೇ ಇಲ್ಲ.

ನಂತೂರು ವೃತ್ತದಲ್ಲಿ ಓವರ್‌ ಪಾಸ್‌ ಅಥವಾ ಫ್ಲೈಓವರ್‌ನಿರ್ಮಾಣ ಹಲವು ವರ್ಷದ ಬೇಡಿಕೆ. ನಾಗರಿಕರು, ಜನಪ್ರತಿನಿಧಿಗಳು ಹೆದ್ದಾರಿ ಇಲಾಖೆ ಹಾಗೂ ಸರಕಾರವನ್ನು ಹಲವಾರು ಸಮಯಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ಮಹಾನಗರ ಪಾಲಿಕೆ ಸಾಮಾನ್ಯಸಭೆ, ತ್ತೈಮಾಸಿಕ ಕೆಡಿಪಿ ಸಭೆಗಳು, ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟ ಸಭೆಗಳಲ್ಲಿ ಜನಪ್ರತಿನಿಧಿಗಳು ಈ ವಿಷಯ ಪ್ರಸ್ತಾವಿಸಿದ್ದರೂ ಯೋಜನೆ ಜಾರಿಗೆ ಕಾಲ ಕೂಡಿಬಂದಿಲ್ಲ.

ಫ್ಲೈಓವರ್‌ಯೋಜನೆಯಿತ್ತು!:

ಸುರತ್ಕಲ್‌-ಬಿ.ಸಿ. ರೋಡ್‌ ಮಧ್ಯೆ 2005ರಲ್ಲಿ ಚತುಷ್ಪಥ ಕಾಮಗಾರಿ ಕೈಗೆತ್ತಿ ಕೊಂಡಾಗ 2007ರೊಳಗೆ ನಂತೂರಿನಲ್ಲಿ ಫ್ಲೈಓವರ್‌ನಿರ್ಮಿಸುವ ಪ್ರಸ್ತಾವವಿತ್ತು. ಆದರೆ ಸಕಾಲದಲ್ಲಿ ಭೂಸ್ವಾಧೀನವಾಗದೆ ಕಾಮಗಾರಿ ನಡೆಯಲಿಲ್ಲ. ಇದೇ ಕಾರಣಕ್ಕಾಗಿ ಹೆದ್ದಾರಿ ಪ್ರಾಧಿಕಾರ ಈ ಕಾಮಗಾರಿಯನ್ನು ಕೈಬಿಟ್ಟಿತು. ಬಳಿಕ ಜಿಲ್ಲಾ ಡಳಿತ ಎಚ್ಚೆತ್ತು ಭೂಸ್ವಾಧೀನ ಮಾಡಿದ್ದರೂ ಗುತ್ತಿಗೆ ವಹಿಸಿಕೊಂಡಿರುವ ಇರ್ಕಾನ್‌ ಸಂಸ್ಥೆ ಯೋಜನೆ  ವೆಚ್ಚ ದುಪ್ಪಟ್ಟು ಆಗಿರುವ ಹಿನ್ನೆಲೆಯಲ್ಲಿ ಮತ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ನಿರಾಕರಿಸಿತ್ತು. ಹೀಗಾಗಿ ಯೋಜನೆ ಬಾಕಿಯಾಗಿತ್ತು.

Advertisement

ಓವರ್‌ಪಾಸ್‌ ಬೇಡಿಕೆ:

ಫ್ಲೈಓವರ್‌ನಂತೂರಿಗೆ ತಾಂತ್ರಿಕವಾಗಿ ಸೂಕ್ತವಾಗುವುದಿಲ್ಲ ಎಂದು ತಜ್ಞರು ನೀಡಿದ ವರದಿಯ ಹಿನ್ನೆಲೆಯಲ್ಲಿ ಇಲ್ಲಿ ಓವರ್‌ಪಾಸ್‌ ಸೂಕ್ತ ಎಂದು ಲೆಕ್ಕಾಚಾರ ಮಾಡಲಾಯಿತು.  ಇದರ ಆಧಾರದಲ್ಲಿ ಓವರ್‌ಪಾಸ್‌ ಯೋಜನೆಯ 40 ಕೋ.ರೂ. ಅಂದಾಜು ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದ ಕೇಂದ್ರ ಕಚೇರಿಗೆ 2013ರಲ್ಲಿ ಕಳುಹಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಅನುಮೋದನೆಯ ನಿರೀಕ್ಷೆ ಈಡೇರಲಿಲ್ಲ!

ನಂತೂರು ಓವರ್‌ಪಾಸ್‌  ಪ್ರಸ್ತಾವಿತ ಸ್ವರೂಪ :

ಮೂಡುಬಿದಿರೆಯಿಂದ ಬಿಕರ್ನಕಟ್ಟೆ ಮೂಲಕ ಬರುವ ವಾಹನಗಳು ನಂತೂರು ಜಂಕ್ಷನ್‌ನಲ್ಲಿ ಹಾಲಿ ಇರುವ ರಸ್ತೆಯಲ್ಲಿಯೇ ಮಂಗಳೂರು ನಗರ ಪ್ರವೇಶ ಮಾಡಲಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಉಡುಪಿ ಕಡೆಯಿಂದ ಆಗಮಿಸುವ ವಾಹನ ಗಳು ಪದವು ಹೈಸ್ಕೂಲ್‌ ಸಮೀಪದಿಂದ ಓವರ್‌ಪಾಸ್‌ನ ಕೆಳಗಿನ ಚತುಷ್ಪಥ (ಅಂಡರ್‌ಪಾಸ್‌ ಸ್ವರೂಪದ) ಮೂಲಕ ಸಂದೇಶ ಪ್ರತಿಷ್ಠಾನದವರೆಗೆ ಕೇರಳ ಕಡೆಗೆ ಸಂಚರಿಸುವುದಾಗಿದೆ.

ನಂತೂರು ಜಂಕ್ಷನ್‌ನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಓವರ್‌ಪಾಸ್‌ ನಿರ್ಮಿಸುವ ಪ್ರಸ್ತಾವನೆಯನ್ನು ಈಗಾಗಲೇ ಕೇಂದ್ರ ಇಲಾಖೆಗೆ ಕಳುಹಿಸಲಾಗಿದೆ. ಭೂಸ್ವಾಧೀನ ಸಹಿತ ಕೆಲವೊಂದು ತಾಂತ್ರಿಕ ವಿಚಾರಗಳ ಬಗ್ಗೆ ಅಂತಿಮ ತೀರ್ಮಾನ ಇನ್ನಷ್ಟೇ ನಡೆಯಬೇಕಿದೆ. ಈ ಬಗ್ಗೆ ಕೇಂದ್ರ ಇಲಾಖೆಯ ಜತೆಗೆ ಚರ್ಚಿಸಲಾಗುವುದು.ಶಿಶುಮೋಹನ್‌, ಯೋಜನ ನಿರ್ದೇಶಕರು,  ರಾ.ಹೆ. ಪ್ರಾಧಿಕಾರ-ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next