Advertisement
ನಗರ ಅಭಿವೃದ್ಧಿ ಹೊಂದುತ್ತಿದೆ. ರಸ್ತೆಗಳು ಮೇಲ್ದರ್ಜೆಗೇರುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗಳು ಚತುಷ್ಪಥವಾಗಿವೆ. ಆದರೆ ಅಭಿವೃದ್ಧಿಯ ಸಂದರ್ಭದಲ್ಲಿ ಆಗಿರುವ ಕೆಲವು ಪ್ರಮಾದಗಳು, ಕೊರತೆಗಳಿಂದ ಜನತೆ ಕಿರಿಕಿರಿ ಅನುಭವಿಸುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದ ಕೆಲವು ಕಡೆಗಳಲ್ಲಿ ವೃತ್ತಗಳ ಅಪಾಯಕಾರಿ ವಿನ್ಯಾಸದಿಂದ ವಾಹನ ಚಾಲಕರು, ಸಾರ್ವಜನಿಕರ ಪಾಲಿಗೆ ಆತಂಕಕಾರಿಯಾಗಿ ಪರಿಣಮಿಸಿದೆ. ಇದರಲ್ಲಿ ಪ್ರಮುಖವಾದುದು ನಂತೂರು ವೃತ್ತ.
ಕೆಪಿಟಿ, ನಂತೂರು ವೃತ್ತಗಳಲ್ಲಿ ಫ್ಲೈ ಓವರ್‌ಗಳನ್ನು ನಿರ್ಮಿಸಬೇಕು ಎಂಬುದಾಗಿ ನಾಗರಿಕರು, ಜನಪ್ರತಿನಿಧಿಗಳು ಹೆದ್ದಾರಿ ಇಲಾಖೆ ಹಾಗೂ ಸರಕಾರವನ್ನು ಒತ್ತಾಯಿಸುತ್ತಲೇ ಇದ್ದಾರೆ. ಸುರತ್ಕಲ್‌ನಿಂದ ಬಿ.ಸಿ. ರೋಡು ಜಂಕ್ಷನ್‌ವರೆಗೆ ರಾ.ಹೆ. ಚತುಷ್ಪಥ ಯೋಜನೆಯಲ್ಲಿ ಇಲ್ಲಿ ಫ್ಲೈ ಒವರ್ ನಿರ್ಮಾಣ ಕಾಮಗಾರಿ ಇದ್ದಿತ್ತು. ಆದರೆ ಸಕಾಲದಲ್ಲಿ ಭೂಸ್ವಾಧೀನ ವಾಗದ ಕಾರಣ ಹೆದ್ದಾರಿ ಪ್ರಾಧಿಕಾರ ಕಾಮಗಾರಿಯನ್ನೇ ಕೈ ಬಿಟ್ಟಿತು. ಜಿಲ್ಲಾಡಳಿತ ಎಚ್ಚೆತ್ತು ಭೂಸ್ವಾಧೀನ ಮಾಡಿದ್ದರೂ ಗುತ್ತಿಗೆ ವಹಿಸಿಕೊಂಡ ಇರ್ಕಾನ್ ಯೋಜನ ವೆಚ್ಚ ದುಪ್ಪಟ್ಟು ಆಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆಸಲು ಒಪ್ಪಲಿಲ್ಲ. ಆದರೆ ಈಗ ಫ್ಲೈ ಓವರ್ ಅನಿವಾರ್ಯವಾಗಿದ್ದು, ಬಲವಾದ ಬೇಡಿಕೆ ಮಂಡಿಸಲಾಗಿದೆ. ಕೆಪಿಟಿ ಹಾಗೂ ನಂತೂರಿನಲ್ಲಿ ಫ್ಲೈ ಓವರ್ ನಿರ್ಮಿಸಬೇಕು ಎಂಬುದಾಗಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ, ತ್ತೈಮಾಸಿಕ ಕೆಡಿಪಿ ಸಭೆಗಳು, ಹೆದ್ದಾರಿ ಇಲಾಖೆಗೆ ಸಂಬಂಧಪಟ್ಟ ಸಭೆಗಳಲ್ಲಿ ಜನಪ್ರತಿನಿಧಿಗಳು ಪ್ರಸ್ತಾವಿಸುತ್ತಲೇ ಇದ್ದಾರೆ. ಸಮಸ್ಯೆ ನಿವಾರಣೆಯಾಗಲಿ
ನಂತೂರು ವೃತ್ತದಲ್ಲಿ ಸಂಚಾರ ದಟ್ಟನೆಯ ಸ್ಥಿತಿ ಹಾಗೂ ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪದವು ಶಾಲೆಯ ಬಳಿಯಿಂದ ತಾರೆತೋಟ ಬಳಿಯ ಸಂದೇಶ ಲಲಿತಾ ಕಲಾ ವಿದ್ಯಾಲಯದ ಸಮೀಪದವರೆಗೆ ಅಂಡರ್‌ಪಾಸ್ ನಿರ್ಮಾಣಕ್ಕೆ ನಿರ್ಧರಿಸಿತು. ಆದರೆ ಕೆಲವು ಬದಲಾವಣೆಗಳಾಗಿ ಈಗ ಓವರ್‌ಪಾಸ್ ಪ್ರಸ್ತಾವನೆ ರೂಪಿಸಲಾಗಿದೆ. ಹೆದ್ದಾರಿ ಪ್ರಾಧಿಕಾರ ಈ ಪ್ರಸ್ತಾವನೆಯನ್ನು ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ ಕಳುಹಿಸಿದ್ದು ಅನುಮೋದನೆಯ ನಿರೀಕ್ಷೆಯಲ್ಲಿದೆ.
Related Articles
ನಂತೂರು ವೃತ್ತ ವಾಹನ ಚಾಲಕರ ಪಾಲಿಗೆ ಗೊಂದಲದ ಗೂಡಾಗಿದೆ. ಪರಿಣಾಮ ವಾಹನ ಸಂಚಾರ ಸ್ಥಗಿತಗೊಳ್ಳುವುದು ನಿತ್ಯದ ಸಮಸ್ಯೆ. ವೃತ್ತದ ವಿನ್ಯಾಸ ಈಗ ಹೇಗಿದೆ ಎಂದರೆ ಪಂಪ್‌ವೆಲ್‌ನಿಂದ ಕೆಪಿಟಿ ವೃತ್ತದ ಕಡೆಗೆ ಸಾಗುವ ವಾಹನಗಳು ಸ್ವಲ್ಪ ಎಡಕ್ಕೆ ತಿರುಗಿ ನೇರವಾಗಿ ಮುಂದಕ್ಕೆ ಸಾಗಬೇಕು. ಮಲ್ಲಿಕಟ್ಟೆ ಕಡೆಯಿಂದ ಬಂದು ಬಿಕರ್ನಕಟ್ಟೆ ಕಡೆಗೆ ಹೋಗುವ ವಾಹನಗಳು ನಂತೂರು ಬಸ್‌ನಿಲ್ದಾಣದಿಂದ ಮುಂದಕ್ಕೆ ಸಾಗಿ ಬಲಕ್ಕೆ ತಿರುಗಿ ವೃತ್ತಕ್ಕೆ ಅರ್ಧ ಸುತ್ತು ಹೊಡೆದು ಸಾಗಬೇಕು. ಈ ಸಂದರ್ಭದಲ್ಲಿ ಕೆಪಿಟಿ ಕಡೆಯಿಂದ ಮಲ್ಲಿಕಟ್ಟೆಗೆ ಬರುವ ವಾಹನಗಳು ಜಂಕ್ಷನ್‌ಗೆ ಬಂದು ಬಲಕ್ಕೆ ತಿರುಗಿ ಸಾಗಬೇಕು. ಪಂಪ್‌ವೆಲ್ ಕಡೆಗೆ ಹೋಗುವ ವಾಹನಗಳು ನೇರವಾಗಿ ಸಾಗಬೇಕು. ಇಲ್ಲಿ ಸಮಸ್ಯೆ ಎಂದರೆ ಏಕ ಕಾಲಕ್ಕೆ ಎಲ್ಲ ಕಡೆಯಿಂದ ವಾಹನಗಳು ಬರುತ್ತವೆ. ಯಾರಿಗೆ ಯಾವ ಕಡೆ ಹೋಗಬೇಕೆಂಬುದೇ ತಿಳಿಯದು. ಈ ಎಲ್ಲ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಓವರ್‌ಪಾಸ್ ಶೀಘ್ರ ನಿರ್ಮಾಣವಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.
Advertisement
ಶೀಘ್ರ ಮಂಜೂರಾತಿಗೆ ಕ್ರಮಪ್ರಸ್ತಾಪ ಕೇಂದ್ರ ಭೂಸಾರಿಗೆ ಸಚಿವಾಲಯದ ಬಳಿ ಇದೆ. ವಿನ್ಯಾಸ ಪರಿಷ್ಕರಣೆಯಿಂದಾಗಿ ಓವರ್‌ಪಾಸ್ ನಿರ್ಮಾಣದಲ್ಲಿ ವಿಳಂಬವಾಗಿದೆ. ಪ್ರಸ್ತಾಪಕ್ಕೆ ಶೀಘ್ರ ಮಂಜೂರಾತಿ ದೊರಕುವ ನಿಟ್ಟಿನಲ್ಲಿ ಪೂರಕ ಕ್ರಮಗಳು ಆಗುತ್ತಿವೆ.
– ನಳಿನ್ ಕುಮಾರ್ ಕಟೀಲು, ಸಂಸದರು – ಕೇಶವ ಕುಂದರ್