Advertisement

ನಂತೂರು ವೃತ್ತದ ಅದ್ವಾನ ಮುಗಿಯುವುದೇ ಇಲ್ಲ !

10:07 AM Jun 30, 2018 | Team Udayavani |

ಮಹಾನಗರ: ನಗರದ ಹೃದಯಭಾಗದಂತಿರುವ ನಂತೂರು ವೃತ್ತ ನಗರದಲ್ಲಿರುವ ಅತೀ ಹೆಚ್ಚು ಅಪಾಯಕಾರಿ ವೃತ್ತಗಳಲ್ಲೊಂದು. ಈ ಪ್ರದೇಶದಲ್ಲಿ ದಿನನಿತ್ಯ ಬೈಕ್‌, ಕಾರು, ಬಸ್‌, ಲಾರಿಗಳಿಂದ ಹಿಡಿದು ದೊಡ್ಡ ಗಾತ್ರ ಟ್ಯಾಂಕರ್‌, ಕಂಟೈನರ್‌, ಸಹಿತ ನೂರಾರು ವಾಹನಗಳು ಸಂಚರಿಸುತ್ತವೆ. ಹಾಗಾಗಿ ಇಲ್ಲಿ ಚಾಲಕರು ಎಷ್ಟೇ ಜಾಗರೂಕತೆ ವಹಿಸಿದರೂ ಸಾಲದು.

Advertisement

ನಂತೂರು ವೃತ್ತದಲ್ಲಿ ಒಂದು ರಸ್ತೆ ಬಿಕರ್ನಕಟ್ಟೆ ಪ್ರದೇಶದ ಕಡೆ ಹೋಗುತ್ತಿದ್ದು, ಈ ಪ್ರದೇಶದಲ್ಲಿ ಸಿಗ್ನಲ್‌ ಪ್ರೀ ಟ್ರಾಫಿಕ್‌ ಇದೆ. ಅಪಘಾತ ತಡೆಯುವ ನಿಟ್ಟಿನಲ್ಲಿ ನಗರ ಸಂಚಾರಿ ಪೊಲೀಸರು ರಸ್ತೆಗೆ ಫೈಬರ್‌ ಕೋನ್‌ ಅಳವಡಿಸಿದ್ದಾರೆ. ಆದರೂ ಇದರಿಂದ ಹೆಚ್ಚಿನ ಅನುಕೂಲವಾಗುತ್ತಿಲ್ಲ. ಕೆಲವು ದಿನಗಳ ಹಿಂದೆ ಕೆಪಿಟಿ ಕಡೆಯಿಂದ ನಂತೂರು ಮೂಲಕ ಪಡೀಲ್‌ನತ್ತ ಹೋಗುತ್ತಿದ್ದ ಸ್ಕೂಟರ್‌ಗೆ ಮಿನಿಲಾರಿ ಢಿಕ್ಕಿ ಹೊಡೆದು ಸ್ಕೂಟರ್‌ ಚಲಾಯಿಸುತ್ತಿದ್ದ ಪತಿ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಮೃತಪಟ್ಟ ಧಾರುಣ ಘಟನೆ ಇಲ್ಲಿ ಸಂಭವಿಸಿತ್ತು. ಅಷ್ಟೇ ಅಲ್ಲದೆ ಈ ರೀತಿಯ ಅನೇಕ ಘಟನೆಗಳು ನಂತೂರು ವೃತ್ತ ಬಳಿ ಸಂಭವಿಸಿದೆ. ಬೆಳಗ್ಗೆಯಿಂದ ರಾತ್ರಿವರೆಗೆ ಟ್ರಾಫಿಕ್‌ ಪೊಲೀಸರು ಎಷ್ಟೇ ಹರ ಸಾಹಸಪಟ್ಟರೂ ನಿಯಂತ್ರಣವಂತೂ ಸಾಧ್ಯವಾಗುವುದಿಲ್ಲ.

ಫೈಬರ್‌ ಕೋನ್‌ ಅಳವಡಿಕೆ ವಿಸ್ತರಿಸಿ
ನಂತೂರು ವೃತ್ತದ ಹತ್ತಿರ ರಸ್ತೆಗೆ ಹಾಕಲಾದ ಫೈಬರ್‌ ಕೋನ್‌ನ್ನು ಮತ್ತಷ್ಟು ವಿಸ್ತರಿಸಬೇಕು ಎಂಬ ಕೂಗು ವಾಹನ ಸವಾರರ ಕಡೆಯಿಂದ ಕೇಳಿ ಬರುತ್ತಿವೆ. ಏಕೆಂದರೆ ನಂತೂರು ವೃತ್ತದಲ್ಲಿ ಸಿಗ್ನಲ್‌ ವ್ಯವಸ್ಥೆ ಇಲ್ಲದ ಕಾರಣ ಕೆಲವೊಂದು ವಾಹನ ಚಾಲಕರು ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಾರೆ. ಇದೇ ಕಾರಣಕ್ಕೆ ಈಗಾಗಲೇ ಅಳವಡಿಸಲಾದ ಡಿವೈಡರ್‌ ಕೋನ್‌ನ್ನು ಪದುವ ಕಾಲೇಜ್‌ ರಸ್ತೆಯವರೆಗೆ ವಿಸ್ತರಿಸಬೇಕಿದೆ.

ಗುಡ್ಡ ಜರಿದೀತು ಎಚ್ಚರ
ನಂತೂರಿನಿಂದ ಪಂಪ್‌ವೆಲ್‌ಗೆ ತೆರಳುವ ರಾ.ಹೆ.ಯಲ್ಲಿ ಅಂದರೆ ನಂತೂರು ವೃತ್ತ ಸಮೀಪ ಇರುವಂತಹ ಒಂದು ಬದಿಯ ಗುಡ್ಡ ಈಗಾಗಲೇ ಸಣ್ಣ ಮಟ್ಟದಲ್ಲಿ ಜರಿದಿದ್ದು ಮಣ್ಣು ಬೀಳಲು ಪ್ರಾರಂಭಿಸುತ್ತಿದ್ದು, ಅಪಾಯವನ್ನು ಆಹ್ವಾನಿಸುತ್ತಿದೆ. ಇದೇ ಗುಡ್ಡದ ಮೇಲೆ ಮರಗಳಿದ್ದು, ಅದರ ಗೆಲ್ಲು ರಸ್ತೆಗೆ ಬಾಗಿಕೊಂಡಿವೆ. ಜೋರಾದ ಗಾಳಿಗೆ ಅಪಾಯ ತಂದೊಡ್ಡುವ ಪರಿಸ್ಥಿತಿದೆ. ಇಲ್ಲೇ ಬದಿಯಲ್ಲಿ ಇರುವ ಚರಂಡಿ ಸಮರ್ಪಕ ನಿರ್ವಹಣೆ ಇಲ್ಲದೆ ಹುಲ್ಲು ತುಂಬಿಕೊಂಡಿದ್ದು ಮಳೆ ನೀರು ರಸ್ತೆಗೆ ಬರುತ್ತದೆ. ಮುಂದಿನ ದಿನಗಳಲ್ಲಿ ಯಾವುದೇ ಅನಾಹುತ ಸಂಭವಿಸುವ ಮುನ್ನ ಸ್ಥಳೀಯಾಡಳಿತ ಎಚ್ಚೆತ್ತುಕೊಳ್ಳುವ ಅಗತ್ಯವಿದೆ. 

ಗುಂಡಿ ಮುಚ್ಚೋಕೆ ಎಷ್ಟು ಸಮಯ ಬೇಕು
ನಂತೂರು ವೃತ್ತದ ಸಮೀಪ ರಸ್ತೆಯಲ್ಲಿ ನಿರ್ಮಾಣಗೊಂಡ ದೊಡ್ಡ ಗುಂಡಿ ಕೆಲವು ತಿಂಗಳುಗಳಿಂದ ಇದೇ ರೀತಿ ಇದೆ. ಇದೇ ರಸ್ತೆ ನೀರುಮಾರ್ಗ, ಪಡೀಲು, ಕುಲಶೇಖರ, ಮೂಡಬಿದಿರೆ, ಕಾರ್ಕಳ ಸೇರಿದಂತೆ ಇನ್ನಿತರ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದೇ ಕಾರಣಕ್ಕೆ ಇಲ್ಲಿ ನೂರಾರು ಘನ ವಾಹನಗಳು ದಿನಂಪ್ರತಿ ಸಂಚರಿಸುತ್ತವೆ. 

Advertisement

ಅಪಾಯಕ್ಕೆ ಆಹ್ವಾನ
ನಂತೂರು ವೃತ್ತ ಸಮೀಪ ಹೆಚ್ಚಿನ ಸಮಸ್ಯೆಗಳಿವೆ. ವೃತ್ತ ಸಮೀಪ ಬಿದ್ದಂತಹ ದೊಡ್ಡ ಗುಂಡಿ ಅಪಾಯಕ್ಕೆ ಎಡೆಮಾಡಿಕೊಟ್ಟಂತಿದೆ. ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಬೇಕು.
-ಶ್ರೀನಿವಾಸ ಕುಲಾಲ್‌,
ಸ್ಥಳೀಯರು

ಸಂಬಂಧಪಟ್ಟವರಿಗೆ ತಿಳಿಸುವೆ
ನಂತೂರು ವೃತ್ತ ಸಮೀಪ ಇರುವ ದೊಡ್ಡ ಗುಂಡಿಯನ್ನು ಈ ಹಿಂದೆ ಕಾರ್ಪೊರೇಷನ್‌ ವತಿಯಿಂದ ಮುಚ್ಚಿಸಿದ್ದೆವು. ಇದು ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ಹೆದ್ದಾರಿ ಪ್ರಾಧಿಕಾರ ಗುಂಡಿ ಮುಚ್ಚುವ ಕೆಲಸ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ತಿಳಿಸುತ್ತೇನೆ.
– ಭಾಸ್ಕರ್‌ ಕೆ., ಮೇಯರ್‌

ವಿಶೇಷ ವರದಿ 

Advertisement

Udayavani is now on Telegram. Click here to join our channel and stay updated with the latest news.

Next