ತನುಷ್ ಅಭಿನಯದ “ನಂಜುಂಡಿ ಕಲ್ಯಾಣ’ ಚಿತ್ರ ಸೆಟ್ಟೇರಿದ್ದು, ಮುಗಿದಿದ್ದು ಗೊತ್ತೇ ಇದೆ. ಈಗ ಆ ಚಿತ್ರದ ಹೊಸ ಸುದ್ದಿ ಅಂದರೆ, ಫೆಬ್ರವರಿ 1 ರಂದು ಚಿತ್ರದ ಆಡಿಯೋ ಬಿಡುಗಡೆ ನಡೆಯಲಿದೆ. ಅದಾದ ಬಳಿಕ ಚಿತ್ರವನ್ನು ಜನರ ಮುಂದೆ ತರಲು ಅಣಿಯಾಗಿದ್ದಾರೆ ನಿರ್ದೇಶಕ ರಾಜೇಂದ್ರ ಕಾರಂತ್. 1989 ರಲ್ಲಿ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಮಾಲಾಶ್ರೀ ಅಭಿನಯದ ಸೂಪರ್ ಹಿಟ್ ಚಿತ್ರ “ನಂಜುಂಡಿ ಕಲ್ಯಾಣ’ ಚಿತ್ರದ ಶೀರ್ಷಿಕೆಯನ್ನೇ ಮರುಬಳಕೆ ಮಾಡಿ ನಿರ್ದೇಶಕ ರಾಜೇಂದ್ರ ಕಾರಂತ್ ಅವರು ನಾಮಕರಣ ಮಾಡಿದ್ದರು.
ಮುಹೂರ್ತ ದಿನದಿಂದಲೂ ಚಿತ್ರ ಕುತೂಹಲ ಕೆರಳಿಸುತ್ತಲೇ ಬಂದಿತ್ತು. ಈಗಾಗಲೇ ಚಿತ್ರೀಕರಣ ಮುಗಿಸಿ, ಹಾಡುಗಳನ್ನು ಹೊರತರಲು ಅಣಿಯಾಗಿರುವ ಚಿತ್ರತಂಡ, ಫೆಬ್ರವರಿ 1 ರಂದು ಗ್ರ್ಯಾಂಡ್ ಆಗಿ ಹಾಡುಗಳನ್ನು ಹೊರಲು ಸಜ್ಜಾಗಿದೆ. “ಮಡಮಕ್ಕಿ’ ಚಿತ್ರದ ಬಳಿಕ ತನುಷ್ ನಟಿಸುತ್ತಿರುವ ಚಿತ್ರವಿದು. ನಿರ್ದೇಶಕ ರಾಜೇಂದ್ರ ಕಾರಂತ್ ಈ ಹಿಂದೆ “ಮಂಗನ ಕೈಯಲ್ಲಿ ಮಾಣಿಕ್ಯ’ ಎಂಬ ಹಾಸ್ಯಪ್ರಧಾನ ಚಿತ್ರ ನಿರ್ದೇಶಿಸಿದ್ದರು.
ಈಗ ಪುನಃ ಮತ್ತೂಮ್ಮೆ ಹಾಸ್ಯಮಯ ಚಿತ್ರ ಕಟ್ಟಿಕೊಟ್ಟಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯ ಜವಾಬ್ದಾರಿ ಕೂಡ ರಾಜೇಂದ್ರ ಕಾರಂತ್ ಅವರದೇ. “ನಂಜುಂಡಿ ಕಲ್ಯಾಣ’ ಅಂದಮೇಲೆ, ಮದುವೆಯ ಕಾನ್ಸೆಪ್ಟ್ ಇರದಿದ್ದರೆ ಹೇಗೆ? ಚಿತ್ರಪೂರ್ಣ ಮದುವೆ ಹಿನ್ನೆಲೆಯಲ್ಲೇ ಸಾಗಲಿದ್ದು, ಅಮ್ಮ ತನ್ನ ಮಗನಿಗೆ ಹೆಣ್ಣು ಹುಡುಕಿ ಮದುವೆ ಮಾಡೋಕೆ ಪಡುವ ಸಾಹಸವೇ “ನಂಜುಂಡಿ ಕಲ್ಯಾಣ’ ಚಿತ್ರದ ಸಾರಾಂಶ. ಚಿತ್ರದಲ್ಲಿ ಹಾಸ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದ್ದು, ಹಂಡ್ರೆಡ್ ಪರ್ಸೆಂಟ್ ಕಾಮಿಡಿ ಕೊಡುವ ಪ್ರಯತ್ನ ನಮ್ಮದು ಎನ್ನುತ್ತಾರೆ.
ಚಿತ್ರಕ್ಕೆ ಶ್ರಾವ್ಯಾ ನಾಯಕಿಯಾಗಿ ನಟಿಸಿದ್ದಾರೆ. ಅನೂಪ್ ಸೀಳಿನ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ವಿಶೇಷ ವ್ಯಕ್ತಿಯೊಬ್ಬರು ನಟಿಸಿದ್ದಾರೆ. ಅವರು ಬೇರಾರು ಅಲ್ಲ ನೆಲ್ಸನ್‌ಪೇಸ್. ಇವರು ಏಳು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಆಗಿದ್ದವರು. ಅವರಿಲ್ಲಿ ಚಿತ್ರದ ಫೈಟ್ ದೃಶ್ಯದಲ್ಲಿ ಪಾಲ್ಗೊಂಡು ನಟಿಸಿದ್ದಾರೆ. ಗೋವಾ ಮೂಲದ ನೆಲ್ಸನ್ ಪೇಸ್ ಅವರು ಭಾರತ ಪರ ಆಡಿ, ಆಸ್ಟೇಲಿಯನ್, ಥೈಲ್ಯಾಂಡ್ ಹೀಗೆ ಇತರೆ ದೇಶಗಳಲ್ಲಿ ಭಾಗವಹಿಸಿ ಗೆದ್ದು ಬಂದಿದ್ದಾರೆ. ಸಿನಿಮಾದಲ್ಲಿ ನಾಯಕ ತನುಷ್ ಜೊತೆಗೆ ಫೈಟ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.