ನಂಜನಗೂಡು: ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿ ಎಂದು ಆರೋಪಿಸಿ ನಗರದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಮಿನಿ ವಿಧಾನಸೌಧದ ಎದುರು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನೇತೃತ್ವದಲ್ಲಿ ಜಮಾಯಿಸಿದ ಕಾರ್ಯಕರ್ತರು ಹಾಗೂ ಮುಖಂಡರು, ರಾಜ್ಯದ ನೆರೆ ಸಂತ್ರಸ್ತರ ನೆರವಿಗೆ ಬಾರದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕಪಿಲೆ ನದಿ ಪ್ರವಾಹದಿಂದಾಗಿ ತಾಲೂಕಿನ 16 ಗ್ರಾಮಗಳ ಸಾವಿರಾರು ಜನರ ಬದುಕು ಬೀದಿಗೆ ಬಿದ್ದಿದೆ. ಇಂದಿಗೂ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಕೇವಲ 10 ಸಾವಿರ ರೂ. ಪರಿಹಾರ ಬಿಟ್ಟರೆ ಇದುವರೆಗೂ ಹೆಚ್ಚಿನ ನೆರವು ಕಲ್ಪಿಸಿಲ್ಲ ಎಂದು ಕಳಲೆ ಕೇಶವಮೂರ್ತಿ ಕಿಡಿಕಾರಿದರು.
ವರ್ಗಾವಣೆ ದಂಧೆ: ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೂಗಶೆಟ್ಟಿ ಮಾತನಾಡಿ, ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಸಂಸದರು ಹಾಗೂ ಶಾಸಕರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಕೇಂದ್ರದ ಮೇಲೆ ಹೆಚ್ಚಿನ ಒತ್ತಡ ತಂದು ಪರಿಹಾರ ಬಿಡುಗಡೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಇದೇ ವೇಳೆ, ಕಂದಾಯ ಅಧಿಕಾರಿ ಶಿವಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತಗಡೂರು ರಂಗಸ್ವಾಮಿ, ಶೆಟ್ಟಳ್ಳಿ ಗುರುಸ್ವಾಮಿ, ಪಿ.ಶ್ರೀನಿವಾಸ, ಜಿಪಂ ಮಾಜಿ ಸದಸ್ಯ ಕೆ.ಮಾರುತಿ, ಮುಖಂಡರಾದ ನಾಗೇಶ್ ರಾಜ್, ಶಿವಪ್ಪದೇವರು, ಸೋಮಣ್ಣ, ಶ್ರೀಧರ್, ಗುರುಮಲ್ಲಪ್ಪ , ದೊರೆಸ್ವಾಮಿ, ಮಂಜುನಾಥ, ಕುಳ್ಳಯ್ಯ, ಗಂಗಾಧರ್, ಪ್ರದೀಪ್, ಮಹೇಶ್ ಸೇರಿದಂತೆ ನಗರಸಭೆ, ತಾಪಂ ಸದಸ್ಯರು ಉಪಸ್ಥಿತರಿದ್ದರು.