Advertisement

ನಂಜನಗೂಡು: ಅನುಕಂಪದ ಅಲೆಯಲ್ಲಿ ಕೈ ಅಭ್ಯರ್ಥಿ

02:26 PM May 07, 2023 | Team Udayavani |

ನಂಜನಗೂಡು: ನಂಜನಗೂಡು ವಿಧಾನಸಭಾ ಕ್ಷೇತ್ರ (ಪರಿಶಿಷ್ಟ ಜಾತಿ ಮೀಸಲು)ದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಸ್ಪರ್ಧೆ ನಡೆದಿದೆ. ನಂಜನಗೂಡು ಶಾಸಕ ಬಿಜೆಪಿಯ ಬಿ.ಹರ್ಷವರ್ಧನ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಧ್ರುವನಾರಾಯಣ ಅವರ ಮಧ್ಯೆ ಪೈಪೋಟಿ ಇದೆ.

Advertisement

ಹರ್ಷವರ್ಧನ್‌ ಕಳೆದ ಚುನಾವಣೆಯಲ್ಲಿ ಬಿಜೆಪಿ ಯಿಂದ ಸ್ಪರ್ಧಿಸಿ ಗೆದ್ದು ಮೊದಲ ಬಾರಿಗೆ ಈ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದಾರೆ. ಹರ್ಷವರ್ಧನ್‌ ಅವರು ಚಾಮರಾಜನಗರ ಲೋಕಸಭಾ ಸದಸ್ಯ ವಿ.ಶ್ರೀನಿವಾಸಪ್ರಸಾದ್‌ ಅವರ ಅಳಿಯ. ದರ್ಶನ್‌ ಧ್ರುವನಾರಾಯಣ್‌ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಇತ್ತೀಚೆಗೆ ನಿಧನರಾದ ಮಾಜಿ ಸಂಸದ ಆರ್‌.ಧ್ರುವನಾರಾಯಣ್‌ ಅವರ ಪುತ್ರ. ದರ್ಶನ್‌ ಧ್ರುವನಾರಾಯಣ್‌ ಅವರು ತಮ್ಮ ತಂದೆಯ ನಿಧನದ ನಂತರ ಒಂದು ತಿಂಗಳ ಅವಧಿಯಲ್ಲಿ ತಾಯಿ ಅವರನ್ನೂ ಕಳೆದುಕೊಂಡರು. ಕ್ಷೇತ್ರದ ಮತದಾರರಲ್ಲಿ ದರ್ಶನ್‌ ಧ್ರುವನಾರಾಯಣ್‌ ಅವರ ಬಗ್ಗೆ ಅನುಕಂಪ ಇದೆ.

ಹರ್ಷವರ್ಧನ್‌ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಮೂಲಕ ತಮ್ಮ ನಾಯಕತ್ವವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತಯಾಚಿಸುತ್ತಿದ್ದಾರೆ. ಹರ್ಷವರ್ಧನ್‌ ಅವರು ಪುನರಾಯ್ಕೆಯಾಗಲು ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷವು ಕಳೆದುಕೊಂಡಿರುವ ಈ ಕ್ಷೇತ್ರವನ್ನು ಮರಳಿ ಪಡೆಯುವ ಪ್ರಯತ್ನ ನಡೆಸಿದೆ.

ದರ್ಶನ್‌ ಧ್ರುವನಾರಾಯಣ್‌ ಅವರು ತಮ್ಮ ತಂದೆ ಬದುಕಿರುವವರೆಗೂ ರಾಜಕಾರಣ ಪ್ರವೇಶಿಸಿರಲಿಲ್ಲ. ಧ್ರುವನಾರಾಯಣ್‌ ಅವರೂ ತಮ್ಮ ಮಕ್ಕಳನ್ನು ರಾಜಕಾರಣ ಪ್ರವೇಶಿಸಲು ಅವಕಾಶ ನೀಡಿರಲಿಲ್ಲ. ಧ್ರುವನಾರಾಯಣ್‌ ಈ ಕ್ಷೇತ್ರದಲ್ಲಿ ಈ ಬಾರಿ ಸ್ಪರ್ಧಿಸಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಧ್ರುವನಾರಾಯಣ ಅವರ ನಿಧನದ ನಂತರ ಕಾಂಗ್ರೆಸ್‌ ದರ್ಶನ್‌ ಧ್ರುವನಾರಾಯಣ್‌ ಅವರಿಗೆ ಟಿಕೆಟ್‌ ನೀಡಿತು. ಇದಕ್ಕೂ ಮುನ್ನ ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದ ಮಾಜಿ ಸಚಿವ ಕಾಂಗ್ರೆಸ್ಸಿನ ಡಾ.ಎಚ್‌. ಸಿ.ಮಹದೇವಪ್ಪ ಅವರು ಧ್ರುವನಾರಾಯಣ್‌ ಅವರ ನಿಧನರಾದ ನಂತರ ಸ್ವಯಂಪ್ರೇರಣೆಯಿಂದ ಈ ಕ್ಷೇತ್ರ ದಲ್ಲಿ ತಾವು ಸ್ಪರ್ಧಿಸಲು ಬಯಸುವುದಿಲ್ಲ. ದರ್ಶನ್‌ ಧ್ರುವನಾರಾಯಣ್‌ ಅವರಿಗೆ ಟಿಕೆಟ್‌ ನೀಡಬೇಕೆಂದು ಕಾಂಗ್ರೆಸ್‌ ವರಿಷ್ಠರಿಗೆ ಮನವಿ ಮಾಡಿದರು.

ನಂತರ ಕಾಂಗ್ರೆಸ್‌ ಪಕ್ಷವು ಡಾ.ಮಹದೇವಪ್ಪ ಅವರಿಗೆ ಅವರ ಸ್ವಕ್ಷೇತ್ರ ತಿ.ನರಸೀಪುರ (ಮೀಸಲು) ಕ್ಷೇತ್ರದಲ್ಲಿ ಟಿಕೆಟ್‌ ಘೋಷಿಸಿತು. ಡಾ.ಮಹದೇವಪ್ಪ ಅವರು ಈಗ ನಂಜನಗೂಡು ಕ್ಷೇತ್ರದಲ್ಲಿಯೂ ದರ್ಶನ್‌ ಧ್ರುವನಾರಾಯಣ್‌ ಅವರ ಪರ ಪ್ರಚಾರ ನಡೆಸಿದ್ದಾರೆ. ನಂಜನಗೂಡು ಕ್ಷೇತ್ರದಲ್ಲಿ ಜೆಡಿಎಸ್‌ಗೆ ಅಷ್ಟಾಗಿ ನೆಲೆ ಇಲ್ಲ. ಈ ಹಿಂದೆ ಜೆಡಿಎಸ್‌ ಇಲ್ಲಿ ಬಲಿಷ್ಠವಾಗಿತ್ತು. ವರ್ಷಗಳು ಉರುಳಿದಂತೆ ಜೆಡಿಎಸ್‌ ಇಲ್ಲಿ ದುರ್ಬಲವಾಗುತ್ತಾ ಬಂದಿದೆ.

Advertisement

ಜೆಡಿಎಸ್‌ ಈ ಕ್ಷೇತ್ರದಲ್ಲಿ ದರ್ಶನ್‌ ಧ್ರುವನಾರಾ ಯಣ್‌ ಅವರಿಗೆ ಬೆಂಬಲ ಘೋಷಿಸಿ ಪ್ರಚಾರ ನಡೆಸಿದೆ. ನಂಜನಗೂಡು ಕ್ಷೇತ್ರದ ಕಣದಲ್ಲಿ ಹತ್ತು ಮಂದಿ ಸ್ಪರ್ಧಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಸುಮಾರು 850 ಕೋಟಿ ರೂ. ಗಳ ಅಭಿವೃದ್ದಿ ಕಾರ್ಯ ಮಾಡಿದ್ದೇನೆ. ನುಗು ಯೋಜನೆ, ಶ್ರೀಕಂಠೇಶ್ವರ ಸ್ವಾಮಿಯ ಬೆಳ್ಳಿ ರಥ, ಹಿಂದುಳಿದ ವರ್ಗಗಳ ಸಮುದಾಯಗಳ ಸಮುತ್ಛಯ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿ ದ್ದೇನೆ. ಜನತೆ ತಮ್ಮನ್ನು ಬೆಂಬಲಿಸುವ ವಿಶ್ವಾಸವಿದೆ. -ಬಿ.ಹರ್ಷವರ್ಧನ್‌, ಬಿಜೆಪಿ

ಬಿಜೆಪಿಯ ದುರಾಡಳಿತದಿಂದಾಗಿ ಜನತೆ ಬೇಸತ್ತಿದ್ದಾರೆ. ತಮ್ಮ ತಂದೆ ಆರ್‌.ಧ್ರುವನಾರಾಯಣ್‌ ಅವರ ಬಗ್ಗೆ ಜನತೆ ಇಟ್ಟಿರುವ ಪ್ರೀತಿ, ವಿಶ್ವಾಸ ನನ್ನ ಗೆಲುವಿಗೆ ಸಹಕಾರಿಯಾಗಲಿದೆ. -ದರ್ಶನ್‌ ಧ್ರುವನಾರಾಯಣ್‌, ಕಾಂಗ್ರೆಸ್ ‌

– ಶ್ರೀಧರ್‌ ಆರ್‌.ಭಟ್‌

Advertisement

Udayavani is now on Telegram. Click here to join our channel and stay updated with the latest news.

Next