ನಂಜನಗೂಡು: ನಗರದ ಕಬ್ಬಳ್ಳಿ ವಿದ್ಯಾರ್ಥಿ ನಿಲಯದಲ್ಲಿ ಮೈಸೂರು ವಿಭಾಗ ಮಟ್ಟದ ವೀರಶೈವ ಹಿತಾರಕ್ಷಣಾ ವೇದಿಕೆಗೆ ಚಾಲನೆ ನೀಡಲಾಯಿತು. ಭಾನುವಾರ ಕಾರ್ಯಕ್ರಮವನ್ನು ಉದ್ಘಾಟಿಸಿದ ವೀರಶೈವ ಹಿತಾರಕ್ಷಣಾ ವೇದಿಕೆಯ ಮುಖಂಡ ಸಿ.ಪಿ.ತಮ್ಮಣ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಪಿ.ಮಹದೇವಸ್ವಾಮಿ, ಖಜಾಂಚಿ ಉಡಿಗಾಲ ಯು.ಎಂ. ಪ್ರಭುಸ್ವಾಮಿ ಅವರುಗಳು ಮಾತನಾಡಿದರು.
ಮೈಸೂರು ವಿಭಾಗದಲ್ಲಿನ 49 ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ವೀರಶೈವ ಮತದಾರರು ಇದ್ದು, ಮುಂಬರುವ ವಿಧಾನಸಭಾ, ಲೋಕಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ವೀರಶೈವ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಹಾಗೂ ಗೆಲ್ಲುವ ಅವಕಾಶವಿರುವ ಕ್ಷೇತ್ರಗಳಲ್ಲಿ ಸಮಾಜದ ಅಭ್ಯರ್ಥಿಗಳಿಗೆ ಹೆಚ್ಚಿನ ಸ್ಥಾನಗಳನ್ನು ಕಲ್ಪಿಸಿಕೊಡಲು ಕಾರ್ಯತಂತ್ರ ರೂಪಿಸಬೇಕು ಎಂದರು.
ನಮ್ಮ ಸಮಾಜವನ್ನು ಕಡೆಗಣಿಸುವ ಅಭ್ಯರ್ಥಿಗಳ ವಿರುದ್ಧ ಒಗ್ಗಟ್ಟಾಗಿ ಮತ ಚಲಾಯಿಸುವುದು ಹಾಗೂ ಇತರೆ ಕ್ಷೇತ್ರಗಳಲ್ಲಿ ನಮ್ಮ ಸಮಾಜವನ್ನು ಆಧರಿಸಿ, ಗೌರವಿಸಿ, ಮನ್ನಣೆ ನೀಡಿ, ವಿಶ್ವಾಸದಿಂದ ಕಾಣುವಂತಹ ಪಕ್ಷದ ಅಭ್ಯರ್ಥಿಯನ್ನು ಒಗ್ಗಟ್ಟಾಗಿ ಬೆಂಬಲಿಸುವಂತೆ ಮಹತ್ವದ ನಿರ್ಣಯ ಕೈಗೊಂಡರು, ವೀರಶೈವರು ಇನ್ನು ಮುಂದಾದರು ರಾಜಕೀಯವಾಗಿ, ಶೈಕ್ಷಣಿಕವಾಗಿ,ಔದ್ಯೋಗಿಕವಾಗಿ,ಸುಸಂಸ್ಕೃತರಾಗಿ ಮುಂದೆ ಬಂದು ಸಮಾಜದ ಅಭಿವೃದ್ದಿಗೆ ಸಹಕರಿಸ ಬೇಕೆಂದರು. ಈ ನಿಟ್ಟಿನಲ್ಲಿ ಯುವ ಜನತೆ ಸಂಕಲ್ಪ ಮಾಡಬೇಕಾಗಿದೆ ಎಂದರು.
ಸಭೆಯಲ್ಲಿ ನಂಜನಗೂಡು ಕ್ಷೇತ್ರದ ವೀರಶೈವ ಮುಖಂಡರುಗಳಾದ ಕಪ್ಪಸೋಗೆ ಮಲ್ಲಿಕಾರ್ಜುನಪ್ಪ, ಮಸಗೆ ರಾಜಪ್ಪ, ಚಂದ್ರವಾಡಿ ನಾಗಣ್ಣ, ಚಿಕ್ಕಮಾದಪ್ಪ, ಕೆ ಆರ್ ಪುರ ಸಿದ್ದಪ್ಪ, ಎ.ಬಿ. ನಂಜುಂಡಸ್ವಾಮಿ ಮುಂತಾದವರು ಸಂಘಟನೆ ಬಗ್ಗೆ ಉತ್ತಮ ಸಲಹೆ ಸೂಚನೆಯನ್ನು ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಮಡುವಿನಹಳ್ಳಿ ಶಂಕರಪ್ಪ ವಹಿಸಿ ಮಾತನಾಡಿದರು. ಸಭೆಯಲ್ಲಿ ಮುದ್ದಳ್ಳಿ ಶಿವರಾಜಪ್ಪ, ಕುರಿಹುಂಡಿ ಮಹೇಶ್,ವೀರಶೈವ ಬ್ಯಾಂಕ್ ಅಧ್ಯಕ್ಷ ಕೆ.ವಿ.ಶಿವಕುಮಾರ್, ಶೆಟ್ಟಹಳ್ಳಿ ಗುರುಸ್ವಾಮಿ, ತರಗನಹಳ್ಳಿ ನಂಜುಂಡಸ್ವಾಮಿ, ಎಳವರಹುಂಡಿ ಸಿದ್ದಪ್ಪ, ಕಸುವಿನಹಳ್ಳಿ ಗುರುಸಿದ್ದಪ್ಪ, ಹಲರೆ ಶಿವಬುದ್ದಿ, ಶಿವಸ್ವಾಮಿ, ಸೇರಿದಂತೆ ನೂರಾರು ಪ್ರಮುಖರು ಭಾಗವಹಿಸಿದ್ದರು.