Advertisement
ಆರು ದಿನಗಳ ಹಿಂದೆಯಷ್ಟೇ ಪ್ರವಾಹ ಮುಳುಗಡೆಯಿಂದ ಚೇತರಿಸಿಕೊಳ್ಳುತ್ತಿದ್ದ ನಂಜನಗೂಡಿನ ನದಿದಡದಲ್ಲಿರುವ ಶ್ರೀಕಂಠೇಶ್ವರ ದೇವಾಲಯ ಆವರಣ, ಕಪಿಲಾ ಸ್ನಾನಘಟ್ಟ, ತೋಪಿನ ಬೀದಿ, ಸರಸ್ವತಿ ಕಾಲೋನಿ, ರಾಜಾಜಿ ಕಾಲೋನಿ, ಹಳ್ಳದಕೇರಿ ಗ್ರಾಮಾಂತರದ ಹೆಜ್ಜಿಗೆ ತೊರೆಮಾವು, ಬೊಕ್ಕಳ್ಳಿ ಕುಳ್ಳಂಕನ ಹುಂಡಿ, ಕತ್ಯಾಡಿಪುರ, ಸುತ್ತೂರು ಸೇರಿದಂತೆ ನದಿ ತೀರದ ಗ್ರಾಮಗಳು ಮತ್ತೆ ಪ್ರವಾಹಕ್ಕೆ ಒಳಗಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.
Related Articles
Advertisement
ಬೊಕ್ಕಳ್ಳಿ ಸಂತ್ರಸ್ತರ ಶಿಬಿರ ಮುಂದುವರಿಕೆ: ಕಳೆದ ವಾರ ಪ್ರವಾಹದ ವೇಳೆ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಪ್ರಾರಂಭಿಸಿದ್ದ ಸಂತ್ರಸ್ತರ ಶಿಬಿರ ಮತ್ತೆ ಮುಂದುವರಿಸಲಾಗಿದೆ. ಪ್ರವಾಹ ನಿರಾಶ್ರಿತರು ಮಂಗಳವಾರ ಹಾಗೂ ಬುಧವಾರ ರಾತ್ರಿ ಮನೆಗೆ ತೆರಳಿದ್ದರು. ಇಂದಿನಿಂದ ಮತ್ತೆ ಪ್ರವಾಹ ಮರುಕಳಿಸುತ್ತಿರುವ ಕಾರಣ ಅವರಿಗೆ ಶಾಲೆಯಲ್ಲೆ ಮಲಗಲು ತಿಳಿಸಲಾಗಿದೆ. ಹಾಗೆಯೇ ತಾತ್ಕಾಲಿಕ ಆರೋಗ್ಯ ಕೇಂದ್ರದ ಸೇವೆಯೂ ಮುಂದುವರಿಯಲಿದೆ ಎಂದು ಉಪ ತಹಶೀಲ್ದಾರ್ ಬಾಲಸುಬ್ರಹ್ಮಣ್ಯ ತಿಳಿಸಿದ್ದಾರೆ.
ಸಂಚಾರ ಸ್ಥಗಿತ: ಮೈಸೂರು ನಗರಕ್ಕೆ ಕೇವಲ 24 ಕಿಲೋ ಮೀಟರ್ ದೂರದಲ್ಲಿರುವ ನಂಜನಗೂಡು ಈಗ ಮತ್ತೆ ಪ್ರವಾಹಕ್ಕೆ ಸಿಲುಕುವ ಭೀತಿ ಇದೆ. ಗುರುವಾರ ಮಧ್ಯಾಹ್ನ ಕಬಿನಿ ಜಲಾಶಯದಿಂದ ಅಧಿಕ ನೀರು ಹೊರ ಬಿಟ್ಟಿರುವ ಕಾರಣ ಮತ್ತೆ ಮೈಸೂರು-ನಂಜನಗೂಡಿನ ರಾಷ್ಟ್ರೀಯ ಹೆದ್ದಾರಿ 766 ಮಲ್ಲನಮೂಲೆ ಬಳಿ ಜಲಾವೃತಗೊಳ್ಳುವುದರಿಂದ ಸಂಚಾರ ಸ್ಥಗಿತಗೊಳಿಸಿದೆ.
ಭೇಟಿ ನೀಡದ ಜನಪ್ರತಿನಿಧಿಗಳು: ತಾಲೂಕಿನ ಸಹಸ್ರಾರು ಎಕರೆ ಕೃಷಿ ಭೂಮಿ ನೀರಿನಲ್ಲಿ ಮುಳುಗಿ ಬೆಳೆಹಾನಿಯಾಗಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಆಥವಾ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳಾರೂ ಆಗಮಿಸಿಲ್ಲ ಎಂದು ಪ್ರವಾಹ ಪೀಡಿತ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.