Advertisement
ನಂಜನಗೂಡು- ನಿಲಾಂಬೂರು ನಡುವಿನ 236 ಕಿ.ಮೀ. ರೈಲ್ವೆ ಮಾರ್ಗ ಅನುಷ್ಠಾನಗೊಂಡರೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಹಾಗೂ ವೈನಾಡ್ ವನ್ಯಜೀವಿ ಧಾಮದ ಕೋರ್ ವಲಯದ ಮೂಲಕ ಹಾದು ಹೋಗುತ್ತದೆ. ಆ ಮೂಲಕ ಅತ್ಯಂತ ಅಮೂಲ್ಯವಾದ ಎರಡು ವನ್ಯಜೀವಿ ಆವಾಸ ಸ್ಥಾನಗಳನ್ನು ವಿ¸ಜಿಸುತ್ತದೆ. ಪ್ರಸ್ತಾಪಿತ ರೈಲ್ವೆ ಮಾರ್ಗವು ಸುಮಾರು 14 ಕಿ.ಮೀ. ದೂರದ ಬಂಡೀಪುರದ ಅರಣ್ಯವನ್ನೇ ತುಂಡರಿಸಿಬಿಡುತ್ತದೆ. ಇದೇ ಕಾರಣಕ್ಕೆ ರೈಲ್ವೆ ಇಲಾಖೆ ಹಾಗೂ ಕೇರಳ ಹೈಕೋರ್ಟ್ ಈ ಯೋಜನೆ ಕಾರ್ಯಸಾಧುವಲ್ಲ ಎಂದು ತಿರಸ್ಕರಿಸಿವೆ. ಆದರೂ ಕೇರಳ ಸರ್ಕಾರ ಹಠಕ್ಕೆ ಬಿದ್ದಂತೆ ತನ್ನ ಪ್ರಯತ್ನದಿಂದ ಹಿಂದೆ ಸರಿಯುತ್ತಿಲ್ಲ.
Related Articles
Advertisement
ಈ ಯೋಜನೆ ಅನುಷ್ಠಾನದಿಂದಾಗುವ ದುಷ್ಪರಿಣಾಮಗಳನ್ನು ಆಧರಿಸಿ ಕರ್ನಾಟಕದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಸ್ತಾಪವನ್ನು ತೀವ್ರವಾಗಿ ವಿರೋಧಿಸಿದ್ದರೂ ಡಾ.ಇ.ಶ್ರೀಧರನ್ ಅವರು ಯೋಜನೆಯ ಕಾರ್ಯ ಸಾಧ್ಯತೆಯ ಅಧ್ಯಯನ ಕೈಗೊಳ್ಳಲು ಅನುಮತಿ ನೀಡುವಂತೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ, ಅವರು ಈ ರೀತಿ ಒತ್ತಡ ಹೇರುವುದು ರಿಟ್ ಪಿಟಿಷನ್ ಸಂಖ್ಯೆ 34464/ 2011ರ ಮೊಕದ್ದಮೆಯಲ್ಲಿ 2013ರಲ್ಲಿ ಕೇರಳ ಹೈಕೋರ್ಟ್ ನೀಡಿದ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.
ನ್ಯಾಯಾಲಯಕ್ಕೆ ಹೇಳಿ: ಮುಂಬರುವ ದಿನಗಳಲ್ಲಿ ಇಂತಹ ಸಭೆಗಳನ್ನು ನಡೆಸುವುದು ಅಥವಾ ಯೋಜನೆಗೆ ಉತ್ತೇಜಿಸುವ ಕಾರ್ಯವನ್ನೂ ಮಾಡಬಾರದು. ಹಾಗೆ ಮಾಡಿದಲ್ಲಿ ನ್ಯಾಯಾಂಗ ನಿಂದನೆಗೆ ಗುರಿಯಾಗಬೇಕಾಗುತ್ತದೆ. ಈ ವಿಚಾರದಲ್ಲಿ ಡಾ.ಇ.ಶ್ರೀಧರನ್ ಅವರಿಂದ ಒತ್ತಡ ಬಂದಲ್ಲಿ ಕರ್ನಾಟಕ ಸರ್ಕಾರದ ಅಧಿಕಾರಿಗಳು ನ್ಯಾಯಾಲಯದ ಗಮನಕ್ಕೆ ತರುವುದು ಸೂಕ್ತ ಎಂದು ಪರಿಸರ ಹಾಗೂ ವನ್ಯಜೀವಿ ಪ್ರೇಮಿಗಳು ತಾಕೀತು ಮಾಡುತ್ತಾರೆ.
ಅಪಾಯದ ಹಾದಿ: ಈ ರೈಲ್ವೆ ಮಾರ್ಗಕ್ಕೆ ಅನುಮತಿ ನೀಡಿದರೆ ವನ್ಯಜೀವಿ ಆವಾಸ ಸ್ಥಾನಗಳನ್ನು ವಿ¸ಜಿಸುವುದಲ್ಲದೆ, ವನ್ಯಪ್ರಾಣಿಗಳ ಸಾವಿಗೂ ಕಾರಣವಾಗುತ್ತದೆ. ಪಶ್ಚಿಮಬಂಗಾಳ, ಅಸ್ಸಾಂ, ಒಡಿಶಾ, ಉತ್ತರಾಖಂಡ, ತಮಿಳುನಾಡು ರಾಜ್ಯಗಳಲ್ಲಿ ರೈಲಿಗೆ ಸಿಲುಕಿ ಆನೆಗಳು ಸಾವನ್ನಪ್ಪುವುದು ಆಗಾಗ್ಗೆ ವರದಿಯಾಗುತ್ತಿದೆ. ಈ ರಾಜ್ಯಗಳಲ್ಲಿ 2012ರಿಂದ ಈವರೆಗೆ 51 ಆನೆಗಳು ಈ ರೀತಿ ಅಸ್ವಾಭಾವಿಕವಾಗಿ ಸಾವನ್ನಪ್ಪಿವೆ. ಈ ಸಾಲಿಗೆ ದೇಶದಲ್ಲೇ ಅತಿಹೆಚ್ಚು ಆನೆಗಳ ಸಾಂಧ್ರತೆಯನ್ನು ಹೊಂದಿರುವ ಬಂಡೀಪುರ ಅರಣ್ಯ ಪ್ರದೇಶವು ಸೇರಬೇಕೆ ಎಂದು ವನ್ಯಜೀವಿ ಪ್ರೇಮಿಗಳು ಪ್ರಶ್ನಿಸುತ್ತಾರೆ.
* ಗಿರೀಶ್ ಹುಣಸೂರು