Advertisement
ಕ್ಷೇತ್ರದ ಪ್ರತಿನಿಧಿಯಾಗಿ ತಾನು ಮಾಡಿದ ಅಭಿವೃದ್ಧಿ ಕಾರ್ಯ ಜನರ ಮುಂದಿಟ್ಟು ಮತ ಕೇಳುವ ಬದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಸಿ.ಮಹದೇವಪ್ಪ ಹಾಗೂ ಸಂಸದ ಆರ್.ಧ್ರುವನಾರಾಯಣ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಹೀನಾಯ ಮಾನವಾಗಿ ಬೈಯುವುದನ್ನೇ ರಾಜಕೀಯ ಅನುಭವ ಎಂದುಕೊಂಡಿದ್ದ ಪ್ರಸಾದ್‌ಗೆ ಪಾಠ ಕಲಿಸಿದ್ದಾರೆ ಎಂದು ರಾಜಕೀಯ ನಾಯಕರು ಹೇಳುತ್ತಾರೆ.
Related Articles
Advertisement
ಜತೆಗೆ ಹಿರಿಯ ನಾಯಕನಾದ ನನ್ನ ಬಳಿಗೆ ಮತದಾರರು ಬರಬೇಕು ಎಂಬ ಅವರ ಸ್ವಾಭಿಮಾನ ದೊಡ್ಡ ಪೆಟ್ಟು ನೀಡಿತು. ಜತೆಗೆ ಈ ಉಪ ಚುನಾವಣೆಯಲ್ಲಿ ಗೆದ್ದರೆ ಯಡಿಯೂರಪ್ಪ ನಾಯಕತ್ವ ಮತ್ತಷ್ಟು ಬಲಗೊಳ್ಳುತ್ತದೆ ಎಂಬ ಕಾರಣಕ್ಕೆ ಅವರ ವಿರೋಧಿ ಗುಂಪು ನೀಡಿದ ಒಳ ಏಟುಗಳೂ ಕೂಡ ಭಾರೀ ಅಂತರದ ಸೋಲಿಗೆ ಕಾರಣ ಎಂದು ವಿಶ್ಲೇಷಿಸ ಲಾಗುತ್ತಿದೆ.
ಇದಕ್ಕೆ ಪ್ರತಿಯಾಗಿ ಕಳಲೆ ಕೇಶವಮೂರ್ತಿ ಯನ್ನು ಕಾಂಗ್ರೆಸ್‌ಗೆ ಕರೆತಂದು ಅಭ್ಯರ್ಥಿಯಾಗಿಸು ವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಸದ ಆರ್. ಧ್ರುವನಾರಾಯಣ ತಮ್ಮ ಪಕ್ಷದ ಅಭ್ಯರ್ಥಿಗಳ ಜತೆಗೆ ಹಳ್ಳಿ ಹಳ್ಳಿ ತಿರುಗಿದರು. ಅಭ್ಯರ್ಥಿ ಆಯ್ಕೆ ಬಗ್ಗೆ ಆರಂಭದಲ್ಲಿ ಅಸಮಾ ಧಾನಗೊಂಡಿದ್ದ ಸಚಿವ ಎಚ್.ಸಿ.ಮಹದೇವಪ್ಪ ಕೂಡ ನಂತರದ ದಿನಗಳಲ್ಲಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದರು.
ಅಂತಿಮ ವಾಗಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ 8 ದಿನಗಳ ಕಾಲ ಮೈಸೂರಲ್ಲಿ ಠಿಕಾಣಿ ಹೂಡಿ ಚುನಾವಣಾ ರಣತಂತ್ರ ರೂಪಿಸಿದ್ದಲ್ಲದೆ, ಕ್ಷೇತ್ರದಲ್ಲಿ ನಾಲ್ಕುದಿನಗಳ ಕಾಲ ರೋಡ್ ಶೋ ನಡೆಸಿ, ಯಾರ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡದೆ ನಾಲ್ಕು ವರ್ಷಗಳ ನಮ್ಮ ಕೆಲಸಕ್ಕೆ ಕೂಲಿ ಕೊಡಿ ಎಂದು ಮತಯಾಚನೆ ಮಾಡಿದ್ದು ಅಂತಿಮವಾಗಿ ಫಲ ನೀಡಿದೆ.
ಹಾಗೆ ನೋಡಿದರೆ ಕ್ಷೇತ್ರ ಪುರ್ನವಿಂಗಡಣೆ ನಡೆದ ಪ.ಜಾತಿ ಮೀಸಲು ಕ್ಷೇತ್ರವಾದ ನಂಜನಗೂಡು ಕ್ಷೇತ್ರಕ್ಕೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿತ್ತು. 2013ರ ಚುನಾವಣೆಯ ವೇಳೆಗೆ ಬಿಜೆಪಿ ಒಡೆದ ಮನೆಯಾಗಿ ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಆದ ಹಿನ್ನೆಲೆ ಈ ಒಡಕಿನ ಲಾಭ ಪಡೆದ ಕಳಲೆ ಕೇಶವಮೂರ್ತಿ ಜೆಡಿಎಸ್ ಅಭ್ಯರ್ಥಿಯಾಗಿ 8941 ಮತಗಳ ಅಂತರದಿಂದ ಪ್ರಸಾದ್ ವಿರುದ್ಧ ಸೋಲು ಕಂಡಿದ್ದರು.
ಮಾಜಿ ಸಚಿವ ಡಿ.ಟಿ.ಜಯಕುಮಾರ್ ನಿಧನಾನಂತರ ಕ್ಷೇತ್ರದಲ್ಲಿ ಮುಂಚೂಣಿಗೆ ಬಂದಿದ್ದ ಕಳಲೆ ಕೇಶವಮೂರ್ತಿ ತಮ್ಮ ಸರಳತೆ, ಎಲ್ಲರೊಂದಿಗೆ ಬೆರೆಯುವ ಗುಣದಿಂದಾಗಿ ಜನರಿಗೆ ಹತ್ತಿರವಾಗಿದ್ದರು. ಎರಡು ಬಾರಿ ಪ್ರಸಾದ್ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದರು. ಆ ಅನುಕಂಪವೂ ಈ ಚುನಾವಣೆಯಲ್ಲಿ ಕೆಲಸ ಮಾಡಿದೆ.
ಜತೆಗೆ ಶ್ರೀನಿವಾಸಪ್ರಸಾದ್ ರಾಜೀನಾಮೆ ನೀಡಿದ ಬೆನ್ನಲ್ಲೇ ಉಪ ಚುನಾವಣೆಯನ್ನು ದೃಷ್ಟಿ ಯಲ್ಲಿಟ್ಟುಕೊಂಡು ಇಡೀ ರಾಜ್ಯದಲ್ಲಿ ನಂಜನಗೂಡನ್ನು ಪೈಲಟ್ ಯೋಜನೆಯನ್ನಾಗಿ ತೆಗೆದುಕೊಂಡು ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಕ್ಷೇತ್ರದ 20 ಸಾವಿರ ಜನರಿಗೆ ಸಬ್ಸಿಡಿ ಸಾಲ ನೀಡಲಾಯಿತು.
ಜತೆಗೆ ಪಟ್ಟಣದಲ್ಲಿ 125 ಕೋಟಿ ರೂ. ಸೇರಿದಂತೆ ಕ್ಷೇತ್ರಾದ್ಯಂತ 600 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿ ನಂಜನಗೂಡಿನ ಅಭಿವೃದ್ಧಿ ಪರ್ವ ಆರಂಭವಾಯಿತು ಎಂದು ಜನತೆಗೆ ಮನವರಿಕೆ ಮಾಡಿಕೊಡುವಲ್ಲಿ ಕಾಂಗ್ರೆಸ್ ನಾಯಕರು ಸಫಲರಾಗಿದ್ದು, ಈ ಚುನಾವಣೆ ಗೆಲುವಿಗೆ ಕಾರಣ ಎನ್ನಲಾಗುತ್ತಿದೆ. ಜತೆಗೆ ಮಾಜಿ ಸಚಿವ ದಿ.ಎಂ.ಮಹದೇವು ಜತೆಗೆ ಹೊಂದಿದ್ದ ಹಗೆತನದ ಕಾರಣ ಕೂಡ ಶ್ರೀನಿವಾಸಪ್ರಸಾದ್ ಸೋಲಿನಲ್ಲಿ ಪಾತ್ರವಹಿಸಿದೆ ಎನ್ನುತ್ತಾರೆ.
* ಗಿರೀಶ್ ಹುಣಸೂರು