ಬೆಂಗಳೂರು: ರಾಜ್ಯದ ನಂದಿತಾ ನಾಡಗೌಡರ್ ಎಂಬ ಮಹಿಳೆ ಆಸ್ಟ್ರೇಲಿಯಾ ಖಂಡದ ಅತಿ ಎತ್ತರದ “ಕಾರ್ಸ್‌ಟೆನ್ಜ್ ಪಿರಮಿಡ್’ ಪರ್ವತ ಏರಿದ ವಿಶ್ವದ ಮೊಟ್ಟ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಸುಮಾರು 17,800 ಅಡಿ ಎತ್ತರದ ಕಾರ್ಸ್‌ಟೆನ್ಜ್ ಪಿರಮಿಡ್ ಕಡಿದಾದ ಬಂಡೆಗಳೊಂದಿಗೆ ದುರ್ಗಮ ಹಾದಿಯಿಂದ ಕೂಡಿದ್ದು, ವಾತಾವರಣ ಮೈನಸ್ 3ರಿಂದ 10 ಡಿಗ್ರಿಯಷ್ಟಿರುತ್ತದೆ. ಸತತ 25 ದಿನಗಳ ಪ್ರಯತ್ನದ ಮೂಲಕ ನಂದಿತಾ ನಾಡಗೌಡರ್ ಪರ್ವತದ ದಕ್ಷಿಣ ದ್ರು ತಲುಪಿದ್ದಾರೆ. ನಂದಿತಾ ಕಳೆದ ವರ್ಷವಷ್ಟೇ ಹಿಮಾಲಯ ಪರ್ವತ ಏರಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಮ್ಮ ಪರ್ವತಾರೋಹಣದ ಕುರಿತು ಮಾಹಿತಿ ನೀಡಿದ ನಂದಿತಾ, ಆಸ್ಟ್ರೇಲಿಯಾ ಖಂಡದ ಎತ್ತರ ಪ್ರದೇಶ “ಕಾರ್ಸ್‌ಟೆನ್ಜ್ ಪಿರಮಿಡ್’ ಏರಿದ ಮೊದಲ ಮಹಿಳೆ ಎಂಬುದು ಅತ್ಯಂತ ಹೆಮ್ಮೆಯ ವಿಚಾರ. ಪ್ರವಾಸದ ಪ್ರತಿ ಹೆಜ್ಜೆಯೂ ಸಾವಿನ ಅಂಚಿನ ಹಾದಿಯಾಗಿತ್ತು. ರೋಪ್ ವೇನಲ್ಲಿ ನಡೆಯುವಾಗಲಂತೂ ಸಾಕಷ್ಟು ಆತಂಕದ ಕ್ಷಣ ಎದುರಾಗಿತ್ತು ಎಂದು ಹೇಳಿದರು.
ಕಳೆದ ವರ್ಷ ಏಷ್ಯಾ ಖಂಡದ ಹಿಮಾಲಯ ಪರ್ವತ ಏರಿದ್ದೆ. ಈ ಬಾರಿ ಆಸ್ಟ್ರೇಲಿಯಾ ಖಂಡದ ಕಾರ್ಸ್‌ಟೆನ್ಜ್ ಪಿರಮಿಡ್ ಹತ್ತಿದ್ದೇನೆ. ಮುಂದಿನ ವರ್ಷ ಅಂಟಾರ್ಟಿಕಾ ಖಂಡದ ಅತಿ ಎತ್ತರದ ಪರ್ವತ ಪರ್ವತ ಏರುವ ಗುರಿ ಹೊಂದಿದ್ದೇನೆ ಎಂದು ಹೇಳಿದರು.
ನಂದಿತಾ ಅವರನ್ನು ಪ್ರೋತ್ಸಾಹಿಸಿ ಮಾತನಾಡಿದ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ವಿನಯ್ ಕುಲಕರ್ಣಿ, ಇದೇ ಮೊದಲ ಬಾರಿಗೆ ರಾಜ್ಯದ ಮಹಿಳೆಯೊಬ್ಬರು ಆಸ್ಟ್ರೇಲಿಯಾ ಪರ್ವತ ಏರಿ ಸಾಹಸ ಮೆರೆದಿರುವುದು ಹೆಮ್ಮೆಯ ವಿಷಯ. ಫಾರ್ಮುಲಾ ಒನ್‌ಗಿಂತಲೂ ಕಷ್ಟಕರವಾದ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿರುವ ನಂದಿತಾ ದಿಟ್ಟತನ ಪ್ರದರ್ಶಿಸಿದ್ದಾರೆ.
ಇವರಿಗೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆಗೆ ಸಲಹೆ ನೀಡಿದ್ದೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ನಂದಿತಾ ಜತೆಗಿನ ಮತ್ತೂಬ್ಬ ಪರ್ವತಾರೋಹಿ ಪಶ್ಚಿಮ ಬಂಗಾಳದ ಸತ್ಯರೂಪ್ ಸಿದ್ಧಾಂತ್ ಉಪಸ್ಥಿತರಿದ್ದರು.